‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು. ಪಿ.ಲಂಕೇಶ್ ಜೊತೆಗೂಡಿ ʼರೂಪಕ ಲೇಖಕರುʼ ಕೃತಿ ರಚಿಸಿದ ಲೇಖಕ ಎಸ್.ಎಫ್.ಯೋಗಪ್ಪನವರ್ ಅವರ ಈ ಕೃತಿಯ ಕರ್ತೃ. ಓದು, ಪ್ರಾಮಾಣಿಕತೆ, ಸ್ಪಷ್ಟ ನಿಲುವುಗಳು ಎಂಥ ವ್ಯಕ್ತಿಯನ್ನು ರೂಪಿಸಬಲ್ಲವು ಎನ್ನುವುದಕ್ಕೆ ಲಂಕೇಶ್ ಸಾಕ್ಷಿಯಾಗಿದ್ದರು. ಅವರ ಪ್ರತಿಭೆ ಉರಿವ ನಿಷ್ಠುರತೆಯಲ್ಲಿ ರೂಪಗೊಂಡಿತ್ತು. ಜಾಗೃತಾವಸ್ಥೆ ನುರಿತ ಬೇಟೆಗಾರನ ಕಣ್ಣುಗಳಂತಿತ್ತು. ಅನುಕಂಪ ಬುದ್ಧನ ಚಂದ್ರ ನೆಲೆ ನಿಂತ ಸೂಚನೆ ಕೊಟ್ಟಿತ್ತು. ಕನ್ನಡದ ಹೆಸರಾಂತ ಚಿಂತಕ ಡಿ. ಆರ್. ನಾಗರಾಜ ‘ಲಂಕೇಶ್ ಶತಮಾನದ ಪ್ರತಿಭೆ’ ಎಂದು ಕರೆದು ಆಖೈರುಗೊಳಿಸಿ ಹೋಗಿದ್ದಾರೆ. ಲಂಕೇಶ್ ಪ್ರಜ್ಞೆ ಮತ್ತು ಭಾಷೆಯ ಅಭ್ಯಾಸಕ್ಕೆ ನಡೆದಷ್ಟು ಹಾದಿ ಇದೆ. ಸಾವಿಗೆ ಮುಖಾಮುಖಿಯಾದ ಸೃಜನಶೀಲತೆಗೆ ಎಲ್ಲಾ ದಿಕ್ಕುಗಳು ಹಾದಿಯಾಗುತ್ತವೆ. ಲಂಕೇಶ್ ವಿಭಿನ್ನ ವಿಷಯಗಳ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಪ್ರಕೃತಿಯ ಚಿತ್ತದಂತೆ ಅಲ್ಲಿ ಎಲ್ಲ ಲೀಲೆಗಳೂ ಒಳಗೊಂಡಿವೆ. ಅಲ್ಲದೇ, ಲಂಕೇಶ್ ಅಪಾರ ಸಂಖ್ಯೆಯಲ್ಲಿ ನೀಲು ಪದ್ಯಗಳನ್ನು ಬರೆದಿದ್ದಾರೆ. ತಮ್ಮ ಆತ್ಮಚರಿತ್ರೆಗೆ ‘ಹುಳಿ ಮಾವಿನ ಮರ’ ಎಂದು ಹೆಸರಿಟ್ಟಿದ್ದಾರೆ. ಈ ನೀಲು ಪದ್ಯಗಳು ಹುಳಿಮಾವಿನ ಮರದ ಮಿಡಿಗಳಾಗಿವೆ. ಇವು ತಮ್ಮದೇ ಅಸ್ತಿತ್ವ ಹೊಂದಿದ ಕನ್ನಡದ ಮಿಡಿ ಪದ್ಯಗಳೆಂದು ಕರೆಯಲು ಸಂತೋಷವೆನಿಸುತ್ತದೆ. ಇವುಗಳು ಕೂಡ ಹುಳಿಮಾವಿನ ಮರದ ಗುಣಸ್ವಭಾವಗಳನ್ನು ಹೊಂದಿವೆ. ಜಪಾನಿನ ಹೈಕು ಪದ್ಯಗಳ ಆಂತರಿಕ ಆಶಯಗಳನ್ನು ಹೊತ್ತಿವೆ. ಪ್ರೀತಿ, ಅನುಕಂಪ, ಧ್ಯಾನ, ಚಿಂತನೆ ಈ ಪದ್ಯಗಳ ಮಿಡಿತಗಳಾಗಿವೆ. ಈ ಪದ್ಯಗಳನ್ನು ಓದುವವರ ದೊಡ್ಡ ಬಳಗವಿದೆ. ಕನ್ನಡದ ಜಾಣ ಜಾಣೆಯರ ಜೊತೆ ಸಲುಗೆ ಬೆಳೆದಿದೆ. ಕೆಲವರು ನೀಲು ಪದ್ಯಗಳು ಲೈಂಗಿಕ ತುಣುಕುಗಳೆಂದು ಭಾವಿಸಿದ್ದಾರೆ. ಆದರೆ, ಈ ಪದ್ಯಗಳ ಗಾಂಭೀರ್ಯ ಹಾಗು ಒಳನೋಟಗಳು ದರ್ಶನಗಳಿಂದ ತುಂಬಿವೆ. ಅವು ಅರಿವಿನ ದನಿಗಳಾಗಿವೆ. ಬೆಳಕಿನ ಎಳೆಗಳಾಗಿವೆ. ಶಬ್ದಗಳ ಮಧ್ಯದ ಮೌನ; ಮಾತಿಗೆ ಹಚ್ಚುತ್ತದೆ. ಇಂತಹ ನೀಲು ಕಾವ್ಯವನ್ನು ಹೊಸದೇ ನೋಟಕ್ರಮದಿಂದ ಯೋಗಪ್ಪನವರ್ ಈ ಕೃತಿಯ 17 ಅಧ್ಯಾಯಗಳಲ್ಲಿ ವಿಶ್ಲೇಷಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಬೇಲೂರು ಗ್ರಾಮದವರಾದ ಯೋಗಪ್ಪನವರ್ ಕೆ.ಎ.ಎಸ್. ಅಧಿಕಾರಿಯಾಗಿ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ', 'ಪ್ರೀತಿ ಎಂಬುದು ಚಂದ್ರನ ದಯೆ', 'ಶೋಧ' ಎಂಬ ಕಾದಂಬರಿಗಳನ್ನು, 'ಆರಾಮ ಕುರ್ಚಿ ಮತ್ತು ಇತರ ಕತೆಗಳು', 'ಮೂಟೇಶನ್' ಕಥಾ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. 'ಮಾಯಾ ಕನ್ನಡಿ-ಚಾರ್ಲ್ಸ್ ಬೋದಿಲೇರ್‌ನ ಐವತ್ತು ಗದ್ಯ ಕವಿತೆಗಳು', ಜೆ.ಡಿ. ಸಾಲಿಂಜರ್‌ನ ಕಾದಂಬರಿ 'ಹದಿಹರೆಯದ ಒಬ್ಬಂಟಿ ಪಯಣ' ಅವರ ಅನುವಾದಿತ ಪುಸ್ತಕಗಳು. ...
READ MORE