ಲೇಖಕ ಡಾ. ಚಿ.ಸಿ. ನಿಂಗಣ್ಣ ಅವರ ಕೃತಿ-ಸ್ಪಂದನ. ಸಾಂದರ್ಭಿಕವಾಗಿ ಬರೆದ ಲೇಖನಗಳ ಸಂಕಲನವಿದು. ಈ ಕೃತಿಯಲ್ಲಿ ಮಮತೆಯಿರಲಿ ಮಕ್ಕಳ ಮ್ಯಾಲೆ, ವಿಶ್ವದ ಪ್ರಥಮ ವಿಚಾರವಾದಿ ಬಸವಣ್ಣ, ಸಾಹಿತ್ಯ ಸಮ್ಮೇಳನಗಳು ಅನುಭವ ಮಂಟಪಗಳಾಗಲಿ, ನೆಲಕಿರುವೆನೆಂದು ಬಗೆದಿರೆ ಚಲಕಿರುವೆಂ, ಶಿವಾಜಿ ಒಬ್ಬ ಧರ್ಮಾತ್ಮ ಆದರೆ ಧರ್ಮದ್ವೇಷಿಯಲ್ಲ, ಯುವಜನತೆಗೆ ಸರ್ವಕಾಲಕ್ಕೂ ಸ್ಫೂರ್ತಿದಾಯಕರಾದ ಸ್ವಾಮಿವಿವೇಕಾನಂದರು, ಜಾಗತೀಕರಣದಲ್ಲಿ ಜಗಮಗಿಸುವ ಜಾತ್ರೆಗಳು, ವರ್ತಮಾನದ ತಲ್ಲಣಗಳಲ್ಲಿ ಯುವಸಮೂಹ, ಸರಕಾರ ಮತ್ತು ಖಾಸಗೀಕರಣ, ನಾಡೋಜ ದೇಜಗೌ ಅವರೊಂದಿಗೆ ಒಂದಿಷ್ಟು ಮಾತು ಹೀಗೆ ಒಟ್ಟು ಹತ್ತು ಪ್ರಮುಖ ಲೇಖನಗಳಿವೆ.
ನಮ್ಮ ಸುತ್ತ-ಮುತ್ತ ನಡೆಯುವ ವರ್ತಮಾನದ ವಿಧ್ಯಮಾನಗಳಿಗೆ ಸ್ಪಂದಿಸಿ, ಸಮಾಜಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂಬುದಕ್ಬಕೆ ಈ ಕೃತಿ ಕನ್ನಡಿ ಹಿಡಿಯುತ್ತದೆ. ನಾಡು-ನುಡಿ, ತಾಯಿ-ಮಗುವಿನ ಮೇಲಿನ ವಾತ್ಸಲ್ಯ, ಕೌಟುಂಬಿಕ ಸಂಬಂಧಗಳ ಗಟ್ಟಿತನ, ದೇಶಿಯ ಸಾಹಿತ್ಯ, ಕಲೆ, ಸಂಸ್ಕೃತಿ, ಆಡಳಿತ, ಪ್ರಜಾಪ್ರಭುತ್ವದಲ್ಲಿ ನಡೆಯುವ ತಂತ್ರಗಾರಿಕೆಗೆ ಮಹಾಭಾರತದ ಪಾತ್ರಗಳೊಂದಿಗೆ ಜನನಾಯಕರ ಮನಸ್ಥಿತಿ, ಸಮಾಜ, ಶಿಕ್ಷಣ, ಸರಕಾರ ಮತ್ತು ಖಾಸಗೀಕರಣ ಬೇಕು ಬೇಡಿಕೆಗಳ, ಜಾಗತೀಕರಣ ಮತ್ತು ವರ್ತಮಾನದ ತಲ್ಲಣಗಳ ಕುರಿತ ಲೇಖನಗಳು ವೈಚಾರಿಕ ಶಕ್ತಿಯ ಹಿನ್ನೆಲೆಯಲ್ಲಿ ವಿಮರ್ಶಾತ್ಮಕ ಗುಣದೊಂದಿಗೆ ಸುದೀರ್ಘವಾಗಿ ಚರ್ಚಿಸಲಾಗಿದೆ,
ಲೇಖನ ಒಂದರಲ್ಲಿ, ಆಧುನಿಕ ರಾಜಕಾರಣ ಗಳ ಮೋಸ, ವಂಚನೆ, ಸ್ವಾರ್ಥ, ಅಧಿಕಾರದ ಅಹಂಕಾರದೊಂದಿಗೆ ವರ್ತಿಸುವ ಚಿತ್ರಣ ಒಂದೆಡೆಯಾದರೆ, ಕಲಿಯುಗದ ರಾಜಕಾರಣ ಗಳಿಗೆ ಈಡಿ, ಆಯ್‍ಟಿ, ಸಿಬಿಐ. ಸಂಸ್ಥೆಗಳು ಭಯಾನಕವಾಗಿವೆ, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿನ ಕ್ರೂರತೆ, ಅನ್ಯಾಯ, ಭ್ರಷ್ಟಾಚಾರ, ನಗ್ನ ನಂಗಾನಾಚ್, ನಿಸರ್ಗ ಸಂಪತ್ತಿನ ಲೂಟಿ, ಕುಟುಂಬ ರಾಜಕಾರಣ ಮತ್ತು ರಾಜಕೀಯ ಪಕ್ಷಗಳ ಹೈಕಮಾಂಡಿನ ಕೆಟ್ಟದೋರಣೆಯಿಂದ ಜನನಾಯಕನ ಸಿಟ್ಟು ಹೀಗೆ ಬರಹಕ್ಕೆ ಕಸುವು ತಂದು ಕೊಡುವ ಅಂಶಗಳಿವೆ.
.ಕಲಿಯುಗದ ರಾಜಕಾರಣ ಗಳು ಸ್ವಾರ್ಥಕ್ಕಾಗಿ ಏನೆಲ್ಲ ಸೋಗಲಾಡಿತನದ ಚಿತ್ರಣವಿದೆ. “ಒಳಹೊಕ್ಕು ನೋಡೆ ಭಾರತದೊಳಗಣ ಕಥೆಯಲ್ಲ ಇದು ಕ್ರೂರ ಅವ್ಯವಸ್ಥೆ ಚಿತ್ರಣಂ” ಎನ್ನುವಲ್ಲಿ ಆಧುನಿಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ನಮ್ಮನ್ನಾಳುವ ನಾಯಕರು, ಅಧಿಕಾರ ಶಾಹಿವರ್ಗದ ಅನ್ಯಾಯ, ಮೋಸ, ಸ್ವಾರ್ಥಗಳ ಕುರಿತು ಲೇಖನದಲ್ಲಿ ವಿಮರ್ಶಾತ್ಮಕವಾಗಿ ಮೂಡಿಬಂದಿದೆ.
ವೈಚಾರಿಕತೆಯ ಹಿನ್ನೆಲೆಯಲ್ಲಿ ಸಮಾಜವನ್ನು ಜಾಗೃತಗೊಳಿಸುವ, ಓದುಗರಲ್ಲಿ ವಿವೇಚನಾಶಕ್ತಿ ಬೆಳೆಸುವದಕ್ಕೆ ಈ ಕೃತಿಯು ಮಾರ್ಗದರ್ಶನ ಮಾಡುತ್ತದೆ. ಇಲ್ಲಿಯ ಲೇಖನಗಳಿಗೆ ಸಾವಿರವರ್ಷಗಳ ಬೀಸು ಇದೆ. ಆದಿಕವಿ ಪಂಪ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ಕುರಿತ ಲೇಖನಗಳು ಹರಳುಗಟ್ಟಿವೆ, ವರ್ತಮಾನ ತಲ್ಲಣಗಳು ಸಾಮಾನ್ಯ ಜನರಲ್ಲಿ ಅಭದ್ರತೆ ಕುರಿತು ಚಿಂತಿಸುತ್ತದೆ. ಖಾಸಗೀಕರಣ ಮತ್ತು ಜಾಗತೀಕರಣದಿಂದ ದೇಶಿಯ ಸಾಹಿತ್ಯ, ಸಂಸ್ಕೃತಿ ಮತ್ತು ಗುಡಿ ಕೈಗಾರಿಕೆಗಳ ಮೇಲೆ ದುಷ್ಟಪರಿಣಾಮ ಬೀರುವುದಿರೊಂದಿಗೆ ಭಾರತೀಯರ ಅಸ್ಮಿತೆಗೂ ಪೆಟ್ಟು ನೀಡಿರುವುದನ್ನು ಲೇಖಕರು ಚರ್ಚಿಸಿದ್ದಾರೆ. ಭೂತ ಹಾಗೂ ವರ್ತಮಾನದಲ್ಲಿ ಬೆಳಕಿನಲ್ಲಿ ಭವಿಷ್ಯತ್ತನ್ನು ಕಟ್ಟಿಕೊಡುವ ಹಂಬಲದೊಂದಿಗೆ ವೈಚಾರಿಕ ಪರಂಪರೆಯಲ್ಲಿ ರೂಪಿಸಿದ ಮಾನವಿಯ ಪ್ರಜ್ಞೆಯನ್ನು ಸ್ಪಂದನಾ ಕೃತಿಯಲ್ಲಿ ವಿಸ್ತರಿಸಲು ಪ್ರಯತ್ನಿಸಿದ್ದಾರೆ.
ಯಾವುದೆ ಪಂಥಕ್ಕೆ ಅಂಟಿಕೊಳ್ಳದೆ ದೇಶದ ಸಮಗ್ರತೆ, ಐಕ್ಯತೆಯ ನೆಲಗಟ್ಟಿನ ತಮ್ಮ ಬರಹದಲ್ಲಿ ಮನುಷ್ಯ ಸಂಬಂಧಗಳ ಕುರಿತಾದ ಅನ್ವೇಷಣೆ ಅನುಸಂಧಾನಗಳು ಮುಖ್ಯ ಕಾಳಜಿಯಾಗಿರುವುದನ್ನು ಸೂಚಿಸುತ್ತವೆ. ಚಿಂತನಶೀಲತೆಗೆ ಉದಾಹರಣೆಯಾಗುವ ವಿಮರ್ಶಾ ಕೃತಿ ಇದು.
©2024 Book Brahma Private Limited.