’ಸದ್ಯ ಮತ್ತು ಶಾಶ್ವತ’ ಗ್ರಂಥವು ಯು.ಆರ್. ಅನಂತಮೂರ್ತಿ ಅವರ ಲೇಖನಗಳ ಸಂಗ್ರಹ. ತಮ್ಮ ಪ್ರಖರ ವೈಚಾರಿಕತೆ-ಖಚಿತ ನಿಲುವಿನ ಕಾರಣಕ್ಕೆ ಕನ್ನಡ ವಾಙ್ಮಯಲೋಕದಲ್ಲಿ ಮಾತ್ರವಲ್ಲದೆ, ಭಾರತೀಯ ಚಿಂತನಾ ವಲಯದಲ್ಲಿ ಚಿರಪರಿಚಿತರಾಗಿದ್ದರು. ಅವರ ಗದ್ಯದ ಓದು ಕಾವ್ಯದ ಓದಿನ ಹಾಗಿರುವ ಹಾಗೆಯೇ ಅದು ಭಾವುಕತೆಯ ಕಾರಣದಿಂದ ಚಿಂತನೆಯಿಂದ ದೂರ ಸರಿಯುವುದಿಲ್ಲ. ಸದ್ಯ ಮತ್ತು ಶಾಶ್ವತ ಕೃತಿಯ ಬಗ್ಗೆ ಖ್ಯಾತ ವಿಮರ್ಶಕಿ ಎಂ. ಎಸ್. ಆಶಾದೇವಿ ಅವರು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ.
’ಯು. ಆರ್. ಅನಂತಮೂರ್ತಿ ಅವರು ಸ್ವಾತಂತ್ರೋತ್ತರ ಭಾರತದ ರೂಪಕವೂ ಹೌದು ನಿಕಷವೂ ಹೌದು. ಆಧುನಿಕತೆ ಮತ್ತು ಪರಂಪರೆಗಳನ್ನು ಅವರು ಮುಖಾಮುಖಿಯಾಗಿರುವ ಬಗೆಯಲ್ಲಿ ಆಧುನಿಕ ಭಾರತದ ನಿರ್ಣಾಯಕ ಪಲ್ಲಟಗಳೆಲ್ಲವೂ ಅವುಗಳ ಸೂಕ್ತ ಅನೂಹ್ಯ ನೆಲೆಗಳಲ್ಲಿ ಶೋಧಿತವಾಗುತ್ತವೆ. ಈ ಶೋಧದಲ್ಲಿ ರೂಪಕ ಮತ್ತು ನಿಕಷಗಳನ್ನು ಅವರು ಮಾದರಿಯಾಗಿಯೂ ಬಳಸುತ್ತಾರೆ. ದಾರಿಗಳಾಗಿಯೂ ಬಳಸುತ್ತಾರೆ. ಅವರ ನಿಲುವುಗಳಲ್ಲಿ ಆಯ್ಕೆಗಳಲ್ಲಿ ಆಗಿರುವ ಬದಲಾವಣೆಗಳು ಕಾಲದ ಚಲನೆಯ ಆಯ್ಕೆಗಳಾಗಿ ಕಾಣುತ್ತದೆ ಎನ್ನುವುದು ಅರ್ಧ ಸತ್ಯ. ನಾಗರಿಕತೆಯೊಂದು ಹಾಯಲೇಬೇಕಾದ, ಕಾಲ ದಿವ್ಯದಲ್ಲಿ ಪುನರ್‌ಶೋಧಿತವಾಗಬೇಕಾದ ಕಾಲಾತೀತ ಸತ್ಯಗಳಾಗಿ ಅವು ಕಾಣಿಸುತ್ತವೆ ಎನ್ನುವುದೂ ಅಷ್ಟೇ ಮುಖ್ಯವಾದುದು.
ಘನ ವ್ಯಕ್ತಿತ್ವವೊಂದು ತನ್ನ ಆಯ್ಕೆಯ ಕ್ಷೇತ್ರ ಮತ್ತು ಮಾಧ್ಯಮಕ್ಕೆ ಬದ್ಧವಾಗಿ, ಅವುಗಳಲ್ಲಿನ ಅಸಾಧಾರಣ ಎನ್ನಬಹುದಾದ ಸಾಧನಗಳನ್ನೇ ಚಿಮ್ಮು ಹಲಗೆಯಾಗಿ ಮಾಡಿಕೊಂಡು ಸಮುದಾಯವನ್ನೇ ಆವರಿಸಿರುವ ಅನನ್ಯ ಮಾದರಿಯೊಂದು ಅನಂತಮೂರ್ತಿಯವರ ವಿಷಯದಲ್ಲಿ ನಿಜವಾಗಿದೆ. ತನ್ನ ಕಾಲದ ಅಪ್ರಿಯ ಸತ್ವಗಳಿಗೆ ಎದುರಾಗುವುದೇ ತನ್ನ ಸಮುದಾಯದ ಸೌಷ್ಟವವನ್ನು ಕಾಯುವ ಬಗೆ ಎಂದು ಗಾಢವಾಗಿ ನಂಬಿರುವ ವ್ಯಕ್ತಿ ಅನಂತಮೂರ್ತಿ. ಆದ್ದರಿಂದಲೇ ವ್ಯಕ್ತಿ ಪ್ರಜ್ಞೆಯಲ್ಲಿ ಆರಂಭವಾದ ಇವರ ಹುಡುಕಾಟ ಮನುಷ್ಯ ಸಂಕಟದ ಆದಿಮ ನೆಲೆಯನ್ನು ಮುಟ್ಟಿರುವಂತೆ ಕಾಣಿಸುತ್ತದೆ. ಇವರ ಸಾಹಿತ್ಯಕ ಬರೆವಣಿಗೆ, ಸಾರ್ವಜನಿಕ ಭಾಷಣಗಳು, ರಾಜಕೀಯ ನಿಲುವುಗಳು, ಸಾಂಸ್ಕೃತಿಕ ವಾಗ್ವಾದಗಳು, ಗಣಿಗಾರಿಕೆ ವಿರೋಧಿ, ಪರಿಸರಪರ ಹೋರಾಟ, ಸಾಮಾನ್ಯ ಶಾಲೆಯ ಹಂಬಲ ಈ ಎಲ್ಲವನ್ನೂ ಅಖಂಡವಾಗಿಯೇ ನೋಡಬೇಕು, ಈ ಎಲ್ಲವೂ ಅವರಿಗೆ ಸಮಾನ ಮಹತ್ವದ, ಜೀವನ್ಮರಣದ ಪ್ರಶ್ನೆಗಳಾಗಿ ಕಾಣಿಸುತ್ತವೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE