‘ಸುವರ್ಣ ಕರ್ನಾಟಕ ಹೊನ್ನಾರು ಮಾಲೆ’ಯಲ್ಲಿ ಪ್ರಕಟವಾದ ‘ಪ್ರಮಾಣು’ ಕೃತಿ ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜು ಅವರ ಹನ್ನೆರಡನೆಯ ವಿಮರ್ಶಾ ಸಂಕಲನವಾಗಿದೆ. ಈ ಕೃತಿಗೆ ಐ.ಎಂ. ವಿಠ್ಠಲಮೂರ್ತಿ ಅವರ ಬೆನ್ನುಡಿಯ ಮಾತುಗಳಿವೆ. ‘ಡಾ. ಗಿರಡ್ಡಿ ಗೋವಿಂದರಾಜ ಅವರು ಕನ್ನಡ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ನಿರಂತರ ಶೋಧನೆಗಳನ್ನು ನಡೆಸುತ್ತಾ ಬಂದವರು. ಪರಂಪರೆ ಮತ್ತು ಆಧುನಿಕತೆಗಳ ಚಿಂತನೆಗಳನ್ನು ಬೆಸೆದು ಪ್ರಾಚೀನ ಮತ್ತು ಆಧುನಿಕ ಕನ್ನಡ ಸಾಹಿತ್ಯ ಅಧ್ಯಯನಗಳಲ್ಲಿ ಸಮಾನ ಪ್ರವೇಶ ಮತ್ತು ಆಸಕ್ತಿಯುಳ್ಳ ಡಾ. ಗಿರಡ್ಡಿ ಅವರು ಆಧುನಿಕ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳ ಸಂಗ್ರಹ ಪ್ರಮಾಣುವನ್ನು ಇಲ್ಲಿ ವಿಮರ್ಶಾ ವಲಯಕ್ಕೆ ಒಪ್ಪಿಸಿದ್ದಾರೆ’ ಎನ್ನುತ್ತಾರೆ ವಿಠ್ಠಲಮೂರ್ತಿ. ಜೊತೆಗೆ ‘ನವೋದಯ ಕಾವ್ಯ, ಇಂಗ್ಲಿಷ್ ಕಾವ್ಯದ ಪ್ರೇರಣೆ, ಆಧುನಿಕ ಕಾದಂಬರಿ, ಸಣ್ಣಕತೆಗಳು, ನಾಟಕಗಳು, ವಿಮರ್ಶೆ-ಹೀಗೆ ಆಧುನಿಕ ಕನ್ನಡ ಸಾಹಿತ್ಯದ ಓದಿನ ಮೂಲಕವೇ ಕನ್ನಡ ವಿಮರ್ಶೆಯ ಸೂಕ್ಷ್ಮ ಅವಲೋಕನ ಶಕ್ತಿ, ಸಾಂಸ್ಕೃತಿಕ ವಿಮರ್ಶೆಯ ಆಯಾಮ ಮತ್ತು ಕೃತಿಕಾರ-ಕೃತಿ ಸಂಬಂಧಗಳ ಅನ್ವೇಷಣೆಗಳ ಜೊತೆಗೆ ಕನ್ನಡ ಸಂಸ್ಕೃತಿಯ ವಿಶಿಷ್ಟತೆಗಳನ್ನು ಗುರುತಿಸುವ ವಿಶೇಷ ಅಧ್ಯಯನ ಮಾದರಿಯೊಂದು ಡಾ. ಗಿರಡ್ಡಿ ಅವರ ವಿಮರ್ಶೆಯ ಬರಹಗಳಲ್ಲಿ ದೊರೆಯುತ್ತದೆ’ ಎಂದಿದ್ದಾರೆ.
ಈ ಕೃತಿಯಲ್ಲಿ ಬೇರೆಬೇರೆ ವಿಚಾರ ಸಂಕಿರಣಗಳಲ್ಲಿ ನೀಡಿದ ವಿಶೇಷ ಉಪನ್ಯಾಸಗಳು, ಆಶಯಭಾಷಣಗಳು, ಸಮಾರೋಪ ಭಾಷಣಗಳು, ಇಲ್ಲವೇ ಮಂಡಿಸಿದ ಪ್ರಬಂಧಗಳು ಮತ್ತೆ ಕೆಲವು ಲೇಖನಗಳು ಬೇರೆಬೇರೆ ಕೃತಿಗಳಿಗೆ ಬರೆದ ಸಂಪಾದಕೀಯಗಳು, ಪ್ರಸ್ತಾವನೆಗಳು, ಇಲ್ಲವೆ ಮುನ್ನುಡಿಗಳು ಸಂಕಲನಗೊಂಡಿವೆ ಎಂದು ತಿಳಿಸಿದ್ದಾರೆ ಲೇಖಕ ಗಿರಡ್ಡಿ ಗೋವಿಂದರಾಜ. ಇಲ್ಲಿ ‘ಹೊನ್ನಿನ ವರುಷಕ್ಕೆ ಹೊನ್ನಾರುವಿ ಹರುಷ’, ‘ಲೇಖಕನ ಅರಿಕೆ’, ‘ಅವಳ ತೊಡಿಗೆ ಇವಳಿಗಿಟ್ಟು: ಶ್ರೀಯವರ “ಇಂಗ್ಲಿಷ್ ಗೀತೆಗಳು”, ‘ನವೋದಯ ಕಾವ್ಯ: ಮಂಗಳೂರು ಕೇಂದ್ರ’, ‘ಕನ್ನಡ ಕಾವ್ಯ ಪರಂಪರೆ ಮತ್ತು ಬೇಂದ್ರೆಯವರ ಕಾವ್ಯ’, ‘ವಿ.ಜಿ. ಭಟ್ಟರ ಕಾವ್ಯ: ಪ್ರಾರ್ಥನೆಗಳ ಮೂಲಕ’, ‘ಕುರ್ತಕೋಟಿಯವರ ನಾವು ಬರಿಗೈಯವರು’, ‘ಶೂನ್ಯ ಸಂಪಾದನೆ: ಕೆಲವು ಸಮಸ್ಯೆಗಳು, ಕೆಲವು ಪ್ರಶ್ನೆಗಳು’, ‘ಆಧುನಿಕ ಮತ್ತು ಕನ್ನಡ ಕಾದಂಬರಿ’, ‘ಕಾರಂತ ಪ್ರಪಂಚಕ್ಕೊಂದು ಪ್ರವೇಶ’, ‘ಸತ್ಯದ ಬಹುತ್ವ: ಶಾಂತಿನಾಥ ದೇಸಾಯಿಯವರ ಸಣ್ಣಕತೆಗಳು’, ‘ಶಾಂತಾದೇವಿ ಕಣವಿಯವರ ಸಣ್ಣ ಕತೆಗಳು’, ‘ಜಯಂತ ಕಾಯ್ಕಿಣಿಯವರ ಬಣ್ಣದ ಕಾಲು’, ‘ಸುರೇಂದ್ರನಾಥರ ನಾತಲೀಲೆಯ ಭಿನ್ನ ಹಾದಿ’, ‘ಜಡಭರತರ ಕನಸುಗಳು’, ‘ಜಡಭರತರ ನಾಟಕಗಳು’, ‘ವಿಮರ್ಶಾಶಾಸ್ತ್ರ’, ‘ಮಾರ್ಗ ಮತ್ತು ದೇಸಿ’, ‘ಓದುವ ದಾರಿಗಳು’ ಮತ್ತು ‘ಆರ್ಯಾವರ್ತ’ ಸೇರಿದಂತೆ 18 ವಿಮರ್ಶಾ ಲೇಖನಗಳು ಸಂಕಲನಗೊಂಡಿವೆ.
ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಮೂಲತಃ ಧಾರವಾಡ ಜಿಲ್ಲೆಯ ಅಬ್ಬಿಗೇರಿಯವರು. ತಂದೆ ಅಂದಾನಪ್ಪ ಮತ್ತು ತಾಯಿ ನಾಗಮ್ಮ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಸಣ್ಣಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್, ಬೆಲ್ಸಿಯಂ, ಫ್ರಾನ್ಸ್, ಸರೆಂಡ್, ಇಟಲಿಗಳಲ್ಲಿ ಉಪನ್ಯಾಸ ನೀಡಿರುವ ಅವರು ಇಂಗ್ಲಿಷ್ ಸ್ಟಡೀಸ್ ನಲ್ಲಿ ಡಿಪ್ಲಮೊ ಪಡೆದು ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡಿಗೆ ಭಾಷಾ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ನಡೆಸಿದರು. ಅವರು ಹೈಸ್ಕೂಲಿನಲ್ಲಿರುವಾಗಲೇ 'ಶಾರದಾಲಹರಿ' ಎಂಬ ನೀಳ್ಗವಿತೆ ಪ್ರಕಟಿಸಿದ್ದರು. ನಾಟಕ ಅಕಾಡೆಮಿಯ ಫೆಲೋಶಿಪ್ ದೊರೆತಿರುವ ...
READ MORE