ಕುವೆಂಪು ದರ್ಶನ ಮೀಮಾಂಸೆ

Author : ನರಹಳ್ಳಿ ಬಾಲಸುಬ್ರಹ್ಮಣ್ಯ

Pages 106

₹ 100.00




Year of Publication: 2019
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಕುವೆಂಪು ಅವರ ವಿಚಾರ, ವಿಮರ್ಶೆ, ಮೀಮಾಂಸೆ ಕುರಿತು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಪ್ರಕಟಿಸಿದ ಕೃತಿ ’ಕುವೆಂಪು ದರ್ಶನ ಮೀಮಾಂಸೆ’. ಕುವೆಂಪು ಕುರಿತು ನರಹಳ್ಳಿ ಅವರು ಬರೆದಿರುವುದು ಇದೇ ಮೊದಲಲ್ಲ. ’ಕುವೆಂಪು ಕಥನ ಕೌತುಕ’ ಕೃತಿ ಮೂಲಕ ಈಗಾಗಲೇ ಅವರು ರಸರ್ಷಿಯ ಸೃಜನಶೀಲತೆಯನ್ನು ವಿಶ್ಲೇಷಿಸಿದ್ದಾರೆ.

‘ನಿರಂಕುಶಮತಿ’. ‘ಭೂಮಿಯಲಿ ಬೇರೂರಿ ಬಾನೆಡೆಗೆ ತಲೆಯೆತ್ತಿ’, ‘ಸಾಂಸ್ಕೃತಿಕ ಕರ್ನಾಟಕ’, ‘ನಿನ್ನೊಳಿಹ ಕಲೆಗೆ ಶಕ್ತಿಯಿದ”, ‘ನಾಲ್ಪೇ ಸುಖಮಸ್ತಿ’, ‘ಕಾವ್ಯಸೃಷ್ಟಿಯ ನಿಗೂಢತೆ’, ‘ದರ್ಶನ ಮೀಮಾಂಸೆ’ ಎಂಬ ಅಧ್ಯಾಯಗಳ ಮೂಲಕ ಕುವೆಂಪು ಅವರ ಸೃಜನೇತರ ಸಾಹಿತ್ಯವನ್ನು ವಿಮರ್ಶಿಸಲಾಗಿದೆ. 

ಮೊದಲನೆಯ ಅಧ್ಯಾಯ ಕುವೆಂಪು ಅವರ ವೈಚಾರಿಕ ನಿಲುವುಗಳನ್ನು ವಿಶಿಷ್ಟವಾಗಿ ಪರಿಚಯಿಸುತ್ತದೆ. ಎರಡನೇ ಅಧ್ಯಾಯದಲ್ಲಿ ಶಿಕ್ಷಣ ಕ್ಷೇತ್ರದ ವಿದ್ಯಮಾನಗಳ ಚರ್ಚೆ ಇದೆ. ಮೂರನೇ ಅಧ್ಯಾಯ ಕರ್ನಾಟಕದ ಸಂಸ್ಕೃತಿ ಕುರಿತು ಕುವೆಂಪು ಅವರಿಗಿದ್ದ ಹಿರಿಮೆಯನ್ನು ತಿಳಿಸಿಕೊಡುತ್ತದೆ. ನಾಲ್ಕನೇ ಅಧ್ಯಾಯ ಕುವೆಂಪು ಅವರು ಕಾವ್ಯದ ಬಗ್ಗೆ ಹೊಂದಿದ್ದ ನಿಲುವುಗಳನ್ನು ತೆರೆದಿಡುತ್ತದೆ. ಐದನೇ ಅಧ್ಯಾಯ ಕುವೆಂಪು ಅವರ ಹಳಗನ್ನಡ ಪ್ರೀತಿ ಕುರಿತಾದದ್ದು. ಆರನೇ ಅಧ್ಯಾಯ ಕಾವ್ಯ ಹುಟ್ಟುವ ವಿಸ್ಮಯವನ್ನು ಧ್ಯಾನಿಸುತ್ತದೆ. ಕೊನೆಯ ಅಧ್ಯಾಯದಲ್ಲಿ ಕುವೆಂಪು ಅವರ ಸಾಹಿತ್ಯ ಚಿಂತನೆಯ ದರ್ಶನ ಇದೆ. 

About the Author

ನರಹಳ್ಳಿ ಬಾಲಸುಬ್ರಹ್ಮಣ್ಯ
(05 September 1953)

ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಮಂಡ್ಯ ಜಿಲ್ಲೆಯ ನರಹಳ್ಳಿಯಲ್ಲಿ1953 ಸೆಪ್ಟೆಂಬರ್ 5ರಂದು ಜನಿಸಿದರು. 1973ರಲ್ಲಿ ಬಿ.ಎ. (ಆನರ್), 1975ರಲ್ಲಿ ಎಂ.ಎ. ಪದವಿಗಳನ್ನು ಪ್ರಥಮ ಬ್ಯಾಂಕ್, ಚಿನ್ನದ ಪದಕಗಳೊಂದಿಗೆ ಪಡೆದ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ರಾಜ್ಯಪ್ರಶಸ್ತಿ ಮನ್ನಣೆ ಗಳಿಸಿದ್ದರು. ಭಾರತ ಸರ್ಕಾರದ ಪ್ರತಿಭಾ ವಿದ್ಯಾರ್ಥಿವೇತನ ಪಡೆದವರು. 1992ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ.  ಪಡೆದಿರುವ ನರಹಳ್ಳಿಯವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. 'ಅನುಸಂಧಾನ', 'ನವ್ಯತೆ', 'ಇಹದ ಪರಿಮಳದ ಹಾದಿ', 'ಸಾಹಿತ್ಯ ಸಂಸ್ಕೃತಿ', “ಕುವೆಂಪು ನಾಟಕಗಳ ಅಧ್ಯಯನ', ...

READ MORE

Reviews

ಕುವೆಂಪು ಚಿಂತನೆಗಳ ಒಳನೋಟ

 

ಪುಸ್ತಕ: ಕುವೆಂಪು ದರ್ಶನ ಮೀಮಾಂಸೆ

ಕುವೆಂಪು ಆರೇಳು ದಶಕಗಳ ಹಿಂದೆ ಪ್ರತಿಪಾದಿಸಿದ್ದ ತತ್ವಗಳನ್ನು ಸಮಕಾಲೀನ‌ ಕನ್ನಡಿಯೊಳಗಿಟ್ಟು ನೋಡುವ ಕೃತಿಯೇ ಕುವೆಂಪು ದರ್ಶನ ಮೀಮಾಂಸೆ. ‘ಪ್ರಗತಿ, ಉದ್ಧಾರ, ಧ್ಯೇಯ ಸಿದ್ಧಿ, ಕಲ್ಪಿಸಿದಂತೆ ವಾಸ್ತವಾಗುವುದು ಇಲ್ಲ. ಸಂಕಲ್ಪಿಸಿದ ರೀತಿಯಲ್ಲಿ ಕೈಗೂಡುವುದಿಲ್ಲ. ಪ್ರಪಂಚದ ಮಾನಸ ಶಕ್ತಿಗಳ ಸಂಘರ್ಷಣೆಯ ಫಲರೂಪವಾಗಿ ಅನಿರೀಕ್ಷಿತಗಳು ಬಂದೊಗುತ್ತವೆ. ನಮ್ಮ ಪಯಣದ ದಾರಿ ಮಾತ್ರವಲ್ಲದೆ ದಿಕ್ಕೂ ಬದಲಾಗಿ ಬಿಡುತ್ತದೆ. ನಮ್ಮ ದೇಶದಲ್ಲಿಯೂ ಆದದ್ದು ಬೇರೆ’ ಎಂದು ಕುವೆಂಪು ಅವರ ಮಾತುಗಳನ್ನು ಉಲ್ಲೇಖಿಸುವ ಲೇಖಕರು ‌ ಸಮಕಾಲೀನ ತಲ್ಲಣಗಳನ್ನು ಉದಾಹರಣೆಯಾಗಿ ನೀಡುತ್ತಾರೆ. ಪುಸ್ತಕದುದ್ದಕ್ಕೂ ಕುವೆಂಪು ಅವರು ಪ್ರತಿಪಾದಿಸಿದ್ದ ಆಶಯಗಳು ಮತ್ತು ಸದ್ಯದ ಪರಿಸ್ಥಿತಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಯೋಚನೆಗಳ ಮುಖಾಮುಖಿಯನ್ನು ಕಾಣಬ ಹುದು. ಇಲ್ಲಿ ವಿಚಾರಗಳಷ್ಟೆ ಅಲ್ಲದೇ ಕುವೆಂಪು ಅವರ ಕಾವ್ಯ ಮತ್ತು ಕಾವ್ಯದೆಡೆಗೆ ಕುವೆಂಪು ಹೊಂದಿದ್ದ, ದೃಷ್ಟಿಕೋನವನ್ನು ವಿಷದಪಡಿಸಲಾಗಿದೆ. ಕುವೆಂಪು ಕಾವ್ಯಸೃಷ್ಟಿಯ ಬಗೆಗಿನ ಕುತೂಹಲ ಇರುವವರ ಅಧ್ಯಯನಕ್ಕೆ ಇಲ್ಲಿನ ಚರ್ಚೆ ಪೂರಕ. ಮೌಢ್ಯ ಮತ್ತು ವಿಚಾರವಾದವೆನ್ನುವುದು ಮನುಷ್ಯನಲ್ಲಿ ಹೇಗೆ ವಿರೋಧಭಾಸವನ್ನು ಹುಟ್ಟುಹಾಕಿದೆ ಎಂಬುದನ್ನು ಕೌತುಕದ ನೆಲೆಯಲ್ಲಿಯೂ ವಿಶ್ಲೇಷಿಸಿರುವುದು ಈ ಪುಸ್ತಕದ ಅಗ್ಗಳಿಕೆ. ಕುವೆಂಪು ಸಾಹಿತ್ಯ ಓದಿಗೆ ಈ ಪುಸ್ತಕವನ್ನು ಪ್ರವೇಶಿಕೆಯಂತೆ ಭಾವಿಸಲು ಅಡ್ಡಿಯಿಲ್ಲ. ……

ಪ್ರಜಾವಾಣಿ

https://www.prajavani.net/artculture/book-review/pustaka-vimarse-647658.html

Related Books