‘ಪರ್ಯಾಯ’ ಎಂಬ ಶೀರ್ಷಿಕೆಯಡಿ ರವಿ ಸಿದ್ಲಿಪುರ ಅವರ ಒಟ್ಟು 12 ವಿಮರ್ಶೆ ಸೇರಿದಂತೆ ವೈವಿಧ್ಯತೆಯ ಬರಹಗಳನ್ನು ಸಂಕಲಿಸಲಾಗಿದೆ. ಸಾಹಿತ್ಯ ವಿಮರ್ಶೆ, ಸಂಸ್ಕೃತಿ ಚಿಂತನೆ ಮತ್ತು ಸಂಶೋಧನಾ ಬರಹಗಳಿವೆ. ಲಂಕೇಶ್, ತೇಜಸ್ವಿ, ಕಲ್ಕುಳಿ ವಿಠಲ್ ಹೆಗಡೆ ಅವರ ಸಾಹಿತ್ಯವನ್ನು ವಿಮರ್ಶಿಸಿದ್ದು, ಕೆಲ ಬರಹಗಳು ಮಹಾಭಾರತದ ಯುದ್ಧ ಮತ್ತು ಪ್ರಭುತ್ವದ ಹಿಂಸೆಯನ್ನು ವಿಶ್ಲೇಷಿಸುತ್ತವೆ.
ರಾಮಾಯಣ ಮಹಾಭಾರತಗಳು ಬಾಲ್ಯದಿಂದ ನಮ್ಮ ಪ್ರಜ್ಞೆಯ ಭಾಗವಾಗಿ ಬೆಳೆಯುತ್ತ ಬಂದ ಮಹಾಕಥನಗಳು. ಈ ಕಥನಗಳ ಮೇಲೆ ಅನೇಕ ಅಧ್ಯಯನಗಳು ನಡೆದಿದ್ದರೂ ಅಲ್ಲಿನ ಕೆಲವು ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳ ಕಡೆಗೆ ನಮ್ಮ ಗಮನ ಹರಿದಂತಿಲ್ಲ. ಮಹಾಭಾರತ ಯುದ್ಧಗಳಲ್ಲಿ ಬಳಕೆಯಾದ ಶಸ್ತ್ರಾಸ್ತ್ರಗಳ ವಿಶ್ಲೇಷಣೆ ಈ ನಿಟ್ಟಿನಲ್ಲಿ ಕುತೂಹಲಕರ. ಇದಲ್ಲದೆ, ಪ್ರಭುತ್ವ ಮತ್ತು ಅದು ಅಸ್ತಿತ್ವದ ಬಿಕ್ಕಟ್ಟಿನ ಕಾರಣಕ್ಕೆ ಹುಟ್ಟು ಹಾಕುವ ಯುದ್ಧಗಳು, ಆ ಮೂಲಕ ಭುಗಿಲೇಳುವ ಹಿಂಸೆಯನ್ನೂ ಇಲ್ಲಿ ವಿಶ್ಲೇಷಿಸಲಾಗಿದೆ.
ದೇಶದಲ್ಲಿ ಸಾಮಾನ್ಯ ವಿದ್ಯಮಾನವೆಂಬಂತೆ ಹೆಚ್ಚುತ್ತಿರುವ ಅಸಹಿಷ್ಣು ಮನಸ್ಥಿತಿ, ಕೋಮು ಹಿಂಸೆ ಮತ್ತು ಅದಕ್ಕೆ ಕಾರಣವಾಗಿರುವ ಮೂಲಭೂತವಾದಿ ರಾಜಕಾರಣಗಳು ಜಾತ್ಯತೀತ ಮನಸ್ಸುಗಳನ್ನು ಕಸಿವಿಸಿಗೊಳಪಡಿಸಿವೆ. ಪರಂಪರೆ, ಸಂಸ್ಕೃತಿ, ಚರಿತ್ರೆ, ಧರ್ಮ, ರಾಷ್ಟ್ರೀಯತೆ, ಸಂಪ್ರದಾಯ, ಆಚರಣೆಗಳು ಯಾವತ್ತೂ ಅಬಾಧಿತವಾಗಿರಬೇಕು. ಇವು ಸರ್ವಕಾಲಕ್ಕೂ ಮೂಲರೂಪದಲ್ಲಿಯೇ ಉಳಿಯಬೇಕು. ಬರುವ ತಲೆಮಾರುಗಳು ಇವುಗಳನ್ನು ಖಿಲಗೊಳ್ಳದಂತೆ ಕಾಪಾಡಿಕೊಂಡು ಬರಬೇಕು ಎಂಬ ತಲ್ಲಣರೂಪಿ ಹಪಾಹಪಿ ಈಗ ಹೆಚ್ಚಾಗುತ್ತಿದೆ. ಪರಂಪರೆ, ಧರ್ಮ, ಇತ್ಯಾದಿ ನಮ್ಮ ಜೀವನದ ಅನೂಹ್ಯ ಅವಕಾಶದಲ್ಲಿದ್ದು ನಮ್ಮ ಬದುಕನ್ನು ರೂಪಿಸುತ್ತಾ ಬಂದಿವೆ ಎಂದು ನಂಬಿಸಲಾಗುತ್ತಿದೆ. ಪರಂಪರೆ, ಧರ್ಮ ಮತ್ತು ಕಲ್ಪಿತ ಚರಿತ್ರೆಗಳಿಗೆ ವರ್ತಮಾನವನ್ನು ರೂಪಿಸಿಬಿಡುವ ಇಂತಹ ಅಗಾಧ ಶಕ್ತಿ ಇದೆಯೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ.
ಬದುಕುವ ಸ್ವಾತಂತ್ರ್ಯವನ್ನು ಹಂಬಲಿಸುವ ಜನ ದೇಶಕಾಲಗಳನ್ನು ನಿರ್ಮಿಸುತ್ತಾ ಬಂದಿದ್ದಾರೆ. ಪರಂಪರೆ, ಸಂಸ್ಕೃತಿ, ಚರಿತ್ರೆಗಳು ಅಪೌರುಷೇಯವಾದವುಗಳಲ್ಲ. ಅವು ಜನರ ಬದುಕಿನ ಉತ್ಪನ್ನಗಳು. ಮನುಷ್ಯನ ಬದುಕು ಬದಲಾದಂತೆ ಇವೂ ಬದಲಾಗುತ್ತವೆ. ಬದಲಾಗದೇ ಇರುವ ಸಂಗತಿಗಳು ಅವಶೇಷಗಳಂತಿದ್ದು, ಒಂದು ದಿನ ನಶಿಸಿ ಹೋಗುತ್ತವೆ. ಆದರೆ ಬದಲಾವಣೆಗಳನ್ನು ಬಯಸದ ಜನ, ಪರಂಪರೆ, ಸಂಸ್ಕೃತಿ ಮತ್ತು ಧರ್ಮಗಳ ಹೆಸರಲ್ಲಿ ಅವಶೇಷಗಳನ್ನೇ ಮೋಹಿಸುತ್ತಾ ಬಂದಿದ್ದಾರೆ. ಭಯೋತ್ಪಾದನೆ, ಜಾತಿವಾದ, ಕೋಮುವಾದ, ಫ್ಯಾಸಿಸಂಗಳ ಮೂಲಗಳಿರುವುದು ಪರಂಪರೆಯ ಈ ಮೋಹದಲ್ಲಿ. ಬದಲಾವಣೆಗಳನ್ನು ದ್ವೇಷಿಸುವ ಮೂಲಭೂತವಾದ ಜಗತ್ತಿನ ಎಲ್ಲ ಅಮಾಯಕರ ರಕ್ತದ ರುಚಿ ನೋಡಿದೆ, ನೋಡುತ್ತಲೂ ಇದೆ. ಪ್ರಭುತ್ವ ಮತ್ತು ಅದು ಹುಟ್ಟುಹಾಕುವ ಈ ಹಿಂಸೆಯನ್ನು ರವಿ ತಮ್ಮ ಬರಹಗಳಲ್ಲಿ ಹೀಗೆ ಪ್ರಶ್ನಿಸುತ್ತಾರೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗದ ಪ್ರಾಧ್ಯಾಪಕ ಎ ಎಸ್ ಪ್ರಭಾಕರ.
ತಾತ್ವಿಕ ಸ್ಪಷ್ಟತೆ ಹಾಗೂ ವೈಚಾರಿಕ ತೀಕ್ಷ್ಣತೆಯ ‘ಪರ್ಯಾಯ’
ಈಚೆಗೆ ಬರಹ ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದು, ತನ್ನ ಗಾಂಭೀರ‍್ಯವನ್ನು ಕಳೆದುಕೊಂಡಿದೆ ಎಂಬ ಹಳಹಳಿಕೆಯ ಮಾತು ಚಾಲ್ತಿಯಲ್ಲಿದೆ. ಕಾಲಚಕ್ರದಲ್ಲಿ ಸಿಲುಕಿದ ಪ್ರತಿಯೊಂದು ವಿದ್ಯಮಾನವು ಇಂತಹದೊಂದು ಸ್ಥಿತ್ಯಂತರಕ್ಕೆ ಈಡಾಗುವುದು ಸಹಜ. ಈ ಮಾತನ್ನು ನಾನು ಯಾವುದೇ ನಿರ್ಲಿಪ್ತ ಮನಸ್ಥಿತಿಯಿಂದ ಹೇಳಲಾರೆ. ಆದರೆ ಚಾರಿತ್ರಿಕ ಕಟು ವಾಸ್ತವವನ್ನು ನಾವು ಹೇಗೆ ಮೀರಲಾರೆವು ಎನ್ನುವ ಆತಂಕದಿಂದ ಮಾತ್ರ ಇದನ್ನು ಹೇಳಿದೆ. ಇಷ್ಟೆಲ್ಲ ಮಾತುಗಳನ್ನು ಪೀಠಿಕೆಯಾಗಿ ಹೇಳಲು ಇರುವ ಜರೂರೇನೆಂದರೆ, ಬರಹದ ಗಾಂಭೀರ‍್ಯಕ್ಕಿಂತ, ಅದಕ್ಕಿರುವ ಹೊಣೆಗಾರಿಕೆ ಹಾಗೂ ಬದ್ಧತೆ ಎಷ್ಟೊಂದು ಮುಖ್ಯ ಎಂಬುದಾಗಿದೆ. ಇಂತಹ ಹೊಣೆಗಾರಿಕೆ ಹಿಂದೆಂದಿಗಿಂತಲೂ ಇವತ್ತು ಅವಶ್ಯವಾಗಿದೆ.
ಲೇಖಕ ರವಿ ಅವರು ಈ ಹೊಣೆಗಾರಿಕೆಯನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ. ಸಮೂಹಗಳ ಬದುಕಿನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಲು ಎಂತಹ ಬರಹ ಬೇಕು? ಅಂತಹ ಬರಹ ಯಾಕೆ ಬೇಕು? ಆ ಬರಹ ಎದುರಿಸಬೇಕಾದ ತಾತ್ವಿಕ ಮತ್ತು ನೈತಿಕ ಸವಾಲುಗಳು ಎಂತಹವು? ಎಂಬಿತ್ಯಾದಿ ಪ್ರಶ್ನೆಗಳನ್ನೂ ಇವತ್ತು ಜರೂರಾಗಿ ಕೇಳಬೇಕಾಗಿದೆ. ಏಕೆಂದರೆ, ಆಧುನಿಕತೆ ಎನ್ನುವುದು ಕೇವಲ ಜ್ಞಾನಪರ್ವದ ಪ್ರತಿನಿಧಿಯಾಗಿ ಮಾತ್ರ ನೆಲೆಗೊಳ್ಳಲಿಲ್ಲ. ಶೋಷಣೆ-ಶೋಷಕ ಹಾಗೂ ವೈಜ್ಞಾನಿಕ-ಬಂಡವಾಳಶಾಹಿ ವಿನ್ಯಾಸಗಳನ್ನು ತನ್ನ ಒಡಲಲ್ಲಿರಿಸಿಕೊಂಡು ಇದು ಮುಂಚೂಣೆಗೆ ಬಂತು. ಈ ಆಧುನಿಕತೆ ಜೊತೆಗಿನ ಅನುಸಂಧಾನ ಮತ್ತು ಸಂಘರ್ಷದ ನೆಲೆಗಳನ್ನು ನಿಭಾಯಿಸಲು ಬರಹ ಒಂದು ಮಹತ್ವದ ಅಸ್ತ್ರವಾಗಿದೆ. ಅದು ಜಾಗತೀಕರಣದ ಹೊಸ ಆರ್ಥಿಕ ನೀತಿಗಳಿರಬಹುದು ಇಲ್ಲವೇ ತಂತ್ರಜ್ಞಾನ ಒಡ್ಡುವ ಸಾಮಾಜಿಕ-ಸಾಂಸ್ಕೃತಿಕ ಆತಂಕಗಳಿರಬಹುದು ಇವೆಲ್ಲವುಗಳನ್ನು ಎದುರಾಗಲೂ ಬರಹವೇ ನಮಗೆ ದಾರಿದೀಪವಾಗಲಿದೆ. ಈ ದೀಪವನ್ನು ಹಚ್ಚುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಮತ್ತು ಆ ದೀಪದ ಬೆಳಕಿನಲ್ಲಿಯೇ ನಮ್ಮನ್ನು ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವ ಬಗೆಗಳನ್ನು ಕಂಡುಕೊಳ್ಳಬೇಕಿದೆ.
ಆತ್ಮವಿಮರ್ಶೆ ಇಲ್ಲದೇ ಜ್ಞಾನದ ವಿಕಾಸವಾಗದು ಹಾಗೂ ಸಾಮಾಜಿಕ-ರಾಜಕೀಯ ಪರಿವರ್ತನೆ ಸಾಧ್ಯವಿಲ್ಲ. ಇಂತಹದೊಂದು ಪರಿವರ್ತನೆ ನಮ್ಮ ಗುರಿಯಾಗುವುದಾದರೆ, ನಾವು ಕೇವಲ ರಾಜಕೀಯ ಸರಿತನದ ಗೀಳಿಗೆ ಬಲಿಯಾಗಬಾರದು; ಹೊರತಾಗಿ ಸಾಂಸ್ಕೃತಿಕ ಸರಿತನದ ಆಂದೋಲನವನ್ನಾಗಿ ನೆಲೆಗೊಳಿಸುವ ಗುರಿಯನ್ನು ಬರಹದ ಮೂಲಕ ನೆಲೆಗೊಳ್ಳಬೇಕಿದೆ. ಅಂದರೆ ಬರಹ ಎನ್ನುವುದು ರಾಜಕೀಯ ಹುನ್ನಾರಗಳನ್ನು ಮಾತ್ರ ಟೀಕಿಸುವ ಇಲ್ಲವೇ ಬೆಂಬಲಿಸುವ ಸೀಮಿತ ಇರಾದೆಯನ್ನು ಹೊಂದಬಾರದು. ಅದು ಪರ್ಯಾಯ ಸಾಂಸ್ಕೃತಿಕ ರಾಜಕಾರಣವನ್ನು ರೂಪಿಸುವುದಕ್ಕೆ ತಳಹದಿಯಾಗಬೇಕು. ಸಾಂಸ್ಕೃತಿಕ ರಾಜಕಾರಣದ ಪರ್ಯಾಯ ಸಾಧ್ಯತೆಗಳನ್ನು ಕಂಡರಿಸುವ ಬಗೆಗಳನ್ನು ಈ ಪುಸ್ತಕದ ಬರಹಗಳಲ್ಲಿ ಕಾಣುತ್ತೇವೆ. ಹಾಗೆಯೇ ವೈಚಾರಿಕ ನಿಲುವುಗಳ ಪ್ರಖರತೆಯನ್ನು ಉದ್ದೀಪನಗೊಳಿಸುವ ಹಂಬಲದಲ್ಲಿ ಸಮೂಹಗಳ ಏಳ್ಗೆಯನ್ನು ಕಾಣುವುದಕ್ಕೆ ಬೇಕಾದ ತಾತ್ವಿಕತೆಯನ್ನು ಬದಿಗೆ ತಳ್ಳಲಾಗುತ್ತದೆ ಇಲ್ಲವೇ ಕಡೆಗಣಿಸಲಾಗುತ್ತದೆ. ಆದರೆ ಇಂತಹ ಅಪಾಯಗಳಿಂದ ಪಾರಾಗುವ ದಾರಿಗಳನ್ನೂ ಈ ಬರಹಗಳು ಕಂಡುಕೊಂಡಿವೆ. ಈ ಗುಣ ಕೇವಲ ಬರಹದ ಜಾಣ್ಮೆಯನ್ನು ಮಾತ್ರ ಪ್ರಕಟಿಸುವುದಿಲ್ಲ ಜೊತೆಗೆ ಬರಹಗಾರನ ಹೊಣೆಗಾರಿಕೆ ಮತ್ತು ಬದ್ಧತೆಯನ್ನೂ ತೋರುತ್ತದೆ. ಒಬ್ಬ ಯುವಕ ತನ್ನ ಆರಂಭದ ಬರಹಗಳ ಮೂಲಕ ಇಂತಹ ವೈಚಾರಿಕ ಜಾಡನ್ನು ಹಿಡಿದಿರುವುದು ನಮ್ಮ ಯುವಜನತೆಯ ಬಗೆಗಿನ ಭರವಸೆಯನ್ನು ಇದು ಇಮ್ಮಡಿಸುತ್ತದೆ.
ಯಾವುದೇ ಬರಹವನ್ನು ಕೇವಲ ಮಾಹಿತಿಗಳನ್ನು ರವಾನಿಸುವ ಮಾಧ್ಯಮವನ್ನಾಗಿ ರೂಪಿಸಬಾರದು. ಬದಲಾಗಿ ಅದೊಂದು ವಿಶ್ಲೇಷಣೆಯ ಪ್ರಮಾಣವಾಗಿ ಒಡಮೂಡಬೇಕು. ಹಾಗೆಂದರೇನು? ಸಾಹಿತ್ಯ ಪಠ್ಯವನ್ನು ಕುರಿತು ಯೋಚಿಸುವಾಗ ಇಲ್ಲವೇ ಸಾಮಾಜಿಕತೆಯ ಬಗೆಗಿನ ಚಿಂತನೆಗಳನ್ನು ರೂಪಿಸುವಾಗ ಅಥವಾ ರಾಜಕೀಯ ವಿದ್ಯಮಾನಗಳನ್ನು ಟೀಕಿಸುವಾಗ ನಾವು ಏನನ್ನು ನೆಲೆಯಾಗಿಸಿಕೊಳ್ಳಬೇಕು ಎಂಬುದು ಮುಖ್ಯ. ಅಂದರೆ ಆಕರ ಮುಖ್ಯವಾಗಬೇಕೋ? ಇಲ್ಲವೇ ಪರಿಕರ ಮುಖ್ಯವಾಗಬೇಕೋ? ಅಥವಾ ಇವೆರಡನ್ನೂ ಸಮನ್ವಯಗೊಳಿಸುವ ಬಗೆ ಮುಖ್ಯವಾಗಬೇಕೋ? ಎಂಬಿತ್ಯಾದಿ ಜಿಜ್ಞಾಸೆಗಳು ಪ್ರತಿಯೊಬ್ಬ ಬರಹಗಾರನಿಗೂ ಸವಾಲುಗಳೇ. ಆದರೆ ಆಯಾ ಬರಹಗಾರನ ಸಾಮಾಜಿಕ ಮತ್ತು ರಾಜಕೀಯ ಬದ್ಧತೆಗೆ ಅನುಗುಣವಾಗಿ ಆಕರ ಮತ್ತು ಪರಿಕರಗಳನ್ನು ಬಳಸಿಕೊಳ್ಳುವ ಒಂದು ತಾತ್ವಿಕ ಎಚ್ಚರ ಹಾಗೂ ವಿವೇಕ ರೂಪುಗೊಳ್ಳುತ್ತದೆ. ಪ್ರಸ್ತುತ ಪುಸ್ತಕದ ಬರಹಗಳು ಈ ಜಾಡಿನಲ್ಲಿಯೇ ಸಾಗಿರುತ್ತವೆ ಎಂಬುದು ಗಮನಾರ್ಹ. ಏಕೆಂದರೆ ಇಂತಹದೊಂದು ಪುಸ್ತಕದ ಬರಹಗಳು ಯಾವುದೇ ಒಂದು ನಿರ್ದಿಷ್ಟ ವಿಚಾರಕ್ಕೆ ಮಾತ್ರ ಸೀಮಿತವಾಗದೇ, ಸಾಹಿತ್ಯ, ಸಂಸ್ಕೃತಿ, ರಾಜಕಾರಣ ಹಾಗೂ ಜಾಗತೀಕರಣ ಇಲ್ಲವೇ ಆಧುನೀಕರಣಗಳ ಹಾವಳಿಯಿಂದ ಏರ್ಪಟ್ಟಿರುವಂತಹ ಪ್ರಭಾವ ಮತ್ತು ಪರಿಣಾಮಗಳನ್ನು ಕುರಿತು ಚಿಂತಿಸುವ ಬಗೆಯೊಂದು ಇಲ್ಲಿ ಎದ್ದು ಕಾಣುತ್ತದೆ. ಹೀಗೆ ವಿವಿಧ ಶಿಸ್ತುಗಳ ತಾತ್ವಿಕ ಹಿನ್ನೆಲೆಯಿಂದ ವಿಶ್ಲೇಷಣೆಗಳನ್ನು ಮಾಡುವುದು ಒಂದು ಸವಾಲೇ ಸರಿ. ಈ ಸವಾಲನ್ನು ನಿಭಾಯಿಸುವ ಸುಳಿವುಗಳು ಈ ಪುಸ್ತಕದ ಉದ್ದಕ್ಕೂ ತಲೆಯೆತ್ತಿವೆ.
ಬರಹಗಾರನಿಗೆ ಗ್ರಹಿಕೆ ಎನ್ನುವುದು ಎರಡು ಕಾರಣಗಳಿಗಾಗಿ ಅತ್ಯಂತ ಮುಖ್ಯವಾದ ಸಂಗತಿ. ಕಾಲದೇಶಗಳ ಹಂಗು ತೊರೆದು ಯಾವುದೇ ಒಂದು ವಿದ್ಯಮಾನದ ಬಗೆಗೆ ವಸ್ತುನಿಷ್ಠ ವಿಶ್ಲೇಷಣೆ ಮಾಡುವುದು ಒಂದು ಬಗೆಯಾದರೆ, ಅಂತಹವೊಂದು ವಿಶ್ಲೇಷಣೆಗೆ ಬಳಸಿಕೊಳ್ಳುವ ಆಕರ ಮತ್ತು ಪರಿಕರಗಳ ನಡುವಣ ಸಂಬಂಧ ಯಾವ ಬಗೆಯ ಸಾಮಾಜಿಕ ಕಾಳಜಿಯನ್ನು ಎತ್ತಿ ಹಿಡಿಯುತ್ತದೆ ಎನ್ನುವುದು ಇದರ ಮತ್ತೊಂದು ಬಗೆಯಾಗಿದೆ. ಹಾಗಾಗಿ ಗ್ರಹಿಕೆಯ ಮಹತ್ವವನ್ನು ಗುರುತಿಸದ ಬರಹದ ದೃಷ್ಟಿಕೋನದಲ್ಲಿ ದೋಷಗಳಿರುತ್ತವೆ ಎನ್ನುವುದು ನಿಶ್ಚಿತ. ಆದರೆ ಈ ದೋಷಗಳನ್ನು ಸರಿಪಡಿಸಿಕೊಳ್ಳುವ ಪರಿಕರಗಳನ್ನು ಎಲ್ಲಿಂದ ಪಡೆದುಕೊಳ್ಳುವುದು ಅನ್ನುವ ಬಿಕ್ಕಟ್ಟು ಕೂಡ ನಮಗೆ ಎದುರಾಗುತ್ತದೆ. ಈ ಬಿಕ್ಕಟ್ಟನ್ನೂ ಬಗೆಹರಿಸಿಕೊಳ್ಳುವ ಹಾದಿಯನ್ನು ಕೂಡ ನಮ್ಮ ಗ್ರಹಿಕೆಯ ಮೂಲಕವೇ ಪಡೆದುಕೊಳ್ಳುವ ಜರೂರಿದೆ. ಹಾಗಾಗಿ ಗ್ರಹಿಕೆ ಅದು ಕೇವಲ ವಿಷಯಗಳಿಗೆ ಮಾತ್ರ ಸಂಬಂಧಿಸಿಲ್ಲ ಬದಲಾಗಿ ಆಲೋಚನಕ್ರಮ ಮತ್ತು ಅದನ್ನು ಈಡೇರಿಸುವ ವಿಧಿ ವಿಧಾನಕ್ಕೂ ಸಂಬಂಧಿಸಿರುತ್ತದೆ. ಈ ತಾತ್ವಿಕ-ವೈಜ್ಞಾನಿಕ ಎಚ್ಚರವನ್ನು ಗ್ರಹಿಸುವಲ್ಲಿ ಇಲ್ಲಿನ ಲೇಖನಗಳ ಸಫಲವಾಗಿವೆ. ಹೇಗೆಂದರೆ, ಪ್ರಾಚೀನ ಕಾವ್ಯಗಳು, ಆಧುನಿಕ ಸಾಹಿತ್ಯ, ಸಾಮಾಜಿಕ ಚಿಂತನೆಗಳು ಹಾಗೂ ಜಾನಪದೀಯ ವಿನ್ಯಾಸಗಳನ್ನು ಒಳ್ಗೊಂಡಿರುವ ಬರಹಗಳು ಈ ಪುಸ್ತಕದಲ್ಲಿರುತ್ತವೆ. ಒಂದೊಂದು ಲೇಖನದ ಆಶಯ ಭಿನ್ನವಾಗಿದೆ. ಪ್ರಾಚೀನ ಸಾಹಿತ್ಯದ ಬಗೆಗಿನ ಗ್ರಹಿಕೆಗೂ ಮತ್ತು ಆಧುನಿಕ ಸಾಹಿತ್ಯದ ಗ್ರಹಿಕೆಗೂ ಸಾಕಷ್ಟು ತಾತ್ವಿಕ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು ವೈಚಾರಿಕವಾಗಿ ಗ್ರಹಿಸುವ ಕಸುವನ್ನು ರವಿ ಪಡೆದಿದ್ದಾರೆ.
ಇಲ್ಲಿ ನನ್ನ ಅಭಿಪ್ರಾಯಗಳು ಈ ಪುಸ್ತಕದ ಪ್ರತಿಯೊಂದು ಲೇಖನವನ್ನು ಉಲ್ಲೇಖಿಸಿ ವಿಶ್ಲೇಷಿಸುವ ಧಾಟಿಯಲ್ಲಿ ಇಲ್ಲ. ಆದರೆ ಇಲ್ಲಿರುವ ಎಲ್ಲಾ ಲೇಖನಗಳ ತಾತ್ವಿಕ ಚೌಕಟ್ಟು ಎಂತಹದು? ಮತ್ತು ಇಂತಹದೊಂದು ತಾತ್ವಿಕತೆಯ ಅವಶ್ಯಕತೆ ಏನು? ಹಾಗೂ ಯುವ ಬರಹಗಾರ ರವಿ ಇದೆಲ್ಲವನ್ನು ಸಾಧಿಸಿಕೊಂಡದ್ದು ಹೇಗೆ ಎನ್ನುವುದನ್ನು ತಾತ್ವಿಕವಾಗಿ ವಿವರಿಸುವ ಪ್ರಯತ್ನವನ್ನು ಮಾಡಿರುತ್ತೇನೆ. ಹಾಗೂ ಈ ಲೇಖನಗಳಲ್ಲಿರುವ ತಾತ್ವಿಕ ಸ್ಪಷ್ಟತೆ ಹಾಗೂ ವೈಚಾರಿಕ ತೀಕ್ಷ್ಣತೆಯನ್ನು ಕುರಿತು ನಾನು ಹೆಚ್ಚು ವಿವರಿಸುವ ಇರಾದೆಯನ್ನು ಹೊಂದಿರುತ್ತೇನೆ.
ಡಾ. ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ
(ಕೃತಿ ಕುರಿತು ‘ಸಮಾಜಮುಖಿ’ ಮಾಸಪತ್ರಿಕೆಯಲ್ಲಿ ಪ್ರಕಟಿತ)
©2024 Book Brahma Private Limited.