ಎಲ್ಲದರಲ್ಲಿ ಎಲ್ಲವಿದೆ

Author : ಗುರುಪಾದ ಮರಿಗುದ್ದಿ

Pages 114

₹ 100.00




Year of Publication: 2015
Published by: ಸಿವಿಜಿ ಪಬ್ಲಿಕೇಷನ್‌
Address: ನಂ : 70 2ನೇ ಮುಖ್ಯ ರಸ್ತೆ, ಜಬ್ಬಾರ ಬ್ಲಾಕ್‌, ವೈಯಾಲಿಕಾವಲ್‌ಬೆಂಗಳೂರು-560003

Synopsys

ಇಲ್ಲಿ ವಿಮರ್ಶೆಯ ವಿಮರ್ಶೆ ಕೂಡಾ ಇದೆ. ಒಟ್ಟು ಎಂಟು ಭಾಗಗಳಲ್ಲಿ ಕುವೆಂಪು ಸಾಹಿತ್ಯದ ಅಪೂರ್ವತೆ, ಅನನ್ಯತೆಗಳನ್ನು ವಿವರಿಸಿದ್ದಾರೆ. 1) ವಾಸ್ತವತೆಯ ಮಹಾಮಾರ್ಗ 2)ಕುವೆಂಪು ಕಾದಂಬರಿಗಳ ಸಾಂಸ್ಕೃತಿಕ ಸ್ವರೂಪ 3) ಕುವೆಂಪು ಕಾದಂಬರಿಗಳಲ್ಲಿ ಭಾಷಾ ಬಳಕೆ ಮತ್ತು ಅಭಿವ್ಯಕ್ತಿ ವಿಧಾನಗಳು 4) ಮಲೆಗಳಲ್ಲಿ ಮದುಮಗಳುದಲ್ಲಿ ಮನುಷ್ಯೇತರ ಸಂಬಂಧಗಳು 5) ಕುವೆಂಪು ಅವರ ಕಿಂಕಿಣಿ 6) ಕುವೆಂಪು ಗದ್ಯ ಕೃತಿಗಳು (ಸೃಜನ) 7) ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ  8) ಕುವೆಂಪು ಸಾಹಿತ್ಯದ ನಾಲ್ಕು ಪ್ರಜ್ಞೆಗಳು.

ಮರಿಗುದ್ದಿಯವರು ಗುರುತಿಸಿರುವ ಕುವೆಂಪು ಸಾಹಿತ್ಯದ ನಾಲ್ಕು ಪ್ರಜ್ಞೆಗಳು ಒಂದರೊಳಗೊಂದು ಸೇರಿ ಕಾರ್ಯವೆಸಗುತ್ತವೆ. ಅಲ್ಲಿ ಸಾಮರಸ್ಯವಿದೆ, ವೈರುದ್ಧ್ಯವಿಲ್ಲ. ಅದನ್ನೇ ಮರಿಗುದ್ದಿಯವರು  “ಪ್ರಾದೇಶಿಕ ಭಾಷೆ ಸಾಹಿತ್ಯ ಸಂಸ್ಕೃತಿಗಳನ್ನು ಪ್ರೀತಿಸಿ ಉಳಿಸಿಕೊಂಡು ಬರುವುದರಿಂದ ದೇಶದ ರಾಷ್ಟ್ರೀಯತೆಗೆ ಎಂದಿಗೂ ಪೆಟ್ಟು ಬೀಳಲಾರದು. ಅವರು ಖಂಡಿತವಾಗಿ ಹೇಳಿದ್ದಾರೆ. ನಿಜವಾಗಿ ಆಲೋಚಿಸಿ ನೋಡಿದರೆ ಈ  ಪ್ರಾದೇಶಿಕ ವೈಶಿಷ್ಟ್ಯದ ರಕ್ಷಣೆಯಿಂದ ಅಖಿಲ ಭಾರತೀಯ ಐಕ್ಯತೆಗೆ ಒಂದಿನಿತೂ ವ್ಯಾಘಾತ ಒದಗುವುದಿಲ್ಲ ಎಂಬುದು ವಿದಿತವಾಗುತ್ತದೆ” (ಮನುಜಮತ-ವಿಶ್ವಪಥ-20). ಅದಕ್ಕೂ ಮುಂದೆ ಹೋಗಿ ಅವರು ಚೆನ್ನಾಗಿ ಹೇಳುವುದಿಂತು,  “ನಾನು ರಾಜ್ಯದೃಷ್ಟಿಯಿಂದ ಕರ್ನಾಟಕದವನು, ಭಾಷಾದೃಷ್ಟಿಯಿಂದ ಕನ್ನಡಿಗನು; ಆದರೆ ಸಂಸ್ಕೃತಿಯ ದೃಷ್ಟಿಯಿಂದ ಮತ್ತು ರಾಷ್ಟ್ರ ದೃಷ್ಟಿಯಿಂದ ಭಾರತೀಯನು. ನನ್ನ ಕರ್ನಾಟಕ ಭಾರತೀಯತ್ವಕ್ಕೆ ಎಂದೆಂದಿಗೂ ಅವಿರೋಧಿಯಾಗಿ ಸೇವೆ ಸಲ್ಲಿಸುವುದರಿಂದಲೇ ತನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳುತ್ತದೆ. ತಾಯಿ ಭಾರತಿ :  ಕರ್ನಾಟಕ ಮಗಳು. ಭಾರತಕ್ಕೆ ಧಕ್ಕೆ ಒದಗಿದರೆ ಕರ್ನಾಟಕ ಉಳಿಯುವುದಿಲ್ಲ. ಮಗಳು ಕರ್ನಾಟಕಕ್ಕೆ ಕೇಡಾದರೆ ತಾಯಿ ಭಾರತಮಾತೆ ಸಹಿಸುವುದಿಲ್ಲ” (ಅದೇ-39) ಇದು ಸರಳ, ದ್ವಂದ್ವ ರಹಿತ ನೀತಿ. ಅದಕ್ಕಾಗಿ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎಂದು ತಾಯಿ ಮಗಳ ಜಯ ಬಯಸುತ್ತದೆ. ಪ್ರಾದೇಶಿಕತೆಯ ಅಪ್ಪಟ ಅಭಿಮಾನ ಏನಿದ್ದರೂ ರಾಷ್ಟ್ರೀಯತೆಗೆ ಪೂರಕವಾಗಿಯೇ ಬರುತ್ತದೆ; ಅದು ಎಲ್ಲಿಯೂ ಪ್ರತ್ಯೇಕತೆಯ ಒಡಕುಧ್ವನಿ ಆಗುವುದಿಲ್ಲ. ರಾಷ್ಟ್ರೀಯತೆಯ ಸುವರ್ಣ ಮಾರ್ಗವನ್ನು ಕುವೆಂಪು ಸಾಹಿತ್ಯ ನಮಗೆ ನಿರ್ದೇಶಿಸುತ್ತದೆ” ಎಂದು ವ್ಯಾಖ್ಯಾನಿಸುತ್ತಾರೆ. (ಪು: 111)

ಮೇಲ್ಕಾಣಿಸಿದ ನಾಲ್ಕು ಪ್ರಜ್ಞೆಗಳಿಂದ ಕುವೆಂಪು ಸಾಹಿತ್ಯಕ್ಕೆ ಆದುನಿಕ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನಮಾನ ಸಂದಿದೆ ಎಂದು ಡಾ. ಮರಿಗುದ್ದಿ ಸಕಾರಣವಾಗಿ ಅಭಿಪ್ರಾಯ ಪಡುತ್ತಾರೆ. ಹೀಗಾಗಿ  ʼಎಲ್ಲದರಲ್ಲಿ ಎಲ್ಲವಿದೆʼ ಕೃತಿಯು ಕುವೆಂಪು ಸಾಹಿತ್ಯಕ್ಕೆ ಒಳ್ಳೆಯ ಒಳನೋಟಗಳನ್ನು ನೀಡುತ್ತದೆ.

 

 

 

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Excerpt / E-Books

ಅವರಿಗೆ ಪ್ರಕೃತಿಯೆ ಪೂಜೆ, ಧ್ಯಾನ, ಮೋಕ್ಷ  ಎಂದು ಮರಿಗುದ್ದಿಯವರು ಕುವೆಂಪುರವರ ವಿಶ್ವಪ್ರಜ್ಞೆಗೆ ಪೂರಕವೆಂಬಂತೆ ಹೂವಯ್ಯನ ಮಾತುಗಳನ್ನು ತೋರಿದ್ದಾರೆ. “ಪ್ರಾರ್ಥನೆ ಮಾಡಬೇಕು, ಸೀತೆ ಪ್ರಾರ್ಥನೆ ಮಾಡಬೇಕು….. ಒಳ್ಳೆಯ ಮಾತುಕತೆ, ಆಲೋಚನೆ, ನಡತೆ ಇವುಗಳಿಂದ ನಮ್ಮ ಆತ್ಮ ಶುದ್ಧವಾಗುತ್ತದೆ. ದೇವರಿಗೆ ಪ್ರಿಯವಾಗುತ್ತದೆ. ಆದ್ದರಿಂದ ನಿತ್ಯವೂ ದೇವರನ್ನು ಪ್ರಾರ್ಥಿಸಬೇಕು…. ಅವನು ಈ ಜಗತ್ತನ್ನು ಮಾಡಿ ದೂರ ಓಡಿ ಹೋಗಿ ಕೂತುಕೊಂಡಿಲ್ಲ. ಅದರಲ್ಲಿ ಐಕ್ಯವಾಗಿದ್ದಾನೆ; ಸೇರಿಕೊಂಡಿದ್ದಾನೆ. ಸಕ್ಕರೆಯನ್ನು ನೀರಿಗೆ ಹಾಕಿದರೆ ಕರಗಿ ಸೇರಿಕೊಳ್ಳುವಂತೆ ! ಬೆಳಿಗ್ಗೆ ಸೂರ್ಯನಾಗಿ ಮೂಡಿ ಬರುತ್ತಾನೆ. ರಾತ್ರಿ ಕತ್ತಲೆಯ ರೂಪದಿಂದ ಬರುತ್ತಾನೆ. ಅವನೇ ಗಾಳಿಯಾಗಿ ಬೀಳಿಸುತ್ತಾನೆ. ಮಳೆಯಾಗಿ ಸುರಿಯುತ್ತಾನೆ. ಮಿಂಚಾಗಿ ಹೊಳೆಯುತ್ತಾನೆ” (ಪು: 107): ಮುಂದುವರಿಯುತ್ತಾ ಲೇಖಕರು “ಕುವೆಂಪು ನೇರವಾಗಿಯೇ ಸಪ್ತಸೂತ್ರ, ಪಂಚತತ್ವಗಳ ʼವಿಶ್ವಮಾನವʼ ಸಂದೇಶ ನೀಡಿದರು. ಅಲ್ಲಿ ಅವರು ಸರ್ವೋದಯ, ಸಮಾನತೆಗಳನ್ನು ಎತ್ತಿ ಹಿಡಿದು, ಎಲ್ಲ ಮತಗಳಿಂದ ಬಿಡುಗಡೆಯಾಗಿ ಮನುಜ ಮಾತಕ್ಕೆ ಬರುವಂತೆ ಕರೆ ನೀಡುತ್ತಾರೆ” (ಪು: 109) ಎಂದು ಕುವೆಂಪು ವಿಶ್ವ ಪ್ರಜ್ಞೆಯನ್ನು ಗುರುತಿಸುತ್ತಾರೆ.

 

Related Books