ವಿಮರ್ಶಕ ಜಿ.ಎಸ್. ಆಮೂರ ಅವರ ವಿಮರ್ಶೆ ಕೃತಿ-ಸಾತ್ವಿಕ ಪಥ. ಕವಿ ಜಿ.ಎಸ್. ಶಿವರುದ್ರಪ್ಪ ಅವರು ಕೃತಿಯ ಕುರಿತು ‘ವ್ಯಾಪಕ ಅಧ್ಯಯನಗಳಿಂದ ಪ್ರಾಪ್ತವಾದ ವಿದ್ವತ್ತು, ಬಹುಭಾಷಾ ಸಾಹಿತ್ಯಗಳ ಸತ್ವದಿಂದ ಶ್ರೀಮಂತಗೊಂಡ ಸ್ಮರಣೆ, ವಿವಿಧ ಸಾಹಿತ್ಯ ಪ್ರಕಾರಗಳನ್ನು ತಮ್ಮ ಚಿಂತನೆಯ ಕೇಂದ್ರಕ್ಕೆ ತಂದುಕೊಳ್ಳುವ ಕಾಳಜಿಗಳು, ಯಾವುದೇ ಸೀಮಿತಗಳಲ್ಲಿ ಕಟ್ಟುಗೊಳ್ಳದೇ ತಮ್ಮ ರಸಜ್ಞತೆಯನ್ನೂ ಮತ್ತು ವಿವೇಚನೆಯನ್ನೂ ಕಾಯ್ದುಕೊಳ್ಳುವ ಎಚ್ಚರ, ಸಾಹಿತ್ಯ ಪರಂಪರೆಯನ್ನು ಅದರ ಚಾರಿತ್ರಿಕ ಕಾಲಮಾನಗಳ ಸಮೇತ ಇಡಿಯಾಗಿ ಗ್ರಹಿಸಬಲ್ಲ ಪರಿಣಿತ, ಸಾಹಿತ್ಯ ಕೃತಿಗಳ ಚರ್ಚೆಯನ್ನು ಅನ್ವೇಷಕ ಪರವಾದ ಒಂದು ಬೌದ್ಧಿಕ ಸಂವಾದ ಎಂಬಂತೆ ನಿರ್ವಹಿಸುವ ಕೌಶಲ-ಇತ್ಯಾದಿ ಲಕ್ಷಣಗಳಿಂದ ಡಾ. ಆಮೂರರ ಬರಹಗಳು ಏಕಕಾಲಕ್ಕೆ ಸಾಹಿತ್ಯ ಚರಿತ್ರೆ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯ ಅಪೂರ್ವ ಸಮ್ಮೇಳನದಿಂದ ನಿಷ್ಪನ್ನವಾಗುವ ಹೊಸ ಸಂಗತಿಗಳನ್ನು, ಹೊಳವುಗಳನ್ನು, ಒಳನೋಟಗಳನ್ನು ಪ್ರಕಟಿಸಿತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...
READ MORE