ಕೃತಿಯೊಳಗೆ ವೈಚಾರಿಕ ಲೇಖನ, ವ್ಯಕ್ತಿ ಪರಿಚಯ, ಸಂದರ್ಶನ ಎನ್ನುವ ಮೂರು ವಿಭಾಗಗಳಿವೆ. ಸಾಹಿತ್ಯ, ಜಾಗತೀಕರಣ, ರೈತರ ಆತ್ಮಹತ್ಯೆ, ಶಿಕ್ಷಣದ ಕುರಿತ ಕಾಳಜಿ, ಸಹಬಾಳ್ವೆ, ಸಾಮಾಜಿಕ ಪ್ರಜ್ಞೆ, ಕಲೆ, ನೈತಿಕತೆ, ಯುವಜನತೆ, ನಾಯಕತ್ವ ಮೊದಲಾದ ವಿಷಯವನ್ನು ವೈಚಾರಿಕ ವಿಭಾಗ ಒಳಗೊಂಡಿದೆ. ವಿಷಯದ ಆಳಕ್ಕೆ ಲೇಖನಗಳು ಇಳಿಯದೇ ಇದ್ದರೂ, ಧನಾತ್ಮಕವಾದ ಉದ್ದೇಶಗಳೊಂದಿಗೆ ಎಲ್ಲ ಲೇಖನಗಳು ಮುಗಿಯುತ್ತವೆ. ವ್ಯಕ್ತಿ ಪರಿಚಯದಲ್ಲಿ ಎಚ್. ಎಸ್. ನರಸಿಂಹಮೂರ್ತಿ, ಪಟೇಲ್ ಆರ್ ಮುನಿಶಾಮಿಗೌಡ, ಎಂ. ಆರ್. ನಾಗರಾಜರಾವ್, ಅಂಗಡಿ ಚಿಕ್ಕಣ ಇವರ ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಹಾಗೆಯೇ ಮೂರು ವಿಭಿನ್ನ ಮನಸ್ಸುಗಳು ಎನ್ನುವ ಹೆಸರಲ್ಲಿ ಲಕ್ಷ್ಮಣರಾವ್, ಡಾ. ರಂಗಾರೆಡ್ಡಿ ಕೋಡಿರಾಂಪುರ, ಸಾ. ನಾ. ಲಕ್ಷಣ ಗೌಡರ ಜೊತೆಗಿನ ಮಾತುಕತೆಗಳಿವೆ. ಭಾಷೆ ಜೀವನದ ಉಸಿರಿದ್ದಂತ ತಲೆಬರಹದಲ್ಲಿ ಡಾ. ಎಲ್. ಜಿ. ಮೀರಾ ಅವರ ಸಂದರ್ಶನ ಇದೆ. ಸಾಹಿತ್ಯ ಕ್ರಾಂತಿ ಅನಿವಾರ್ಯವೆ? ಎನ್ನುವ ಪ್ರಶ್ನೆಯನ್ನಿಟ್ಟು ಡಾ. ರಂಗಾರೆಡ್ಡಿ ಕೋಡಿರಾಂಪುರ ಅವರ ಸಂದರ್ಶನವಿದೆ. ಕಿರಿದಾದ ಬರಹಗಳ ಮೂಲಕ ಹಿರಿದಾದುದನ್ನು ಹೇಳುವ ಪ್ರಯತ್ನ ಈ ಕೃತಿಯಲ್ಲಿದೆ.