ವಿಮರ್ಶಕನ ಪಾಲಿಗೆ ಒಂದು ` ಕೃತಿ ಜೀವಂತ `ಜಗತ್ತಾಗಿರುತ್ತದೆ. ತತ್ವಚರ್ಚೆ ವಿಚಾರ ಆಶಯಗಳು ಕೋಶವಾಗಿರುತ್ತದೆ. ಅದನ್ನು ಆತ ತಾನು: ಕಾಣುತ್ತಲೆ, ಇತರರಿಗೂ ಕಾಣಿಸುತ್ತಾನೆ. ಹಾಗೆ ಮಾಡುವಲ್ಲಿ ಅವನು ಹಲವು ದಾರಿ ಬಳಸುತ್ತಾನೆ. ಕೆಲವು ಪರಿಕರ ಉಪಯೋಗಿಸುತ್ತಾನೆ. ವಾಕ್‌ವಿವರ, ಸೂಚನೆ, ನಿರೀಕ್ಷಣೆ, ಸಂಕೇತ, ಆಶಯಗಳಿಂದ ವ್ಯಕ್ತಾವ್ಯಕ್ತವಾಗಿ ತಾನೇ ಚರ್ಚೆ ಹೂಡುತ್ತಾನೆ. ತನ್ನೊಂದಿಗೂ ಇತರರೊ೦ದಿಗೂ ಸಂವಾದಕ್ಕೆ ತೊಡಗಿಸುತ್ತಾನೆ. ಒಂದು ಕೃತಿ ಹೇಗೆ ನಮಗೆ ಅನೇಕ ಕಾರಣಗಳಿಂದ ಮುಖ್ಯವೆನಿಸುತ್ತದೆಯೋ, ಹಾಗೆ ವಿಮರ್ಶೆಯೂ ಮಹತ್ವ ಪಡೆಯುತ್ತದೆ. ಸೃಜನಜಗತ್ತು ಲೋಕಜೀವನಗಳು ತಮ್ಮ ವಿಮರ್ಶಗೆ ಅವಕಾಶ ನೀಡುವುದರಿಂದ, ಬೆಲೆಕೊಡುವುದರಿಂದ ಮಾತ್ರ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಲ್ಲವು.
"ಮುಂಗೈ ಕಂಕಣದ ಕನ್ನಡಿ'ಯು ನನ್ನ ಎಂಟನೆಯ ವಿಮರ್ಶಾ ಸಂಕಲನ. ಬಸವಣ್ಣನವರ ವಚನವೊಂದು "ಮುಂಗೈ. ಕಂಕಣಕ್ಕೆ ಕನ್ನಡಿಯ ತೋರುವಂತೆ, ಎನ್ನ ಮನವು ನಿಧಾನವನೊಲ್ಲದೆ ಜಲಗ ಮಚ್ಚಿತ್ತು ನೋಡಾ' ಎಂದು ಸ್ವವಿಮರ್ಶೆ, ಸಮೂಹ ವಿಮರ್ಶೆಗೆ ಕರೆ ನೀಡುತ್ತದೆ. ಅದರಿಂದ ಪ್ರೇರಿತವಾಗಿ ಸಂಕಲನಕ್ಕೆ ಈ ಹೆಸರು ಆಯ್ದುಕೊಂಡಿರುವೆ. ಇಲ್ಲಿ ಒಟ್ಟು ಹತ್ತು ಲೇಖನಗಳು ಸಂಕಲಿತಗೊಂಡಿವೆ. ಮೊದಲ ಎರಡು ಲೇಖನಗಳು ಲಿಂಗಾಯತ ಮಠಗಳಿಗೆ ಸಂಬ೦ಧ ಪಡುತ್ತವೆ. ಮೂರನೆಯದು ಬಸವಣ್ಣನವರ ಸಾಮುದಾಯಿಕ ಕಾರ್ಯಗಳ ಸ್ವರೂಪ, ಮಹತ್ವ ತಿಳಿಸುವ ಸಂಕ್ಷಿಪ್ತವಾದ ಲೇಖನ. ಸಿದ್ಧರಾಮರ ಬಗ್ಗೆ ನಾನು ಬರೆದ ಲೇಖನಗಳಲ್ಲಿ ಇಲ್ಲಿ ಮೂರು ಸೇರಿಕೊಂಡಿವೆ. ಯೋಗಿಯಾಗಿ ಮಾಡಿದ ಸಾಧನೆಗಳಿಂದ, ಜನಸೇವಾಯೋಗಿಯಾಗಿ ಮಾಡಿದ ಪ್ರಯೋಗಗಳಿಂದ, ವಿಶಿಷ್ಠ ವ್ಯಕ್ತಿತ್ವ ಹೊಂದಿದ ಅವರ ಬಗೆಗೆ ನನ್ನಲ್ಲಿ ಅಪಾರ ಗೌರವಾದರಗಳಿವೆ. ಡಾ.ಎಂ.ಎಂ.ಕಲಬುರ್ಗಿ ಅವರ ಮಾರ್ಗ ಸಂಪುಟಗಳು ಕನ್ನಡ ಸಂಶೋಧನೆಯಲ್ಲಿ ಮಹತ್ವದ ದಾಖಲೆಗಳಾಗಿದ್ದು, ಅವುಗಳ ಕುರಿತಾದ ಎರಡು ಪರಿಶೀಲನಾ ಲೇಖನಗಳೂ ಇಲ್ಲಿ ಸೇರಿವೆ. ಇವುಗಳನ್ನು ಬರೆದಾಗ ಅವರ ನಾಲ್ಕು ಸಂಪುಟಗಳು ಮಾತ್ರ ಪ್ರಕಟವಾಗಿದ್ದವು.ಈಗ ಅವರ ಇನ್ನೂ ನಾಲ್ಕು ಸಂಪುಟಗಳು ಹೊರಬಂದಿವೆ. ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠವು ಹಲವು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದೆ. ಅದರಲ್ಲಿ ಸಂಶೋಧನಾ ಮಹಾಪ್ರಬ೦ಧವೆಂದು ವಿಶ್ವವಿದ್ಯಾಲಯಗಳಿಗೆ ಸಲ್ಲಿಕೆಯಾಗಿ ಪಿಎಚ್.ಡಿ. ಪದವಿ ಪಡೆದು, ಹೊರಬಂದ ಕೃತಿಗಳನ್ನು ಪರಿಶೀಲಿಸಿದ ದೀರ್ಫಲೇಖನವು ಸಂಕಲನದ ಕೊನೆಯಲ್ಲಿದೆ.
ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’. ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...
READ MORE