‘ನೈಮಿತ್ತಿಕ’ ಎನ್. ಬೋರಲಿಂಗಯ್ಯ ಅವರ ರಚನೆಯ ಕಿರುಹೊತ್ತಿಗೆಯಾಗಿದೆ. ಅಡಿಗರ ಕಾವ್ಯದ ಪರವಿರೋಧದ ಕಾರಣಗಳನ್ನು ಹುಡುಕ ಹೊರಟ್ಟಿದ್ದರ ಪರಿಣಾಮವೆ ಈ 'ನೈಮಿತ್ತಿಕ' ಎಂಬ ಹೆಸರಿನ ಕಿರುಹೊತ್ತಿಗೆ, “ನೈಮಿತ್ತಿಕದ ಕುದಿಮಡಿಕೆ ತಳದಲ್ಲಿ ನಿತ್ಯದ ನಿರಾತಂಕ ಗಟ್ಟಿಯೋಡು” ಅಡಿಗರದ್ದೇ ಆದ ಈ ಸೂತ್ರಪ್ರಾಯ ವಾಕ್ಯ ಅವರ ತಾತ್ವಿಕತೆಯ ಗಣಿಯಾದ ಪೂರ್ವ ಮೀಮಾಂಸೆಯ ಕರ್ಮಕಾಂಡದ ಸಂಕ್ಷಿಪ್ತ ರೂಪ ಮಾತ್ರವಲ್ಲ ಅವರ ಕಾವ್ಯ ಭಾಷೆಯ ಸಂಕ್ಷೇಪಿತ ಪ್ರತಿಮೆ ಕೂಡ. ಕನ್ನಡ 'ನುಡಿ'ಗಳಿಗೆ ಅಡಿಗರು ತಂದುಕೊಟ್ಟಿರುವಷ್ಟು ಲಯ ವೈವಿಧ್ಯ ಮತ್ತು ಛಂದೋವಿನ್ಯಾಸಗಳನ್ನು ಕನ್ನಡದ ಬೇರಾವ ಕವಿಯೂ ತಂದುಕೊಟ್ಟಿಲ್ಲ. ಕುವೆಂಪು ಅವರ ಸಂಸ್ಕೃತ ಭೂಯಿಷ್ಠತೆಗೆ ಎದುರಾಗಿ ಅಡಿಗರು ಕನ್ನಡ ನುಡಿಗಡಣಿಸಿದಂತೆ ತೋರುತ್ತದೆ. ಅಡಿಗರ ಬಹುದೊಡ್ಡ ಸಮಸ್ಯೆಯೆಂದರೆ ಕನ್ನಡದ ಮತ್ತೊಬ್ಬ ಪ್ರತಿಭಾವಂತ ಕವಿ ಕುವೆಂಪು ಅವರ 'ಶೂದ್ರತಪಸ್ವಿ' ಪ್ರಜ್ಞೆಯ ತಾತ್ವಿಕತೆಯನ್ನು ಉಗ್ರವಾಗಿ ಪ್ರತಿಭಟಿಸತೊಡಗಿದ್ದು, ಅಡಿಗರ ಕಾವ್ಯ ಲೋಕದ ಅನೇಕ ಕಡೆ ಕುವೆಂಪು ವಿರೋಧಿ ನಿಲುವು ಕಟು ವ್ಯಂಗ್ಯ ಭಾಷೆಯಲ್ಲಿ ದಾಖಲಾಗಿದೆ. ಉದಾಹರಣೆಗಾಗಿ ಅಡಿಗರ ಪ್ರಖ್ಯಾತ ಕವನ 'ಪ್ರಾರ್ಥನೆ'ಯ ಪ್ರತಿ ನಾಯಕ ಪಾತ್ರವನ್ನೆ ಗಮನಿಸಬಹುದು. ಇದಕ್ಕೆ ಮುಖ್ಯ ಕಾರಣ ವ್ಯಕ್ತಿ ದ್ವೇಷ ಎನ್ನುವುದಕ್ಕಿಂತ ವೈದಿಕ ತಾತ್ವಿಕತೆಯ ಮುಖ್ಯ ನೆಲೆಗಳಲ್ಲೊಂದಾದ 'ವರ್ಣಸ್ಥಿರೆ'ಯ ವಿಷಯದಲ್ಲಿ ಅಡಿಗರಿಗಿದ್ದ ಅಚಲ ವಿಶ್ವಾಸ ಮತ್ತು ಕುವೆಂಪು ಅವರ ನಿಷ್ಠುರ ತಿರಸ್ಕಾರ. ನವೋದಯ ಸಾಹಿತ್ಯಾಕರ್ಷಣೆಯಿಂದ ಯಾವ ವಿಶ್ವವಿದ್ಯಾನಿಲಯವೂ ಮುಕ್ತವಾಗದಿರುವ ಮಾತು ಅನಿವಾರ್ಯಕ್ಕೆ ಸಂಬಂಧಿಸಿದಿಸಿದ್ದಾಗಿದೆ. ಆದರೆ ಇದೇ ಮಾತನ್ನು ಇಷ್ಟೆ ಖಚಿತವಾಗಿ ನವ್ಯ ಮಾರ್ಗಕ್ಕೆ ಅನ್ವಯಿಸಲಾಗುವುದಿಲ್ಲ. ಇದು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದಂತೆ ಮಾತ್ರ ತೀರ ನಿಜವಾಗಿದೆ. ನವ್ಯದ ಮಿತಿಮೇರೆಗಳೇನೇ ಇದ್ದರೂ ಅದು ಕನ್ನಡ ಅಧ್ಯಯನ ಸೀಮೆಯಿಂದ ಹೊರಗುಳಿಯುವುದು ಎಂಥ ಅಪಾಯಕಾರಿಯಾದದ್ದು ಎಂಬುದಕ್ಕೆ ಮೈಸೂರು ವಲಯದ ವಿಮರ್ಶಾಪ್ರಜ್ಞೆಗೆ ಹೊಡೆದಿರುವ ಬರಸಿಡಿಲನ್ನು ನೋಡಿದರೇ ಗೊತ್ತಾಗುತ್ತದೆ. ಕುವೆಂಪು ಅವರ ಪ್ರಸಿದ್ಧ ವಾಕ್ಯ “ವ್ಯಾಕರಣಮೇಕೆಂಬೆಯೇಂ? ಕಲ್ಲು ಮರೆವುದಕೆ” ಎಂಬ ನುಡಿಗಟ್ಟನ್ನೇ ಅನುಸರಿಸಿ ಹೇಳುವುದಾದರೆ “ವೇದೋಪನಿಷದಗಳೇಕೆಂಬೆಯೇಂ? ಕಲ್ಲುಮರೆವುದಕೆ” ಎಂದು ಹೇಳಿದರೆ ಕುವೆಂಪು ನಿರೂಪಿತ ಸಾಹಿತ್ಯ ಸಂಸ್ಕೃತಿಗೆ ಬಹುಶಃ ಸರಿಯಾಗಿಯೇ ಅನ್ವಯವಾಗುತ್ತದೆ. ಹೇಗೆಂದರೆ, ಕುವೆಂಪು ಅವರ ಸೃಜನಶೀಲತೆಯ ನಿಜವಾದ ಬೆನ್ನೆಲುಬು ತಾವು ಕಂಡುಂಡ ನಿಗೂಢ ಪ್ರಕೃತಿ ತತ್ವ ಮತ್ತು ಆಧುನಿಕ ವಿಜ್ಞಾನ ಆವಿಷ್ಕರಿಸಿ ಕೊಟ್ಟ ವೈಚಾರಿಕ ಪ್ರಜ್ಞೆ. ಕುವೆಂಪು ಮತ್ತು ಅಡಿಗರನ್ನು ಮುಖಾಮುಖಿಯಾಗಿಸಿ ಪಡೆಯಬಹುದಾದ ಸಮನ್ವಯ ಸೂತ್ರದಂತೆಯೇ ಕುವೆಂಪು ಮತ್ತು ತೇಜಸ್ವಿಯವರನ್ನು ಎದುರು ಬದರಾಗಿಸಿ ಪ್ರಗತಿಗಾಮಿ ಸೂತ್ರವೊಂದನ್ನು ಪಡೆಯಬಹುದಾಗಿದೆ. ತೇಜಸ್ವಿಯವರ ಸೃಜನಶೀಲ ಬರಹಗಳಿಗೆ ಮಾತ್ರವೇ ಮುಗಿಬೀಳುತ್ತಿರುವ ಹೊಸ ಪೀಳಿಗೆಯ ಓದುಗರು ಅವರ ಚಿಂತನಶೀಲ ಬರಹಗಳ ಕಡೆಗೂ ಗಂಭೀರವಾಗಿ ಕಣ್ಣು ಕೀಲಿಸಬೇಕಾಗಿದೆ. ತೇಜಸ್ವಿಯಿಂದ ಪಡೆಯಬಹುದಾದದ್ದು ಇಲ್ಲಿ ಬಹಳ ಇದೆ . - ಲೇಖಕ ಎನ್. ಬೋರಲಿಂಗಯ್ಯ
©2024 Book Brahma Private Limited.