ಬುದ್ಧನ ಚಿಂತನೆಯನ್ನು ಮುಂದಿಟ್ಟುಕೊಂಡು ಕೆ.ಪಿ ಮಹಾಲಿಂಗು ಕಲ್ಕುಂದ ಅವರು ‘ಪ್ರಾಚೀನ ಭಾರತದಲ್ಲಿ ವೈಚಾರಿಕತೆ’ ಎನ್ನುವ ಭೌತವಾದ ಒಳನೋಟ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯ ಮುಖೇನ ಲೇಖಕರು ಭಾರತದ ಮೂಲ ನಿವಾಸಿಗಳ ಚರಿತ್ರೆಯನ್ನು ಬಿಚ್ಚಿಡುತ್ತಾರೆ. ಕ್ರಿ.ಪೂ ಮತ್ತು ಆನಂತರದ ಭಾರತದ ಇತಿಹಾಸದಲ್ಲಿ ವೈಜ್ಞಾನಿಕ ವಿಚಾರಗಳ ಬೆಳವಣಿಗೆಗೆ ಬುದ್ಧನ ಬೌದ್ದವಾದ ಮತ್ತು ಚಾರ್ವಕ, ಲೋಕಾಯತರ ಭೌತವಾದಗಳು ಪ್ರಮುಖವಾಗಿ ಕಾರಣವೆಂಬುದನ್ನು ಈ ಕೃತಿಯಲ್ಲಿ ಚರ್ಚಿಸಿದ್ದಾರೆ. ಕೃತಿಯು 13 ಅಧ್ಯಾಯಗಳನ್ನು ಒಳಗೊಂಡಿದ್ದು, ಭಾರತದ ಇತಿಹಾಸ, ಭಾರತದಲ್ಲಿ ತತ್ವ ಚಿಂತನೆಯ ವಿಕಾಸ, ಭಾರತದಲ್ಲಿ ಜಾತಿ ಪದ್ದತಿ, ಪ್ರಾಚೀನ ಕಾಲದ ವಿಡಂಬನಾತ್ಮಕ ಪದ್ದತಿಗಳು, ಪ್ರಾಚೀನ ಭಾರತದಲ್ಲಿ ಭೌತವಾದ ನೆಲೆಗಳು, ಪ್ರಾಚೀನ ಭಾರತದಲ್ಲಿ ವೈಚಾರಿಕ ಮತಗಳ ಉಗಮ, ಪ್ರಾಚೀನ ಭಾರತದಲ್ಲಿ ವೈಚಾರಿಕ ಕಾಲಘಟ್ಟ, ಲೋಕಾಯತ, ಚಾರ್ವಾಕ ದರ್ಶನ, ಪರಿವರ್ತನೆಯ ಪಥದಲ್ಲಿ ಚಾರ್ವಾಕರು, ಪ್ರಾಚೀನ ಬೌದ್ದವಾದದ ವೈಚಾರಿಕತೆ, ಪ್ರಾಚೀನ ಬೌದ್ಧ ಕಾಲದಲ್ಲಿ ಧರ್ಮ ಮತ್ತು ಜ್ಞಾನ ಇತ್ಯಾದಿ ಈ ಅಧ್ಯಾಯ ಒಳಗೊಂಡಿದೆ.
ಲೇಖಕ ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ ಅವರು ಮೂಲತಃ ಮೈಸೂರಿನ ನಂಜನಗೂಡು ತಾಲ್ಲೂಕಿನ ಕಲ್ಕುಂದ ಗ್ರಾಮದವರು. ಚಳವಳಿಯ ಹಿನ್ನೆಲೆಯಿಂದ ಬಂದ ಇವರು ರಾಗ-ದ್ವೇಷದ ನೆಲೆಗಟ್ಟಿನಿಂದ ಮೇಲೆದ್ದು, ಬುದ್ಧಿಯ ಚುರುಕಿನಿಂದ ವಿವೇಕದ ಹಾದಿಯಲ್ಲಿ ನಡೆದವರು. ದಸಂಸ ನಾಯಕತ್ವ ವಹಿಸಿಕೊಂಡು ಅಸತ್ಯತೆಯನ್ನು ಹರಿತ ನಾಲಿಗೆಯಿಂದ ಖಂಡಿಸಿದ ವ್ಯಕ್ತಿ. ಇವರ ಸಂಶೋಧನಾ ವಿಷಯವೂ ಕೂಡ ಚಳವಳಿ ಕುರಿತಾದ ಅಧ್ಯಯನವೇ. ಇವರ ನಾರಾಯಣ ಗುರುಗಳ ವೈಚಾರಿಕತೆ ಕುರಿತ “ಒಂದೇ ಜಾತಿ-ಒಂದೇ ಧರ್ಮ-ಒಂದೇ ದೇವರು” ಎಂಬ ಕೃತಿಯು ನಾರಾಯಣ ಗುರುಗಳ ಆಧ್ಯಾತ್ಮಿಕ ಚಿಂತನೆಗಳನ್ನು ಸಮರ್ಪಕವಾಗಿ ಬಿಂಬಿಸುತ್ತದೆ. ...
READ MORE