ಸಾಹಿತ್ಯ ವಲಯದಲ್ಲಿ ಮಾರ್ಕ್ಸ್‌ವಾದಿ ವಿಮರ್ಶೆಗೆ ವಿಶಿಷ್ಟ ಸ್ಥಾನವಿದೆ. ಕನ್ನಡದಲ್ಲಿ ಈ ಬಗೆಯ ಸಾಹಿತ್ಯ ವಲಯ ೭೦ರ ದಶಕಕ್ಕೂ ಹಿಂದೆ ಅಲ್ಲಲ್ಲಿ ಕೇಳಿ ಬರುತ್ತಿತ್ತು. ಆದರೆ ಇಡಿಯಾಗಿ ಮಾರ್ಕ್ಸ್ ಸಾಹಿತ್ಯ ವಿಮರ್ಶೆಯನ್ನು ವಿವರಿಸುವ ಪುಸ್ತಕ ಲಭ್ಯವಿರಲಿಲ್ಲ. ಆ ಕೊರತೆಯನ್ನು ನೀಗಿಸಲು 1979ರಲ್ಲಿ ಎಡಪಂಥೀಯ ಚಿಂತಕರ ವಿಚಾರ ಸಂಕಿರಣವೊಂದನ್ನು ಏರ್ಪಡಿಸಲಾಯಿತು. ಅಲ್ಲಿ ಮಂಡನೆಯಾದ ವಿಚಾರಗಳ ಸಂಗ್ರಹ ಪ್ರಸ್ತುತ ಕೃತಿ. ಭಾರತೀಯ ಭಾಷೆಗಳ ಸಾಹಿತ್ಯ ಕುರಿತಂತೆ ಕನ್ನಡದಲ್ಲಿ ಪ್ರಕಟವಾದ ಮೊದಲ ಮಾರ್ಕ್ಸ್‌ವಾದಿ ಅನ್ವಯಿಕ ಸಾಹಿತ್ಯ ವಿಮರ್ಶೆಗಳ ಸಂಕಲನ ಎಂಬ ಅಗ್ಗಳಿಕೆ ಕೃತಿಗೆ ಇದೆ.
ಬರಗೂರು ರಾಮಚಂದ್ರಪ್ಪ, ಕೆ. ಕುಟುಂಬರಾವ್, ಡಾ. ಕೆ. ಕೈಲಾಸಪತಿ, ಚಿತ್ರಲೇಖ ಮೌನಗುರು, ಪಿ. ಗೋವಿಂದ ಪಿಳ್ಳೆ, ಸುಧೀರ್ ಬೇಡೇಕರ್, ಸುದೀಶ್ ಪಚೌರಿ, ಅವಂತಿ ಕುಮಾರ್ ದವೆ, ಸುಧಾಕರ್ ಜೋಷಿ, ಅನಿಲ್ ಬಾಂದೇಕರ್, ಸುತೀಂದರ್ ಸಿಂಗ್ ನೂರ್, ಡಾ. ಮುಹಮ್ಮದ್ ಹಸನ್, ಮೋದಿಲಾಲ್ ಸಾಕಿ, ಬಿ. ಗಂಗಾಧರ ಮೂರ್ತಿ, ಕೆ. ಪಿ. ವಾಸುದೇವನ್ ಅವರು ಮಾರ್ಕ್ಸ್‌ವಾದಿ ಸಾಹಿತ್ಯ ವಿಮರ್ಶೆಯನ್ನೇ ಕೇಂದ್ರೀಕರಿಸಿ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ.
ಹೊಸಗನ್ನಡ ಸಾಹಿತ್ಯದ ವರ್ಗ ಸ್ವಭಾವ, ತೆಲುಗು ಸಾಹಿತ್ಯದಲ್ಲಿ ವರ್ಗಸೃಷ್ಟಿ, ಆಧುನಿಕ ತಮಿಳು ಸಾಹಿತ್ಯದ ವರ್ಗ ತಳಪಾಯ, ಮಲಯಾಳಂ ಪ್ರಗತಿಶೀಲ ಸಾಹಿತ್ಯದ ಪುನಶ್ಚತನ, ಮರಾಠಿ ಸಾಹಿತ್ಯದ ಸಾಮಾಜಿಕ - ಸ್ತರಗಳು, ಸಮಕಾಲೀನ ಹಿಂದಿ ಸಾಹಿತ್ಯದ ಆಯಾಮಗಳು, ಗುಜರಾತಿ ಸಾಹಿತ್ಯ ಮತ್ತು ಸಾಮಾಜಿಕ ಪ್ರಜ್ಞೆ, ಸಮಕಾಲೀನ ಮರಾಠಿ ಸಾಹಿತ್ಯದಲ್ಲಿ - ಅಸ್ಮಿತೆಯ ಪ್ರಶ್ನೆ, ಆಧುನಿಕ ಪಂಜಾಬಿ ಸಾಹಿತ್ಯದ ವರ್ಗಸೆಲೆ ಮತ್ತು ಸಮಸ್ಯೆಗಳು, ಉರ್ದು ಸಾಹಿತ್ಯದ ವರ್ಗನೆಲೆ, ಕಾಶ್ಮೀರಿ ಸಾಹಿತ್ಯದಲ್ಲಿ ಜನಪರ ಕಾಳಜಿ, ಮಾರ್ಕ್ಸ್‌ವಾದಿ ವಿಮರ್ಶೆಯ ಕೆಲವು ಸಮಸ್ಯೆಗಳು ಹೀಗೆ ಭಾಷೆ ಮತ್ತು ಸಾಹಿತ್ಯವನ್ನು ನೆಪವಾಗಿಟ್ಟುಕೊಂಡು, ದೇಶದ ವಿವಿಧ ಭಾಗಗಳಲ್ಲಿ ಹರಡಿಕೊಂಡಿರುವ ವರ್ಗ ಸಂಘರ್ಷವನ್ನು ವಿವರಿಸಲಾಗಿದೆ.
ಲೇಖಕ ಪ್ರೊ. ಬಿ. ಗಂಗಾಧರ ಮೂರ್ತಿ ಅವರು ಮೂಲತಃ ಹೊಳೆನರಸೀಪುರದವರು. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ಸುಮಾರು 30 ಬೊಧನೆ ಮಾಡಿದವರು. ’’ನವ್ಯ ಕತೆಗಳು” ಅವರು ಬರೆದ ವಿಮರ್ಶಾ ಲೇಖನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ ನೀಡಿ ಗೌರವಿಸಿದೆ. ಅನುವಾದ ಕ್ಷೇತ್ರದಲ್ಲಿ ಇವರ ಸೇವೆ ಗಮನಿಸಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರಶಸ್ತಿ ನೀಡಿ ಗೌರವಿಸಿದೆ. ಸೂಫಿ ಕಲ್ಚರ್ ಸಂಪಾದಕ ಸಮಿತಿಯಲ್ಲಿ ಪ್ರವಾಚಕರಾಗಿದ್ದರು. ಭಾರತ ಜ್ಞಾನ-ವಿಜ್ಞಾನ ಸಮಿತಿ ಪ್ರಕಟಿಸುತ್ತಿದ್ದ ‘ಟೀಚರ್’ ಮಾಸಿಕದ ಮುಖ್ಯ ಸಂಪಾದಕರಾಗಿದ್ದರು. ಕರ್ನಾಟಕದ ಗೌರಿಬಿದನೂರು ನಗರದಲ್ಲಿ ವಾಸವಿದ್ದು, ವಿದುರಾಶ್ವತ ಫ್ರೀಡಂ ಮೆಮೊರಿಯಲ್ ಮ್ಯೂಜಿಯಂ ಸಂಸ್ಥೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ...
READ MORE