ಬಯಲ ಬಾಗಿಲು- ಕಾನಕಾನಳ್ಳಿ ಶಿವಮಾಧು ಅವರ ವಿಮರ್ಶಾ ಲೇಖನಗಳ ಸಂಕಲನ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡು ಬಂದಿರುವ ಶಿವಮಾಧು ಅವರ ಚಿಂತನೆಗಳು ಬಯಲ ಬಾಗಿಲು ವಿಮರ್ಶಾ ಲೇಖನಗಳ ಮೂಲಕ ಪ್ರಕಟಗೊಂಡಿವೆ. ಕಾನಕಾನಳ್ಳಿ ಶಿವಮಾಧು ಕವಿ, ಕತೆಗಾರರು, ವಿಮರ್ಶಕರಾಗಿ, ಕನ್ನಡ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊಸತಲೆಮಾರಿನ ಯುವಜನರ, ಸಾಹಿತ್ಯದ ಅಭಿರುಚಿ ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಸಾಹಿತ್ಯ ಕೃಷಿಯಲ್ಲಿ ಭರವಸೆಯ ಹೆಜ್ಜೆಯಿಡುತ್ತಾ ತಮ್ಮ ಮೊದಲ ಬಯಲ ಬಾಗಿಲು ಎಂಬ ವಿಮರ್ಶಾ ಕೃತಿಯನ್ನು ಪ್ರಕಟಿಸಿದ್ದಾರೆ.
ಬಯಲ ಬಾಗಿಲು 9 ವಿಮರ್ಶಾ ಲೇಖಗಳನ್ನು ಒಳಗೊಂಡಿರುವ ಕೃತಿ. ಇಲ್ಲಿನ ಅನೇಕ ಲೇಖನಗಳು ಕನ್ನಡ ಕಾವ್ಯ ಮತ್ತು ಅದರ ವಿವಿಧ ಆಯಾಮಗಳನ್ನು ಕುರಿತು ಚರ್ಚೆ ಮಾಡುತ್ತವೆ. ಲೇಖಕರು ಕನ್ನಡ ಕಾವ್ಯ ಮತ್ತು ಅದರ ಆತ್ಮ, ಮೀಮಾಂಸೆ, ಬಿಕ್ಕಟ್ಟು ಅಥವಾ ತಲ್ಲಣಗಳನ್ನು ಸಮಕಾಲೀನ ಸಂದರ್ಭದ ಕಾವ್ಯಗಳ ಮೂಲಕ ಹೇಗೆ ಭಿನ್ನವಾಗಿ ರಚನೆಗೊಂಡಿವೆ ಎಂಬುದನ್ನು ಗಂಭೀರವಾಗಿ ಅವಲೋಕಿಸಿದ್ದಾರೆ. ‘ಹೊಸ ತಲೆಮಾರು’: ಹಲವು ತಲ್ಲಣಗಳ ನಡುವೆ, ಯುವ ಕಾವ್ಯ ಮೀಮಾಂಸೆ ಮತ್ತು ಸಮಕಾಲೀನತೆ. ಪ್ರಭತ್ವಕ್ಕೊಂದು ಪ್ರತಿಕ್ರಿಯೆ ಈ ಲೇಖನಗಳು ಪ್ರಸ್ತುತ ಸಂದರ್ಭದ ಸಮಸ್ಯೆಗಳಾದ ಬಂಡವಾಳಶಾಹಿ, ಜಾಗತೀಕರಣ, ಆಧುನಿಕತೆಗಳ ಅವಾಂತರಗಳನ್ನು ನೂತನ ಚಿಂತ ಕ್ರಮದ ಮೂಲಕ ವಿಶ್ಲೇಷಿಸುವ ಪ್ರಯತ್ನವಾಗಿದೆ.
ಕಾನಕಾನಳ್ಳಿ ಶಿವಾಮಾಧು ಅವರು 20-01-1991ರಂದು ಜನಿಸಿದರು, ಊರು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳೆಬೇಕುಪ್ಪೆ ಗ್ರಾಮ. ತಂದೆ ಮಹಾದೇವಯ್ಯ, ತಾಯಿ- ಗೌರಮ್ಮ, ಬೇಸಾಯದ ಕುಟುಂಬದಲ್ಲಿ ಹುಟ್ಟಿದ ಶಿವಮಾಧು ಓದು, ಸಾಹಿತ್ಯದ ಅರಿವಿನಲ್ಲಿ ಮೊದಲಿನಿಂದಲೂ ಮುಂದು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ.ಪದವಿಗಳಿಸಿರುವ ಅವರು ಹಂಪಿ ವಿಶ್ವವಿದ್ಯಾಲಯದಲ್ಲಿ ಶಾಸನಶಾಸ್ತ್ರದಲ್ಲಿ ಡಿಪ್ಲೊಮಾ ಮುಗಿಸಿದ್ದಾರೆ, ಜೊತೆಗೆ ಜಾನಪದ ವಿಶ್ವವಿದ್ಯಾಲಯದಲ್ಲಿ ಡಿಪ್ಲೊಮಾ ಇನ್ ಜಾನಪದ ಅಧ್ಯಯನವನ್ನು ಮಾಡಿದ್ದಾರೆ. ಸಾಹಿತ್ಯದ ವಿದ್ಯಾರ್ಥಿಯಾಗಿ ಓದು, ಬರಹವನ್ನು ತಮ್ಮ ಹವ್ಯಾಸವಾಗಿಸಿಕೊಂಡಿರುವ ಶಿವಮಾಧು ‘ಬಯಲ ಬಾಗಿಲು’ ಎಂಬ ವಿಮರ್ಶಾ ಲೇಖನಗಳ ಸಂಕಲನ ರಚಿಸಿದ್ದಾರೆ. ...
READ MORE