ಕವಿ ದ. ರಾ ಬೇಂದ್ರೆಯವರ ಕಾವ್ಯದಲ್ಲಿ ಪ್ರೇಮದ ಆವಿಷ್ಕಾರ ಸ್ವರೂಪಗಳು ಎಂಬ ಕೃತಿಯನ್ನು ಬಸವರಾಜ ಕಲ್ಗುಡಿಯವರು ಹೊರತಂದಿದ್ದಾರೆ. ಸವ್ಯಸಾಚಿ, ಸಾಂಸ್ಕೃತಿಕ ಚರಿತ್ರೆ ಹಾಗೂ ಶಾಸನ ಶಾಸ್ತ್ರಗಳ ವಿದ್ಯಾರ್ಥಿಯಾದ ಇವರು ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಗಳೆರಡರಲ್ಲೂ ಕಾರ್ಯನಿರ್ವಹಿಸಿದ್ದಾರೆ. ಅವರ ಆಸಕ್ತಿ ಕ್ಷೇತ್ರಗಳು ಮಾಸ್ತಿಕಲ್ಲುಗಳಿಂದ ಹಿಡಿದು ಮಾಸ್ತಿಯವರ ಕಥೆಗಳವರೆಗೆ ಹರಡಿಕೊಂಡಿವೆ. ಅವರ ಅಧ್ಯಯನದ ಹಿನ್ನೆಲೆಯು ಅವರ ವಿಮರ್ಶೆಗೆ ಹೊಸ ಆಯಾಮಗಳನ್ನು ಕೊಟ್ಟಿದೆ.
ಬೇಂದ್ರೆಯವರ ಕಾವ್ಯದಲ್ಲಿ ಪ್ರೇಮವು ಆವಿಷ್ಕಾರವಾಗಿರುವ ಹಲವು ಬಗೆಗಳನ್ನು ಹುಡುಕುವ ಪ್ರಯತ್ನ ಈ ಪುಸ್ತಕದಲ್ಲಿವೆ. ಒಟ್ಟು ನವೋದಯ ಚಿಂತನೆಯ ಹಿನ್ನೆಲೆಯಲ್ಲಿ ಬೇಂದ್ರೆಯವರ ಸ್ವೋಪಜ್ಞ ನೆಲೆಗಳನ್ನು ಗುರುತಿಸಿದ್ದಾರೆ. ಬಿಡಿ ಕವಿತೆಗಳ ನೆರವು ಪಡೆದರೂ ಕೂಡಾ ಹಲವು ಕವಿತೆಗಳ ಹಿಂದೆ ಅಡಗಿರುವ ಸಮಾನ ಸಂಗತಿಗಳ ಅನ್ವೇಷಣೆಯ ಕಡೆಗೆ ಲೇಖಕರ ಒಲವಿದೆ. ಅನೇಕ ಸಮರ್ಥ ಒಳನೋಟಗಳಿಂದ ಕೂಡಿರುವ ಈ ಕೃತಿಯು ಬೇಂದ್ರೆಯವರ ಕಾವ್ಯದ ಅಧ್ಯಯನಕ್ಕೆ ತನ್ನದೇ ಆದ ಕೊಡುಗೆ ನೀಡುತ್ತದೆ.
1956ರಲ್ಲಿ ಬೆಳಗಾವಿಯಲ್ಲಿ ಜನಿಸಿದ ಬಸವರಾಜ ಕಲ್ಗುಡಿ ಅವರು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಕಾಲೇಜು ವ್ಯಾಸಂಗವು ಬೆಂಗಳೂರಿನಲ್ಲಿ ನಡೆಸಿದರು. ಎಂ.ಎ. (1975) ಪದವೀಧರರು. ‘ಅನುಭಾವ ಮತ್ತು ಸಾಂಸ್ಕೃತಿಕ ಸಮಸ್ಯೆಗಳು' ಸಂಶೋಧನಾ ಪ್ರಬಂಧಕ್ಕೆ (1983) ಪಿಎಚ್.ಡಿ. ಪದವಿ. ಕರ್ನಾಟಕದಲ್ಲಿಯ ಮಾಸ್ತಿಕಲ್ಲು ಕುರಿತಾಗಿ ಕ್ಷೇತ್ರಕಾರ್ಯ ಮಾಡಿ ಮಂಡಿಸಿದ ಮತ್ತೊಂದು ಸಂಶೋಧನೆ `ಮಹಾಸತಿ ಆಚರಣೆ'. ಅವರ ಅಧ್ಯಯನ ಶಾಸನವನ್ನು ಕುರಿತಾಗಿದ್ದರೂ, ಶಾಸನದ ಪಠ್ಯವನ್ನು ಕನ್ನಡ ಸಂಸ್ಕೃತಿಯ ಶೋಧನೆಗೆ ಪ್ರಮುಖ ಆಕರವಾಗಿ ಬಳಸಿದ್ದಾರೆ. ಸಂಸ್ಕೃತಿ ಕುರಿತಂತೆ ವ್ಯಾಖ್ಯಾನಿಸುವಲ್ಲಿ ಕಲ್ಗುಡಿಯವರು ಸಂಸ್ಕೃತಿಯಲ್ಲಿಯ ಚಲನೆಯ ಪಲ್ಲಟವನ್ನು ಸಮಗ್ರವಾಗಿ ವಿವಿಧ ನೆಲೆಗಳಿಂದ ಶೋಧಿಸುತ್ತಾರೆ. ಕಲ್ಗುಡಿಯವರು ವಚನ ಸಾಹಿತ್ಯ ಕುರಿತ ಸಂಶೋಧನಾತ್ಮಕ ಅಧ್ಯಯನದಲ್ಲಿ ವಿವಿಧ ಜ್ಞಾನಶಿಸ್ತುಗಳನ್ನು ಒಳಗೊಂಡಿದೆ. ಅವರು ವರ್ತಮಾನದ ಹಿನ್ನೆಲೆಯಿಂದ ವಚನ ಸಂಸ್ಕೃತಿಯನ್ನು ವ್ಯಾಖ್ಯಾನಿಸಿದ್ದು, ...
READ MORE