’ರಸಯಾ’ ಬೈರಮಂಗಲ ರಾಮೇಗೌಡರ ವಿಮರ್ಶಾ ಲೇಖನಗಳ ಸಂಕಲನ. ಈ ಕೃತಿಯಲ್ಲಿ ಲೇಖಕರು ಪ್ರಜಾಪ್ರಭುತ್ವ, ಸರ್ವಾಧಿಕಾರ, ಸಿದ್ಧಾಂತ, ಅಭಿವ್ಯಕ್ತಿ ಸ್ವಾತಂತ್ಯ್ರ ಮುಂತಾದ ವಿಷಯಗಳ ಕುರಿತು ವಿಮರ್ಶೆಗಳನ್ನು ಬರೆದಿದ್ದಾರೆ.
ಲೇಖಕರು ಪ್ರಾಸ್ತಾವಿಕ ಮಾತುಗಳಲ್ಲಿ ’ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೆಂಬುದೇನೋ ನಿಜ. ಆದರೆ, ಅದು ಸರ್ವತಂತ್ರ ಸ್ವತಂತ್ರ ಅಥವಾ ಅನಿರ್ಬಂಧಿತ ಅಲ್ಲ. ವೈಚಾರಿಕತೆ ಮತ್ತು ಮೂಲಭೂತವಾದಗಳು ಚಿಂತನೆಗಳ ಮಟ್ಟದಲ್ಲಿ ಅತಿರೇಕಕ್ಕೆ ಹೋದಾಗ ಸಂಘರ್ಷಗಳು, ವಿವಾದಗಳು ತಲೆದೋರುತ್ತವೆ. ಈವರೆಗೆ ಆಳುತ್ತ ಬಂದಿರುವ ಸರ್ಕಾರಗಳು ಮೂಲಭೂತವಾದಿಗಳ ವಿರೋಧ, ಪ್ರತಿಭಟನೆ, ಅಸಹನೆಗಳಿಗೆ ಮಣಿದಿರುವಷ್ಟು ವೈಚಾರಿಕ ನಿಲುವುಗಳ ಪ್ರತಿಪಾದನೆಗೆ ಮಣಿದಿಲ್ಲ. ಇಬ್ಬರ ನಡುವೆ ವಿವಾದ ಭುಗಿಲೆದ್ದಾಗಲೆಲ್ಲ ಅದಕ್ಕೆ ಕೇಂದ್ರವಾಗಿರುವ ವೈಚಾರಿಕ ಚಿಂತನೆಯ ಕೃತಿಗಳನ್ನು ನಿಷೇಧಕ್ಕೆ ಒಳಪಡಿಸುವುದರಲ್ಲೇ ಸರ್ಕಾರಗಳು ಪರಿಹಾರ ಕಂಡುಕೊಂಡಿರುವ ಬಹಳಷ್ಟು ಉದಾಹರಣೆಗಳು ನಮ್ಮೆದುರಿನಲ್ಲಿವೆ. ವಿಚಾರವಾದಿಗಳ ಹತ್ಯೆಯ ಹಿಂದಿರುವುದೂ ಇಂಥ ಒಂದು ರೋಗಗ್ರಸ್ತ ಮನಸ್ಥಿತಿಯೇ ಎನ್ನುವುದು ಈಗಾಗಲೆ ನಡೆಯುತ್ತಿರುವ ವಿಚಾರಣೆಗಳಿಂದ ಬಹಿರಂಗವಾಗಿದೆ. ಸಂವಿಧಾನದ ಆಧಾರ ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಮೊದಲೆರಡು ಭ್ರಷ್ಟತೆಯ ಪಾತಾಳ ತಲುಪಿದ್ದು, ಅವುಗಳನ್ನು ಕಿವಿ ಹಿಂಡಿ ಸರಿ ದಾರಿಯಲ್ಲಿ ನಡೆಸಬೇಕಾದ ಮೂರನೇ ಸ್ತಂಭವಾದ ನ್ಯಾಯಾಂಗ ವ್ಯವಸ್ಥೆ ಕೂಡ ಭ್ರಷ್ಟವಾಗುತ್ತಿರುವ ಹಲವು ನಿದರ್ಶನಗಳು ಜಗಜ್ಜಾಹೀರಾಗಿವೆ. ಇದು ನಿಂತ ನೆಲವೇ ಕಂಪಿಸುವಂಥ, ನಮ್ಮ ಸಮಾಜದ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ದುರಂತ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಮರ್ಶೆ ಮತ್ತಷ್ಟು ಜವಾಬ್ದಾರಿಯ, ಎಚ್ಚರದ, ವಿವೇಕದ ಹೆಜ್ಜೆಗಳನ್ನು ಇಡಬೇಕಾಗುತ್ತದೆ’ ಎಂದಿದ್ದಾರೆ. ಇದು ಲೇಖಕರ ಬರವಣಿಗೆ ಸೂಕ್ಷ್ಮತೆ ಹಾಗೂ ಜವಾಬ್ದಾರಿಯನ್ನು ಪರಿಚಯಿಸುತ್ತದೆ.
ರಸಯಾನ - ಮುನ್ನುಡಿ
ಕಾವ್ಯ ಕುತೂಹಲದಿಂದ ಪ್ರಾರಂಭಿಸಿ ಪ್ರಬಂಧ, ಕಥೆ, ಅಂಕಣ ಸಾಹಿತ್ಯದತ್ತ ಹೊರಳಿ ವಿಮರ್ಶೆಯನ್ನು ಪ್ರೀತಿಯಿಂದ ಅಪ್ಪಿಕೊಂಡು ನಲವತ್ತು ವರ್ಷಗಳು ತುಂಬುತ್ತಿರುವ ಈ ಹೊತ್ತಿನಲ್ಲೂ ಮತ್ತೆ ಮತ್ತೆ ಮನದಲ್ಲಿ ಅಲೆಮೇಳುವ ‘ಸಾಹಿತ್ಯ ಕೃಷಿ ನನಗೆ ಸಂತೋಷ, ಸಮಾಧಾನಗಳನ್ನು ಕೊಟ್ಟಿದೆಯೇ ? ಓದುಗರಿಗಾದರೂ ಅದು ದಕ್ಕಿದೆಯೇ ?' ಎನ್ನುವ ಪ್ರಶ್ನೆಗಳಿಗೆ ನಿಖರ ಉತ್ತರ ದೊರೆಯದೆ ಗೊಂದಲಗೊಳ್ಳುತ್ತಲೇ ಇದ್ದೇನೆ. ಎಸ್.ಎಲ್. ಭೈರಪ್ಪ, ಪಿ. ಲಂಕೇಶ್ ಮುಂತಾದ ಸಾಹಿತಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡು, ನಾನೇಕೆ ಬರೆಯುತ್ತೇನೆ ಎನ್ನುವ ಪ್ರಶ್ನೆ ಹಾಕಿಕೊಂಡು ಚಿಂತನ ಮಂಥನ ಮಾಡಿ ಸುದೀರ್ಘವಾಗಿ ಬರೆದಿದ್ದಾರೆ.
ಸಾಹಿತ್ಯ ಸಮ್ಮೇಳನಗಳ ವಿಚಾರಗೋಷ್ಠಿಗಳಲ್ಲಿ ಇದೇ ಪ್ರಧಾನ ವಿಷಯವಾಗಿ ವಿಚಾರ ಮಂಡನೆ ಮತ್ತು ಚರ್ಚೆ ನಡೆದಿರುವುದೂ ಉಂಟು. ಜಿ.ಎಸ್. ಶಿವರುದ್ರಪ್ಪನವರು ಸಂವೇದನಾಶೀಲರಾದ ಸಾಹಿತಿಗಳ ಇಂಥ ತಾಕಲಾಟ, ತೊಳಲಾಟ, ತಹತಹಗಳನ್ನು ‘ನಾನೇಕೆ ಬರೆಯುತ್ತೆನೆ' ಮತ್ತು ‘ನಾನು ಬರೆಯುತ್ತೇನೆ' ಎನ್ನುವ ಎರಡು ಕವಿತೆಗಳಲ್ಲಿ ತುಂಬಾ ಸೊಗಸಾಗಿ ಬಿಂಬಿಸಿದ್ದಾರೆ. ಅದು ಅವರ ಅನುಭವ, ಆಲೋಚನೆಗಳ ಶಬ್ದ ರೂಪ ಮಾತ್ರವಲ್ಲ, ಅವರೇ ಹಾಕಿಕೊಂಡ ಬೇಲಿ. ಬೇರೆಯವರು ಕೇಳಿದ ಪ್ರಶ್ನೆಗಳಿಗೆ ವ್ಯಕ್ತಪಡಿಸಿದ ಅನುಮಾನಗಳಿಗೆ ಅವರು ಕೊಟ್ಟ ಚಾಟಿಯೇಟೂ ಆಗಿದೆ. ಶಿವರುದ್ರಪ್ಪನವರು ಹೇಳುವುದು ಕವಿ, ಸಾಹಿತಿ ಬರೆಯುವುದು ಸುಮ್ಮನೆ ಇರಲಾರದ್ದಕ್ಕೆ, ವೇದನೆ ಸಂವೇದನೆ ಕ್ರಿಯೆ ಪ್ರತಿಕ್ರಿಯೆಗಳನ್ನು ದಾಖಲು ಮಾಡುವುದಕ್ಕೆ, ನಿಂತ ನೀರಾಗದೆ ಮುಂದಕ್ಕೆ ಹರಿಯುವುದಕ್ಕೆ, ಎಲ್ಲದರ ಜೊತೆ ಬೆರೆಯುವುದಕ್ಕೆ, ತನ್ನನ್ನು ಕಂಡುಕೊಳ್ಳುವುದಕ್ಕೆ, ಹೊರ ಜಗತ್ತಿಗೆ ಕಾಣ ಸುವುದಕ್ಕೆ, ಜನರೊಂದಿಗೆ ಸಂವಾದಿಸುವುದಕ್ಕೆ ಬರವಣ ಗೆಗೆ ಇರುವ ಹಲವು ಉದ್ದೇಶಗಳಲ್ಲಿ ಖುಷಿ ನೋವು ಕೊಚ್ಚು ಹುಚ್ಚು ನಂದಿಸಲಾರದ ಕಿಚ್ಚು ಎಲ್ಲವೂ ಇರುತ್ತವೆ. ಕಗ್ಗತ್ತಲ ರಾತ್ರಿಗಳಲ್ಲಿ ಬಂದು ಕದ ತಟ್ಟುವ ಧ್ವನಿಗಳನ್ನು, ಬಿರುಗಾಳಿಯಲ್ಲಿ ಕಡಲಿನ ಮೇಲೆ ಹೊಯ್ದಾಡುವ ದೋಣ ಗಳನ್ನು ಕುರಿತು, ನೆಲದಾಳದಲ್ಲಿ ಮಲಗಿರುವ ಮೂಳೆಗಳ ನಿಟ್ಟುಸಿರನ್ನು ಕುರಿತು, ಸಂಜೆಗತ್ತಲಿನಲ್ಲಿ ಕರಗುವ ಉಜ್ವಲವಾದ ಹಗಲುಗಳನ್ನು ಕುರಿತು, ಶತಮಾನಗಳ ಕತ್ತಲನ್ನು ದಾಟಿ ಮೆತ್ತಗೆ ತಲೆ ಎತ್ತುವ ಮೊಳಕೆಗಳನ್ನು ಕುರಿತು, ಕೀರ್ತಿಗೆ ಕಚ್ಚಾಡುವವರನ್ನು ಕುರಿತು, ಅರಳುವ ಕನಸುಗಳು ಮತ್ತು ಉರುಳುವ ಚಕ್ರಗಳನ್ನು ಕುರಿತು, ಸ್ವತಃ ಕವಿಯೇ ಒಂದೊಂದೇ ಎಲೆಯುದುರಿಸಿಕೊಂಡು ಬೋಳಾಗುವುದನ್ನು ಕುರಿತು... ಇದನ್ನು ಹೀಗೆಯೇ ಎಷ್ಟು ಬೇಕಾದರೂ ವಿಸ್ತರಿಸಿಕೊಳ್ಳುವ ಶಕ್ತಿ ಕವಿ ಮಾತಿಗಿದೆ.
ಇಂಥ ಕಾವ್ಯಮಾಯೆಗೆ ಮರುಳಾಗಿ ಬರೆಯುತ್ತ, ಕೊರೆಯುತ್ತ, ಕೇಳುತ್ತ ಬಂದಿರುವ ದಿನಗಳನ್ನು, ಅಲ್ಲಲ್ಲಿ ಪಡೆದ ಅನುಭವಗಳನ್ನು, ಅದರಿಂದ ಮೂಡಿದ ಭಾವ ತರಂಗಗಳನ್ನು, ಅವುಗಳನ್ನು ನವಿರಾಗಿ ಮುಟ್ಟುವ ಗಟ್ಟಿಯಾಗಿ ಹಿಡಿಯುವ ಆಟದಲ್ಲಿ ತೊಡಗಿದ್ದನ್ನು ನೆನಪಿಸಿಕೊಂಡಾಗ ಅಚ್ಚರಿಯಾಗುತ್ತದೆ. ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ರಾಜನಿದ್ದ, ವ್ಯಾಪಾರಿಯಿದ್ದ, ರೈತನಿದ್ದ, ಜಿಪುಣನಿದ್ದ ಎಂದು ಮುಂತಾಗಿ ಜನಪದ ಕಥೆಗಳನ್ನೋ ಅವುಗಳ ಪರಿವರ್ತಿತ ರೂಪಗಳನ್ನೋ ಹೇಳಲಾಗದ ಮತ್ತು ಕೇಳಿಸಿಕೊಳ್ಳಲಾಗದ ಪಂಚೇಂದ್ರಿಯಗಳಿಗೆ ಸ್ವಾರ್ಥದ ಲೇಪನ ಮಾಡಿಕೊಂಡು ನಮಗಾಗುವ ಲಾಭದ ಮೇಲಷ್ಟೇ ಜಾಣತನದಿಂದ ವ್ಯವಹರಿಸುವ, ಎಲ್ಲವನ್ನೂ ಅತ್ಯವಸರದಿಂದಲೇ ಮಾಡಿ ಮುಗಿಸುವ ತಿಂದು ತೇಗುವ, ಇಷ್ಟರಿಂದ ಅಷ್ಟಕ್ಕೆ ಮತ್ತಷ್ಟಕ್ಕೆ ಮಗದಷ್ಟಕ್ಕೆ ಕಬಳಿಕೆಯನ್ನು ವಿಸ್ತರಿಸಿಕೊಳ್ಳುತ್ತ ಹೇಗೆ ನಂದಿತು ದೀಪ ಎಂದು ಗೊತ್ತಾಗದಂತೆಯೇ ನಿಸ್ತಂಗತರಾಗಿ ಬಿಡುವ ಈ ಕಾಲಿಘಟ್ಟ ಗಾಬರಿಯನ್ನೂ ಹುಟ್ಟಿಸುತ್ತದೆ. ಇಂಥ ವಿಲಕ್ಷಣ ಸಂದರ್ಭದಲ್ಲಿ ನಮ್ಮ ಮನ ಕಲಕುತ್ತಿರುವ, ಕಾಡುತ್ತಿರುವ ಸಂಗತಿಗಳಿಗೆ ಮುಖಾಮುಖಿಯಾಗದೆ, ತಲೆಕೆಡಿಸಿಕೊಳ್ಳದೆ, ಆ ಮೂಲಕ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸದೆ ನಿರುಮ್ಮಳವಾಗಿ ಕವಿತೆ, ಕಥೆ, ಲೇಖನ ಇತ್ಯಾದಿಗಳನ್ನು ಬರೆಯುವುದಾದರೂ ಹೇಗೆ ಸಾಧ್ಯ ?
ಪ್ರಭುತ್ವದ ನೆರಳಿನಲ್ಲೇ ಬಾಳಿ ಬದುಕಿದರೂ ಜಿಯಾ ಹಸಾದ ಎನ್ನುತ್ತ ನಡು ಬಗ್ಗಿಸಿ ಸಲಾಮು ಹಾಕುವ ಗುಲಾಮರಾಗದೆ ಕ್ಷಣ ಚಿತ್ತ ಕ್ಷಣ ಪಿತ್ತದ ರಾಜರನ್ನು ಅವಿವೇಕಿಗಳೆಂದ ಪಂಪ, ನ್ಯಾಯ ನಿಷ್ಠುರಿ ದಾಕ್ಷಿಣ್ಯಪರನಲ್ಲದ ಲೋಕ ವಿರೋಧಿ ಆನು ಬಿಜ್ಜಳಂಗೆ ಅಂಜುವೆನೆ ಎಂದ ಬಸವಣ್ಣ, ಇಂದ್ರ ಚಂದ್ರ ದಧೀಚಿ ಮುಂತಾಗಿ ಹೊಗಳಲು ನನ್ನಿಂದಾಗದು ಎಂದು ಹರಿಹರ, ಅರಸು ರಾಕ್ಷಸ ಮಂತ್ರಿ ಮೊರೆವ ಹುಲಿ ಪರಿವಾರ ಹದ್ದಿನ ನೆರವಿ ಎಂದ ಕುಮಾರವ್ಯಾಸ, ಹಳೆಯ ಶಾಸ್ತ್ರ ಬೂಸಲು ಧರ್ಮ ಕೇಡಿ ಜಗದ್ಗುರು ಸ್ವಾರ್ಥಶೀಲ ಆಚಾರ್ಯ ಇವರನ್ನೆಲ್ಲ ಮುಲಾಜಿಲ್ಲದೆ ಧಿಕ್ಕರಿಸಬೇಕು ಎಂದು ಕರೆ ಕೊಟ್ಟ ಕುವೆಂಪು - ಇಂಥವರ ಭವ್ಯೋಜ್ವಲ ಪರಂಪರೆ ನಮ್ಮದಾಗಿದ್ದರೂ ಇತ್ತೀಚಿನ ದಿನಮಾನಗಳಲ್ಲಿ ಗೋವಿಂದ ಪಾನ್ಸರೆ, ನರೇಂದ್ರ ದಾಬೋಲ್ಕರ್, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ರಂಥ ವಿಚಾರವಂತರು ಮತ್ತು ಲೇಖಕರು ಹಂತಕರ ಗುಂಡಿಗೆ ಬಲಿಯಾದದ್ದು ಮತ್ತಷ್ಟು ಮಂದಿ ಪೆÇಲೀಸರ ರಕ್ಷಣೆಯಲ್ಲಿ ಸದಾ ಆತಂಕದಲ್ಲಿ ಓಡಾಡಬೇಕಾಗಿರುವುದು ಭೀತಿಗ್ರಸ್ತ ವಾತಾವರಣವನ್ನು ನಿರ್ಮಾಣ ಮಾಡಿದೆ.
ಇದಿಷ್ಟು ಸಾಲದೆಂಬಂತೆ ಉರಿಯುವ ಗಾಯದ ಮೇಲೆ ಖಾರದ ಪುಡಿ ಉದುರಿಸುವಂತೆ, ಸಂವಿಧಾನದ ಆಶಯವಾದ ಸಮಾನತೆ ತತ್ವವನ್ನೇ ಧಿಕ್ಕರಿಸಿ ಅಣಕಿಸುವಂತೆ ಅಸ್ಪೃಶ್ಯತೆಯ ಆಚರಣೆಯನ್ನು ನಿರ್ಭಯವಾಗಿ ಮುನ್ನೆಲೆಗೆ ತರುತ್ತಿರುವ, ಕೆಳಜಾತಿಯವರ ಮೇಲೆ ನಡೆಯುತ್ತಿರುವ ಅಮಾನುಷ ದೌರ್ಜನ್ಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಬೇಕಾದ ಕಾನೂನು ರಕ್ಷಕರು ಅಸಹಾಯಕರಾಗಿರುವ, ಜನಪ್ರತಿನಿಧಿಗಳು ಜಾಣ ಮೌನಕ್ಕೆ ಶರಣಾಗಿರುವ ನಿತ್ಯ ಘಟನಾವಳಿಗಳು ವಿವಿಧತೆಯಲ್ಲಿ ಏಕತೆಯ ಭಾವೈಕ್ಯತೆಯ ಸೂತ್ರಕ್ಕೆ ಬೆಂಕಿಯಿಡುತ್ತಿದ್ದು ಭಾರತೀಯ ಸಮಾಜ ನಾಗರಿಕತೆಯಿಂದ ಅನಾಗರಿಕತೆಯತ್ತ, ಬರ್ಬರತೆಯತ್ತ ಸಾಗುತ್ತಿರುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ದೃಶ್ಯ ಮಾಧ್ಯಮಗಳಲ್ಲಿ ತೋರಿಸದ, ವೃತ್ತಪತ್ರಿಕೆಗಳಲ್ಲಿ ಸಣ್ಣ ಸುದ್ದಿಯಾಗಿಬಿಡುವ ಇಂಥ ಕ್ರೌರ್ಯ, ಹಿಂಸಾಚಾರದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೂರಿ ಬಂದು ಮಾನವೀಯ ಹೃದಯಗಳನ್ನು ಕರಗಿಸಿ ದಿಗ್ಮೂಢರನ್ನಾಗಿ ಮಾಡುತ್ತಿವೆ. ಮನುಷ್ಯರು ಮೃಗಗಳಾಗುತ್ತಿರುವ, ಅಂಥವರ ಮೆದುಳಿಗೆ ಮೆತ್ತಿಕೊಂಡಿರುವ ಸನಾತನ ಅರ್ಥಹೀನ ಆಚಾರಗಳ ಕೊಳೆಯೇ ಇಷ್ಟು ಅನಾಹುತಗಳಾಗಿರುವಾಗ ಇದು ಸಾಲದೆಂಬಂತೆ, ಉರಿಯುವ ಬೆಂಕಿಗೆ ತುಪ್ಪ ಸುರಿದು ಅದನ್ನು ಮತ್ತಷ್ಟು ಕೆರಳಿಸುವಂತೆ ಗುಂಪು ಹಲ್ಲೆ ಎನ್ನುವ ಅನಾಗರಿಕ ಕೃತ್ಯ ಯಾವ ಎಗ್ಗೂ ಸಿಗ್ಗೂ ಇಲ್ಲದಂತೆ ದೇಶದ ಎಲ್ಲ ಭಾಗಗಳಿಂದಲೂ ವರದಿಯಾಗುತ್ತ ಗಾಬರಿ ಹುಟ್ಟಿಸುತ್ತಿದೆ. ಮನುಷ್ಯನ ದೌರ್ಬಲ್ಯಗಳ ಕ್ರಿಯಾ ರೂಪವಾಗಿರುವ ಗುಂಪು ಹಲ್ಲೆಯ ಕ್ರೌರ್ಯಕ್ಕೆ ದೇಶ, ಭಾಷೆ, ಗಡಿ ಸಮುದಾಯಗಳ ಹಂಗಿಲ್ಲ. ಆದರೆ ಗುಂಪು ಹಲ್ಲೆಗಳಲ್ಲಿ ನೋವುಂಡವರು ಮಾತ್ರ ದುರ್ಬಲ ವರ್ಗಗಳಿಗೇ ಸೇರಿದವರಾಗಿರುತ್ತಾರೆ ಎನ್ನುವುದು ಜಾತಿಯ ಅಹಂಕಾರಗಳು ಇನ್ನೂ ಅಳಿದಿಲ್ಲ ಎನ್ನುವುದನ್ನೇ ಸೂಚಿಸುತ್ತದೆ. ದೇಶಕ್ಕೆ ಕಳಂಕ ತರುವಂಥ ಪರಿಣಾಮ ಹೊಂದಿರುವ ಮತ್ತು ರಾಷ್ಟ್ರೀಯ ಅವಮಾನ ಎಂದು ಭಾವಿಸಬಹುದಾದ ಇಂಥ ಕ್ರೌರ್ಯಗಳ ವಿಚಾರದಲ್ಲಿ ನಮ್ಮ ಸಮಾಜ ತಣ್ಣನೆಯ ಪ್ರತಿಕ್ರಿಯೆ ನೀಡುತ್ತ ನರಸತ್ತಂತೆ ವರ್ತಿಸುತ್ತಿರುವುದು ಆಘಾತಕಾರಿಯಾಗಿದೆ.
ಇದನ್ನು ತಡೆಯುವ ಪ್ರಯತ್ನವನ್ನು ಪರಿಣಾಮಕಾರಿಯಾಗಿ ಮಾಡದೇ ಹೋದಲ್ಲಿ ಬಲಿಷ್ಠ ಜಂಟಿ ವರ್ಗಗಳು ದುರ್ಬಲರನ್ನು ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಬಡಿದು ಹಾಕುತ್ತಿದ್ದರೂ ಹೇಳುವವರು ಕೇಳುವವರು ಯಾರೂ ಇಲ್ಲದಂತೆ ಅರಾಜಕತೆಯ ಅಪಾಯವೂ ಎದುರಾಗದಿರದು.
ಸಾಹಿತ್ಯದ ಒಂದು ಭಾಗವೇ ಆಗಿದ್ದು ಅನೇಕ ಸಾರಿ ಅದನ್ನು ಆರೋಗ್ಯಕರ ಮನಸ್ಥಿತಿಯಲ್ಲಿ ದಿಗ್ದರ್ಶನ ಮಾಡುವ ಶಕ್ತಿ ಮತ್ತು ಅರ್ಹತೆ ಎರಡೂ ಇರುವ ವಿಮರ್ಶೆ ಸುತ್ತಮುತ್ತಲಿನ ವಿದ್ಯಮಾನಗಳನ್ನು ಗಮನಿಸುತ್ತಲೇ ಸಮಯೋಚಿತವಾಗಿ ಸ್ಪಂದಿಸುವ ಮೂಲಕ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ವಿಮರ್ಶೆ ಎನ್ನುವುದು ಒಂದು ಲೇಖನ ಅಥವಾ ಲೇಖನಗಳ ಸಂಕಲನವಾದ ಒಂದು ಪುಸ್ತಕ, ಅದನ್ನು ಓದಿ ನಾವು ತಿಳಿಯಬೇಕಾದದ್ದು ಮತ್ತು ತಿದ್ದಿಕೊಳ್ಳಬೇಕಾದದ್ದು ಏನೂ ಇಲ್ಲ ಎನ್ನುವ ಮಟ್ಟಕ್ಕೆ ಅದರ ಬೆಲೆ ಕುಸಿದು ಬಿಡುತ್ತದೆ.
ವಿಮರ್ಶೆಯ ಜವಾಬ್ದಾರಿ ಮತ್ತು ಮಹತ್ವಗಳನ್ನು ಕುರಿತು ಮಾಸ್ತಿ ವೆಂಕಟೇಶ ಅಯ್ಯಂಗಾರ್ “ಸಾಹಿತ್ಯವು ಜೀವನ ವಿಮರ್ಶೆಯಾದರೆ, ವಿಮರ್ಶೆಯು ಆ ವಿಮರ್ಶೆಯ ವಿಮರ್ಶೆಯಾಗುತ್ತದೆ. ವಿಮರ್ಶಕರು ಸಾಹಿತಿಯ ಚಿಂತನೆಗೆ ಸಮಾನಾಂತರವಾದ ಆಳ ಮತ್ತು ಎತ್ತರದಲ್ಲಿ ಇರಬೇಕಾಗುತ್ತದೆ. ವಿಮರ್ಶಕ ಅಂತ ಸಾಮಥ್ರ್ಯ ಪಡೆದುಕೊಂಡಾಗ ಅವನು ಬರೆಯುವುದು ಕಲೆಯ ಮಟ್ಟಕ್ಕೆ ಏರುತ್ತದೆ” ಎಂದಿದ್ದಾರೆ. ಮಿಷೆಲ್ ಫೂಕೋ ಹೇಳುವಂತೆ “ಸಾಹಿತ್ಯ ವಿಮರ್ಶೆ ಎನ್ನುವುದು ಒಂದು ಕೃತಿ ಕುರಿತು ಆ ಕ್ಷಣಕ್ಕೆ ಅನಿಸಿದ್ದನ್ನು ಬರೆಯುವುದಲ್ಲ ; ಸಾಹಿತ್ಯ, ಇತಿಹಾಸ, ವಿಚಾರಗಳ ಹುಟ್ಟು, ಅವು ಸಿದ್ಧಾಂತವಾಗಿ ಹರಳುಗಟ್ಟಿರುವ ಬಗೆ, ಒಂದು ಕಾಲಮಾನದ ನಿರ್ದಿಷ್ಟ ಸೈದ್ಧಾಂತಿಕ ನಿಲುವುಗಳ ಒಡಲಲ್ಲಿ ಹುದುಗಿರುವ ಅಂಶಗಳು”.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೆಂಬುದೇನೋ ನಿಜ. ಆದರೆ ಅದು ಸರ್ವತಂತ್ರ ಸ್ವತಂತ್ರ ಅಥವಾ ಅನಿರ್ಬಂಧಿತ ಅಲ್ಲ. ವೈಚಾರಿಕತೆ ಮತ್ತು ಮೂಲಭೂತವಾದಗಳು ಚಿಂತನೆಗಳ ಮಟ್ಟದಲ್ಲಿ ಅತಿರೇಕಕ್ಕೆ ಹೋದಾಗ ಸಂಘರ್ಷಗಳು, ವಿವಾದಗಳು ತಲೆದೋರುತ್ತವೆ. ಈವರೆಗೆ ಆಳುತ್ತ ಬಂದಿರುವ ಸರ್ಕಾರಗಳು ಮೂಲಭೂತವಾದಿಗಳ ವಿರೋಧ, ಪ್ರತಿಭಟನೆ, ಅಸಹನೆಗಳಿಗೆ ಮಣ ದಿರುವಷ್ಟು ವೈಚಾರಿಕ ನಿಲುವುಗಳ ಪ್ರತಿಪಾದನೆಗೆ ಮಣ ದಿಲ್ಲ. ಇಬ್ಬರ ನಡುವೆ ವಿವಾದ ಭುಗಿಲೆದ್ದಾಗಲೆಲ್ಲ ಅದಕ್ಕೆ ಕೇಂದ್ರವಾಗಿರುವ ವೈಚಾರಿಕ ಚಿಂತನೆಯ ಕೃತಿಗಳನ್ನು ನಿಷೇಧಕ್ಕೆ ಒಳಪಡಿಸುವುದರಲ್ಲೇ ಸರ್ಕಾರಗಳು ಪರಿಹಾರ ಕಂಡುಕೊಂಡಿರುವ ಬಹಳಷ್ಟು ಉದಾಹರಣೆಗಳು ನಮ್ಮೆದುರಿನಲ್ಲಿವೆ. ವಿಚಾರವಾದಿಗಳ ಹತ್ಯೆಯ ಹಿಂದಿರುವುದೂ ಇಂಥ ಒಂದು ರೋಗಗ್ರಸ್ತ ಮನಸ್ಥಿತಿಯೇ ಎನ್ನುವುದು ಈಗಾಗಲೆ ನಡೆಯುತ್ತಿರುವ ವಿಚಾರಣೆಗಳಿಂದ ಬಹಿರಂಗವಾಗಿದೆ. ಸಂವಿಧಾನದ ಆಧಾರ ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಮೊದಲೆರಡು ಭ್ರಷ್ಟತೆಯ ಪಾತಾಳ ತಲುಪಿದ್ದು, ಅವುಗಳನ್ನು ಕಿವಿ ಹಿಂಡಿ ಸರಿ ದಾರಿಯಲ್ಲಿ ನಡೆಸಬೇಕಾದ ಮೂರನೇ ಸ್ತಂಭವಾದ ನ್ಯಾಯಾಂಗ ವ್ಯವಸ್ಥೆ ಕೂಡ ಭ್ರಷ್ಟವಾಗುತ್ತಿರುವ ಹಲವು ನಿದರ್ಶನಗಳು ಜಗಜ್ಜಾಹೀರಾಗಿವೆ. ಇದು ನಿಂತ ನೆಲವೇ ಕಂಪಿಸುವಂಥ, ನಮ್ಮ ಸಮಾಜದ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ದುರಂತ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಮರ್ಶೆ ಮತ್ತಷ್ಟು ಜವಾಬ್ದಾರಿಯ, ಎಚ್ಚರದ, ವಿವೇಕದ ಹೆಜ್ಜೆಗಳನ್ನು ಇಡಬೇಕಾಗುತ್ತದೆ.
-ಡಾ. ಬೈರಮಂಗಲ ರಾಮೇಗೌಡ ಬೆಂಗಳೂರು.
©2024 Book Brahma Private Limited.