ಖ್ಯಾತ ವಿಮರ್ಶಕ ಡಾ. ಜಿ.ಎಸ್. ಆಮೂರ ಅವರ ಕಾವ್ಯ ವಿಮರ್ಶಾತ್ಮಕ ಬರಹಗಳ ಕೃತಿ `ಕೊರಳು-ಕೊಳಲು'. ವಿಮರ್ಶಕರು ಹೇಳುವ ಹಾಗೆ ‘ಪ್ರಮುಖ ಕವಿಗಳಾದ ಮಧುರಚೆನ್ನ, ರಾಮಾನುಜನ್, ನಿಸಾರ್ ಅಹಮ್ಮದ್, ಎಚ್.ಎಸ್. ಶಿವಪ್ರಕಾಶ್, ಸು.ರಂ.ಎಕ್ಕುಂಡಿ, ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ಇನ್ನೂ ಅನೇಕರ ಬಗ್ಗೆ ಆಸಕ್ತಿ ಇದ್ದರೂ ಬರೆಯಲಾಗಿಲ್ಲ. ಇದು ಈ ಪುಸ್ತಕದ ಕೊರತೆ ಎಂಬ ಅರಿವು ನನ್ನಲ್ಲಿದೆ. ಇವರಲ್ಲಿ ಕೆಲವರ ಬಗ್ಗೆ ಪುಸ್ತಕದಲ್ಲಿ ಅಲ್ಲಲ್ಲಿ ಪ್ರಸ್ತಾಪವಿದೆ. ಸಮಗ್ರತೆ ಯಾವಾಗಲೂ ಒಂದು ಆದರ್ಶವೇ ಹೊರತು ವಾಸ್ತವವಾಗಲಾರದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಸ್ತು ವಿಷಯದ ಸರಳೀಕರಣಕ್ಕಾಗಿ ಎರಡು ಭಾಗಗಳನ್ನು ಮಾಡಿದ್ದು, ಆ ಪೈಕಿ ಭಾಗ -1ರಲ್ಲಿ ಕವಿರಾಜಮಾರ್ಗ ಸಾಧನೆ ಹಾಗೂ ಪ್ರಸ್ತುತತೆ, ನವೋದಯ ಕಾವ್ಯ: ಒಂದು ಹಿನ್ನೋಟ, ನವ್ಯ ಕಾವ್ಯ: ಒಂದು ಹಿನ್ನೋಟ, ಮಹಿಳಾ ಕಾವ್ಯ: ಸಾಧನೆ ಹಾಗೂ ಸಮಸ್ಯೆಗಳು, ಬಂಡಾಯ ಕಾವ್ಯ ಹಾಗೂ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮಹಾಕಾವ್ಯ. ಎರಡನೇ ಭಾಗದಲ್ಲಿ; ಮುಕ್ತ ಸಂವೇದನೆಯ ಕವಿ ಗೋವಿಂದ ಪೈ, ಡಿವಿ. ಗುಂಡಪ್ಪನವರ ಜೀವನ ಕಾವ್ಯ, ಕುವೆಂಪು: ಕವಿಕೇಂದ್ರಿತ ಕಾವ್ಯ, ಬೇಂದ್ರೆ ಕಾವ್ಯದ ಪ್ರತಿಮಾ ಲೋಕ, ಭಾಗವತ ಕವಿ ಪುತಿನ, ವಿ.ಸೀ. ಕಾವ್ಯದಲ್ಲಿ ಪ್ರಜ್ಞೆಯ ವಿಕಾಸ, ವಿನಾಯಕ ಮಾರ್ಗ: ಕಾವ್ಯ ಹಾಗೂ ಜಿಜ್ಞಾಸೆ, ಗೋಪಾಲಕೃಷ್ಣ ಅಡಿಗರ ಕಾವ್ಯ ನಡೆದ ದಾರಿ, ರಾಮಚಂದ್ರ ಶರ್ಮರ ಕಾವ್ಯ: ಭರವಸೆಯ ವ್ಯವಸಾಯ, ಕೆ.ಎಸ್. ನರಸಿಂಹಸ್ವಾಮಿ: ಲೌಕಿಕ ಕಾವ್ಯ, ಗಂಗಾಧರ ಚಿತ್ತಾಲರ ಕಾವ್ಯದಲ್ಲಿ ದುರಂತ ಪ್ರಜ್ಞೆ, ಚೆಲುವಿನ ಕವಿ: ಚೆನ್ನವೀರ ಕಣವಿ, ಒಲವಿನ ಕವಿ: ಜಿ.ಎಸ್. ಶಿವರುದ್ರಪ್ಪ, ಐದು ನಲ್ನುಡಿಗಳು ಹೀಗೆ ವಿದ್ವತ್ ಪೂರ್ಣವಾದ 33 ಬರಹಗಳನ್ನು ಸಂಕಲಿಸಲಾಗಿದೆ.
ಕವಿ ಚೆನ್ನವೀರ ಕಣವಿ ಅವರು ಕೃತಿಗೆ ಬೆನ್ನುಡಿ ಬರೆದು ‘ಕೊರಳು-ಕೊಳಲು ಸಂಪುಟವು 20ನೇ ಶತಮಾನದ ಕನ್ನಡ ಕಾವ್ಯದ ಸಾಧನೆಯನ್ನು ಎಲ್ಲ ಬಗೆಯ ಸೂಕ್ಷ್ಮಗಳೊಂದಿಗೆ ಎತ್ತಿ ತೋರಿಸಿರುವುದು ಸಾಹಿತ್ಯಕ ಪ್ರಮುಖ ಪ್ರಕಾರಗಳಲ್ಲಿ ಅವರಿಗಿರುವ (ಲೇಖಕರು) ಸಮಾನ ಆಸಕ್ತಿ ಹಾಗೂ ತೀವ್ರ ಕಾಳಜಿಯ ದ್ಯೋತಕವಾಗಿದೆ. ಈ ಗ್ರಂಥದ ಮೊದಲ ಭಾಗದ ಮೊದಲ ಲೇಖನದಲ್ಲಿಯೇ ಕವಿರಾಜ ಮಾರ್ಗದ ಈಚಿನ ರಾಜಕೀಯ ವ್ಯಾಖ್ಯಾನಗಳು, ಒಳ್ಳೆಯ ಸಾಹಿತ್ಯ ಸೃಷ್ಟಿಯೂ ಅದರ ಉದ್ದೇಶಗಳನ್ನು ಗೌಣವಾಗಿಸಿರುವುದರ ಬಗ್ಗೆ ಎಚ್ಚರಿಕೆ ನೀಡಿರುವುದು ಆಮೂರರ ವಿಮರ್ಶಾ ವಿವೇಕಕ್ಕೂ ಪ್ರಸ್ತುತ ಕೃತಿಗೂ ನಾಂದಿಯಾದಂತಿದೆ. ನವೋದಯ, ನವ್ಯಕಾವ್ಯ, ಬಂಡಾಯ ಕಾವ್ಯಗಳ ವಿಸ್ತೃತವಾದ ಹಿನ್ನೋಟ ಶೋಧನಾ ದೀವಿಗೆಯಂತೆ ಬೆಳಕು ಬೀರಿದೆ. ಆಧುನಿಕತೆ ನವ್ಯಕ್ಕಿಂತ ಹೆಚ್ಚಿನ ವ್ಯಾಪ್ತಿ ಹೊಂದಿರುವುದರೆಡೆ ಗಮನ ಸೆಳೆಯುತ್ತಾ, ನವ್ಯೋತ್ತರಕ್ಕೆ ಕೇಂದ್ರಗಳಿಲ್ಲದಿರುವುದು ವಿಕೇಂದ್ರೀಕರಣವನ್ನು ಲಕ್ಷಣವಾಗಿಸಿಕೊಂಡ ಅದರ ಸಹಜ ಬೆಳವಣಿಗೆಯಾಗಿ ಗುರುತಿಸಿದ್ದು ವಿಶೇಷವೆನಿಸುತ್ತದೆ. ಎರಡನೇ ಭಾಗದಲ್ಲಿ, ಗೋವಿಂದ ಪೈ ಅವರಿಂದ ಮೊದಲುಗೊಂಡು ಮೂರು ತಲೆಮಾರಿನ ಇಪ್ಪತ್ತೈದು ಮಹತ್ವದ ಕವಿಗಳ ಕಾವ್ಯದೊಡನೆ ನಡೆಸಿದ ಅನುಸಂಧಾನ ಇದುವರೆಗನ ವಿಮರ್ಶೆಯನ್ನು ಲಕ್ಷ್ಯಕ್ಕೆ ತೆಗೆದುಕೊಂಡು ಹಲವು ಬಗೆಯ ಒಳನೋಟಗಳೊಂದಿಗೆ ಕುತೂಹಲ ಹುಟ್ಟಿಸುತ್ತದೆ. ಇಲ್ಲಿಯೂ ವಿಸ್ತಾರಕ್ಕಿಂತ ಆಳ, ಸಮೀಕ್ಷೆಗಿಂತ ಅಧ್ಯಯನ, ಸಮಗ್ರತೆಗಿಂತ ಆಯ್ಕೆ ಅವರ ಪ್ರಾಶಸ್ತ್ಯಗಳಾಗಿವೆ. ಸಾಹಿತ್ಯ, ವಿಮರ್ಶೆ, ಸಂಸ್ಕೃತಿ ಹಾಗೂ ಪರಂಪರೆಯ ಪಾಕದಂತಿರುವ ಪ್ರಸ್ತುತ ಕೃತಿ, ಕನ್ನಡದ ಅಭಿವ್ಯಕ್ತಿ ಸಾಮರ್ಥ್ಯವನ್ನೂ, ಆತ್ಮವಿಶ್ವಾಸವನ್ನೂ ಎಂದಿಲ್ಲದಷ್ಟು ಹಿಗ್ಗಿಸಿದೆ’ ಎಂದು ಪ್ರಶಂಸಿಸಿದ್ದಾರೆ.
ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...
READ MORE