ಲೇಖಕ ನರಸಿಂಹಮೂರ್ತಿ ಹೂವಿನಹಳ್ಳಿ ಅವರ ವಿಮರ್ಶಾ ಲೇಖನಗಳ ಕೃತಿ-ವರ್ತಮಾನದ ಓದಿನ ನೆಲೆಗಳು. ಓದು-ಬರಹ ಎರಡೂ ಕಡಿಮೆಯಾಗುತ್ತಿರುವ ಇಂದಿನ ವರ್ತಮಾನದಲ್ಲಿ ಗಂಭೀರ ಚಿಂತನೆಗೆ ಓದುಗರನ್ನು ಸೆಳೆಯುವ ಇಲ್ಲಿಯ ಲೇಖನಗಳು ಸಂಶೋಧನಾತ್ಮಕವಾಗಿಯೂ ಮಹತ್ವ ಪಡೆದುಕೊಳ್ಳುತ್ತವೆ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಡಾ. ರಾಜಪ್ಪ ದಳವಾಯಿ ‘ಪಂಪನ ಕಾಲದ ಚಿತ್ರಣಗಳನ್ನು ಸಮಕಾಲೀನ ಸಂದರ್ಭಕ್ಕಿಟ್ಟು ನೋಡುವ ನೋಟವು ಭಿನ್ನವಾಗಿದೆ. ಪಂಪ ಭಾರತದ ರಾಜನೀತಿಯು ಸಮಕಾಲೀನ ರಾಜನೀತಿಯ ಜೊತೆ ತಳುಕು ಹಾಕಿಕೊಂಡು ಸಾಗುವ ಚಿಂತನಾ ಕ್ರಮ ಈ ಕೃತಿಯಲ್ಲಿ ಮುಖ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿವಾಹ ಮುಂದುವರಿಕೆ, ಪ್ರೇಮ-ಕಾಮ, ನಾಗರಿಕತೆ, ವಿಜ್ಞಾನ, ತಂತ್ರಜ್ಞಾನ, ಸ್ತ್ರೀಯರ ಅಪಹರಣ, ಯುದ್ಧ, ಸಂಘರ್ಷ, ಕೃಷ್ಣನ ರಾಜಕೀಯ ಚಮತ್ಕಾರ, ಕುರುರಾಜನ ಅಧಿಕಾರದ ಆಸೆ, ಇಂದಿನ ಪ್ರಜಾಡಳಿತ ನಾಯಕರ ಅಧಿಕಾರದ ಆಸೆ ಇತ್ಯಾದಿ ವಿಷಯಗಳಡಿ ಲೇಖಕರು ವಿಶ್ಲೇಷಿಸಿದ್ದಾರೆ.
ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಅವರು ಹುಟ್ಟಿದ್ದು ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಐ.ಡಿ.ಹಳ್ಳಿ ಹೋಬಳಿಯ ಹೂವಿನಹಳ್ಳಿಯಲ್ಲಿ. ಕನ್ನಡದಲ್ಲಿ ಎಂ.ಎ ಪದವಿ ಪಡೆದು, ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ ಎಂಬ ವಿಷಯದಲ್ಲಿ ಮಹಾ ಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ವರಕವಿ ಬೇಂದ್ರೆ ಕಾವ್ಯಗಳ ಅಧ್ಯಯನ(ಲೇಖನಗಳು), ಮೌನದ ಸೆರಗು(ಕವಿತೆಗಳು), ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ(ತೌಲನಿಕ ಅಧ್ಯಯನ), ಕನಕದಾಸರ ಕೃತಿಗಳಲ್ಲಿ ಸಮಾನತಾ ಸಮಾಜ (ವಿಮರ್ಶಾ ಲೇಖನಗಳು), ದೇವರ ಜಾತ್ರೆ(ಕಾದಂಬರಿ), ಅರಿವಿನ ಕನ್ನಡಿ(ವಿಮರ್ಶಾ ಸಂಕಲನ), ...
READ MORE‘ವರ್ತಮಾನದ ಓದಿನ ನೆಲೆಗಳು’ ಕೃತಿಯ ವಿಮರ್ಶೆ
‘ವರ್ತಮಾನದ ಓದಿನ ನೆಲೆಗಳು’ ಭಿನ್ನ ಬಗೆಯಲ್ಲಿ ಪ್ರಾಚೀನ ಕಾವ್ಯ, ಜನಪದ ಕಾವ್ಯಗಳು, ಆಧುನಿಕ ಮಹಾಕಾವ್ಯ. ಕಾದಂಬರಿ ಕತೆ ಕುರಿತ ವಿವರಗಳನ್ನು ಒಳಗೊಂಡ ಈ ವಿಮರ್ಶಾ ಕೃತಿಯು ಪೂರ್ವದ ಪಠ್ಯಗಳನ್ನು ವರ್ತಮಾನದ ವಿವರಗಳನ್ನು ಸಮೀಕರಿಸಿ ಚರ್ಚಿಸುತ್ತದೆ. ಆ ದೃಷ್ಠಿಯಿಂದಲೇ ಇದು ವರ್ತಮಾನದ ಓದು ಆಗಿದೆ. ಆ ಮೂಲಕವಾಗಿ ವಿಮರ್ಶಕರಾದ ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಅವರು ತಾವೊಬ್ಬ ಮುಖ್ಯ ವಿಮರ್ಶಕರೆಂಬುದನ್ನು ಸಾಬೀತುಪಡಿಸಿದ್ದಾರೆ. ವಿಮರ್ಶಕರು ಇಲ್ಲಿ ಎರಡು ನೆಲೆಗಳಲ್ಲಿ ಮುಖ್ಯವೆನಿಸುತ್ತಾರೆ. ಒಂದು ಪೂರ್ವ ಕೃತಿಯನ್ನು ವಿಶ್ಲೇಷಕರಾಗಿ ಮತ್ತು ವರ್ತಮಾನದ ವಿಷಯದ ಜೊತೆ ಕಂಟೆಂಟನ್ನು ತಗುಲಿಸಿ ವ್ಯಾಖ್ಯಾನಿಸುವುದರೊಂದಿಗೆ. ಈ ಹಿನ್ನೆಲೆಯಲ್ಲಿ ಇಲ್ಲಿ ಪೂರ್ವ ಕೃತಿಗಿಂತಲೂ, ಅದು ಪ್ರಭಾವಿಸುವ ವಲಯಕ್ಕಿಂತ ಸಮಕಾಲೀನ, ಅರ್ಥದ ಸಾಧ್ಯತೆಗಳು ಮುಖ್ಯವಾಗಿರುತ್ತದೆ. ಮೊದಲ ಮಾತನ್ನು ಮತ್ತೆ ನೆನಪಿಸುತ್ತ, ವಿಮರ್ಶಕ ತನ್ನ ಕಾಲದ ತನ್ನದೇ ಆದ ಭಾಷೆಯನ್ನು ಸ್ವಜಿಸುತ್ತಿರುತ್ತಾನೆ. ಆ ಭಾಷೆಯಲ್ಲೇ ಕೃತಿಯನ್ನು ಆಧರಿಸಿದ ಮೌಲ್ಯವನ್ನು ಬೆಲೆಗಟ್ಟುವ ಕೆಲಸವನ್ನು ಮಾಡುತ್ತಿರುತ್ತಾನೆ. ‘ವರ್ತಮಾನದ ಓದಿನ ನೆಲೆಗಳು’ ಅಂತಹ ಒಂದು ವಿಮರ್ಶಾ ಸಂಕಲನವಾಗಿದೆ. ಈ ಕೃತಿಯು ಎತ್ತುವ ಪ್ರಶ್ನೆಗಳಿಗೆ ಉತ್ರರಿಸುವುದು ಸುಲಭದ ಕೆಲಸವಲ್ಲ. ನಮ್ಮ ಬದುಕು ಎದುರಿಸುವ ಬಿಕ್ಕಟ್ಟನ್ನು ಈ ಸಂಕಲನವೂ ಎದುರಿಸುತ್ತಿದೆ. ಆದರಿಂದಲೇ ವಿಮರ್ಶೆ ಎಂದರೆ ಚರ್ಮಿತ ಚರ್ವಣವಲ್ಲ. ಬದಲಿಗೆ ಕೃತಿಯ ಮೂಲಕ ಜೀವನಕ್ಕೆ ಚೈತನ್ಯವನ್ನು ತರುವುದೇ ಆಗಿದೆ. ಅಂತಹ ಭಾಷೆಯ ಮೂಲಕ ಚೈತನ್ಯ ತರುವ ವಿಮರ್ಶೆ ಇಲ್ಲಿದೆ. ಕೃತಿ-ಮೌಲ್ಯ ಎರಡೂ ನೆಲೆಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ಹೆಚ್ಚು ಹೆಚ್ಚು ಸೂಕ್ಷ್ಮವಾದ ಮನಸ್ಸನ್ನು ಕಟ್ಟುವ ಆರೋಗ್ಯಕರ ಚಿಂತನೆಯು ಈ ಕೃತಿಯುದ್ದಕ್ಕೂ ಇರುವುದನ್ನು ನಾವು ಕಾಣಬಹುದಾಗಿದೆ.
(ಕೃಪೆ : ವಾರ್ತಾಭಾರತಿ, ಬರಹ : ಕಾರುಣ್ಯ)