ಡಾ. ಬಲಭೀಮ ಅವರ ವಿಮರ್ಶಾತ್ಮಕ ಲೇಖನಗಳ ಕೃತಿ-ಮಹಿಳಾ ಸಂವೇದನೆ. ದಲಿತ-ಬಂಡಾಯ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ, ಬದವರು ಮಾತ್ರವೇ ಬಾಡಿಗೆ ತಾಯಿಗಳೇ?, ಗೊರೂರು ಕಾದಂಬರಿಗಳ ಅವಲೋಕನ, ವಚನ ಸಾಹಿತ್ಯ: ಮಾನವೀಯ ಚಿಂತನೆಗಳು, ಮಹಿಳಾ ದಿನ....ಎಂದು?, ಸ್ತ್ರೀ ಸಂವೇದನೆ, ಎಚ್.ಗಿರಿಜಮ್ಮ ಕಾದಂಬರಿಗಳಲ್ಲಿ ವಿಮರ್ಶಾತ್ಮಕ ನೆಲೆಗಳು, ಎಚ್. ಗಿರಿಜಮ್ಮನವರ ಸಿನಿಮಾಗಳಲ್ಲಿ ಸ್ತ್ರೀ ಸಂವೇದನೆ, ಮಹಿಳೆಯರ ಶೋಷಣೆಯ ದೌರ್ಜನ್ಯಕ್ಕೆ ಕೊನೆ ಎಂದು? ಹೀಗೆ ಒಟ್ಟು 25 ಲೇಖನಗಳು ಇಲ್ಲಿ ಸಂಕಲನಗೊಂಡಿವೆ. ವಿವಿಧ ಸಾಹಿತ್ಯ ಪ್ರಾಕಾರದಲ್ಲಿ ಸ್ತ್ರೀ ಕೇಂದ್ರಿತ ವಿಷಯಗಳನ್ನು ಆಯ್ಕೆ ಮಾಡಿ ವಿಮರ್ಶೆಗೆ ಒಳಪಡಿಸಿದ ಲೇಖನಗಳು ಈ ಕೃತಿಯ ವೈಶಿಷ್ಟ್ಯ.
ಸಾಹಿತಿ ಡಾ. ಟಿ.ಎಂ. ಭಾಸ್ಕರ ಅವರು ಕೃತಿಗೆ ಮುನ್ನುಡಿ ಬರೆದು, ಮಹಿಳೆಯರು ತಮ್ಮ ಬದುಕಿನಲ್ಲಿ ಸಾಕಷ್ಟು ಸವಾಲುಗಳನ್ನು-ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದಾರೆ. ಆಧುನಿಕ ಸಂದರ್ಭದಲ್ಲಿ ಲೇಖಕರು ನಡೆಸಿದ ಮಹಿಳಾ ಕುರಿತಾದ ವಿಭಿನ್ನ ನೆಲೆಗಳಲ್ಲಿಯ ಅವಳ ಅನಿಸಿಕೆಗಳನ್ನು ಮತ್ತು ಅವಳ ದುರಂತ ಸಂಕಥನವನ್ನುಮಹಿಳಾ ಸಂವೇದನೆ ಕೃತಿಯಲ್ಲಿ ಲೇಖಕರು ದಾಖಲಿಸಿದ ಪ್ರಯತ್ನವನ್ನು ಪ್ರಶಂಸಿಸಿದ್ದಾರೆ.
ಸಾಹಿತಿ ಡಾ. ನೆಲ್ಲಿಕಟ್ಟೆ ಎನ್. ಸಿದ್ದೇಶ್ ಅವರು ಕೃತಿಗೆ ಬೆನ್ನುಡಿ ಬರೆದು ‘ ಇಲ್ಲಿಯ ಲೇಖನಗಳು ಸ್ತ್ರೀ ಸಂವೇದನೆಗೆ ಒಳ್ಳೆಯ ನಾಳೆಗಳನ್ನು ಕಾಣುವ ಕನಸುಗಳಿವೆ. ಸಂಕಷ್ಟ ಸ್ತ್ರೀ ಸಮುದಾಯಗಳು ಉಂಡಂತಹ ನೋವುಗಳಿಗೆ ತಿಲಾಂಜಲಿಯನ್ನು ಇಡುವ ಆಶಯಗಳಿವೆ. ಸ್ತ್ರೀ ಸಂವೇದನೆಯೇ ಸಾಹಿತ್ಯದ ಮಾನವೀಯ ಕಾಳಜಿಯ ನಿಜರೂಪ ಎಂಬುದನ್ನು ವಿಮರ್ಶೆಗೆ ಒಳಪಡಿಸಿದ್ದಾರೆ. ಸ್ತ್ರೀ ಸಂವೇದನೆಯ ಸಾಹಿತ್ಯ ಸಮಸ್ಯೆಗಳ ಪರಿಹಾರ ಮಾರ್ಗವಾಗಿ ನೆಲೆ ಪಡೆಯುವ ಬಗೆಯನ್ನು ಚರ್ಚಿಸಿದ್ದಾರೆ’ ಎಂದು ಲೇಖಕರ ಬರಹ ಶ್ರಮವನ್ನು ಪ್ರಶಂಸಿಸಿದ್ದಾರೆ.
ಡಾ. ಬಲಭೀಮ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾಮದವರು. ತಂದೆ ತಿಪ್ಪಣ್ಣ, ತಾಯಿ ಗೌರಮ್ಮ.ಗುಲಬಗಾ ವಿ.ವಿ.ಯಿಂದ ಬಿ.ಇಡಿ ಪದವೀಧರರು. ಕರ್ನಾಟಕ ಕೇಂದ್ರೀಯ ವಿ.ವಿ.ಯಿಂದ ಎಂ.ಎ. (ಕನ್ನಡ) ಹಾಗೂ ಕುವೆಂಪು ವಿ.ವಿ.ಯಿಂದ ‘ಡಾ.ಎಚ್. ಗಿರಿಜಮ್ಮ ಅವರ ಸಾಹಿತ್ಯ: ಸ್ತ್ರೀ ಸಂವೇದನೆಯ ನೆಲೆ’ ವಿಷಯವಾಗಿ ಪಿಎಚ್ ಡಿ ಪಡೆದಿದ್ದಾರೆ. ಸದ್ಯ, ಅಥಣಿಯ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಅತಿಥಿ ಉಪನ್ಯಾಸಕರು. ಇವರ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ರಾಷ್ಟ್ರೀಯ -ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಉಪನ್ಯಾಸಗಳನ್ನು ಮಂಡಿಸಿದ್ದಾರೆ. ಮಹಿಳಾ ಸಂವೇದನೆ-ವಿಮರ್ಶಾ ಲೇಖನಗಳ ಸಂಗ್ರಹ ಕೃತಿ. ...
READ MORE