‘ನೆಲದ ಚಿತ್ರಗಳು’ ಕೃತಿಯು ಎಂ. ಜವರಾಜ್ ಅವರ ವಿಮರ್ಶಾ ಬರಹಗಳ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಜಿ.ಪಿ. ಬಸವರಾಜು ಅವರು ಹೀಗೆ ಹೇಳುತ್ತಾರೆ; ಈ ಕೃತಿಯಲ್ಲಿ ಜವರಾಜ್ ಆಯ್ಕೆ ಮಾಡಿಕೊಂಡಿರುವ ಕೃತಿಗಳೇ ಅವರ ನಿಲುವನ್ನು ಸ್ಪಷ್ಟಪಡಿಸುತ್ತವೆ. ಜವರಾಜ್ ಅವರ ಓದಿನ ಹರವು ಕೂಡಾ ಸಾಕಷ್ಟು ದೊಡ್ಡದಾಗಿಯೇ ಇರುವಂತಿದೆ. ಇಲ್ಲಿ ವಿಮರ್ಶೆಗೆ ಎತ್ತಿಕೊಂಡಿರುವ ಎಲ್ಲ ಕೃತಿಗಳನ್ನೂ ಜವರಾಜ್ ಪ್ರೀತಿಯಿಂದ, ಕಾಳಜಿಯಿಂದ ಪ್ರವೇಶಿಸಿದ್ದಾರೆ. ಹೊಸ ಬರಹಗಾರರು ತುಳಿಯುತ್ತಿರುವ ಹಾದಿಯನ್ನು ಗುರುತಿಸಲು ಇಂಥ ವಿಮರ್ಶೆಗಳು ನೆರವು ನಿಡಬೇಕು. ಹೊಸ ಬರಹಗಾರರ ಕೃತಿಗಳನ್ನು ಬೆಲೆ ಕಟ್ಟುವುದು, ಅವುಗಳ ಬಗ್ಗೆ ನಿಖರವಾದ ಅಭಿಪ್ರಾಯ ಹೇಳಿ, ಸಾಹಿತ್ಯ ವಲಯದಲ್ಲಿ ಅವುಗಳ ನಿಜವಾದ ಜಾಗವನ್ನು ಗುರುತಿಸುವುದು ಸುಲಭದ ಕೆಲಸವಲ್ಲ. ಇನ್ನು ಜವರಾಜ್ ಅವರ ವಿಮರ್ಶೆಗೆ ಇಲ್ಲಿ ಎದುರಾಗಿರುವ ಬರಹಗಾರರೆಲ್ಲ ಹೊಸ ತಲೆಮಾರಿನವರು ಮತ್ತು ಈಗಾಗಲೇ ಗಮನಾರ್ಹರೆಂದು ಹೆಸರಾದವರು. ಅವರ ಬರಹಗಳಿಗೆ ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಜಾಗವೇ ಸಿಕ್ಕಿದೆ. ಆದರೂ ಇಂಥ ಯಾವ ಸಂಗತಿಯೂ ಕೃತಿನಿಷ್ಠ ವಿಮರ್ಶೆಯ ಸಂದರ್ಭದಲ್ಲಿ ವಿನಾಯಿತಿಗೆ ಕಾರಣವಾಗುವುದಿಲ್ಲ. ಹೊಸಬರಾಗಲಿ, ಹಳಬರಾಗಲಿ, ಪ್ರಸಿದ್ಧರಾಗಲಿ, ಹೆಸರಾಗದವರಾಗಲಿ, ವಿಮರ್ಶಕ ಕೇಳಬೇಕಾದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ," ಎಂದು ತಿಳಿಸಿದ್ದಾರೆ.
ಲೇಖಕ ಎಂ. ಜವರಾಜ್ ಅವರು ಮೂಲತಃ ಟಿ.ನರಸೀಪುರದವರು. ತಂದೆ ಮಾದಯ್ಯ ತಾಯಿ ತಾಯಮ್ಮ. ಪ್ರಾಥಮಿಕ ಹಂತದಿಂದ ಹಿಡಿದು ಪದವಿ ಹಂತದವರೆಗೂ ಶಿಕ್ಷಣ ಪೂರೈಸಿದ್ದು ಹುಟ್ಟೂರಿನಲ್ಲೇ. ಮೈಸೂರಿನ ಮುಕ್ತ ವಿವಿ ಯಿಂದ ಇತಿಹಾಸದಲ್ಲಿ ಎಂ.ಎ.ಪದವೀಧರರು. ಪ್ರಸ್ತುತ ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಸಮಾರು 15 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಕೃತಿಗಳು: ನವೂಲೂರಮ್ಮನ ಕಥೆ (ಕತಾ ಸಂಕಲನ), ಕಿಡಿ (ಕಾದಂಬರಿ) ...
READ MORE