‘ಶತಮಾನದ ಸಣ್ಣಕಥೆಗಳ ಸಮೀಕ್ಷೆ’ ಕೃತಿಯು ಕರೀಗೌಡ ಬೀಚನಹಳ್ಳಿ ಅವರ ಸಣ್ಣ ಕತೆಗಳ ಸಮೀಕ್ಷಾಗ್ರಂಥವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಪ್ರೊ. ಎಸ್.ಎಲ್ ಶೇಷಗಿರಿ ರಾವ್ ಅವರು, ‘ಲೇಖಕ ಪ್ರಾರಂಭದಲ್ಲಿ ವಿಶ್ಲೇಷಣಾತ್ಮಕವಾಗಿ ಸಣ್ಣಕಥೆ ಮತ್ತು ಇತರ ಪ್ರಕಾರಗಳನ್ನು ರೂಪಿಸಿದ ಚಾರಿತ್ರಿಕ ಸಂದರ್ಭದ ಪರಿಚಯ ಮಾಡಿಕೊಟ್ಟಿದ್ದಾರೆ. ಈ ಪರಿಚಯದ ಭಾಗವಾಗಿ ವಸಾಹತುಶಾಹಿಯ ಪಾತ್ರದ ನಿರೂಪಣೆ ಬಂದಿದೆ. 'ಸ್ವಾತಂತ್ರ್ಯ ಪೂರ್ವದ ಕಥಾ ಸಾಹಿತ್ಯದ ಮುಖ್ಯ ಕೇಂದ್ರಬಿಂದು ಮನುಷ್ಯ' ಎಂದು ಗುರುತಿಸಿ, ಈ ಕೇಂದ್ರಬಿಂದುವನ್ನು ನವೋದಯ ಕಥೆಗಾರರು, ಪ್ರಗತಿಶೀಲ ಕಥೆಗಾರರು ಹೇಗೆ ಕಂಡರು ಎನ್ನುವುದನ್ನು ಲೇಖಕರು ವಿವರಿಸಿದ್ದಾರೆ. ಪ್ರತಿ ಘಟ್ಟದ ಪ್ರಮುಖ ಲೇಖಕರನ್ನು ಗಮನಿಸಿ, ಒಟ್ಟಾರೆ ಘಟ್ಟದ ಸಾಧನೆಯನ್ನು ನಿರೂಪಿಸಿದ್ದಾರೆ. ಕುವೆಂಪು ಅವರ ವೈಶಿಷ್ಟ್ಯವನ್ನು ವಿವರಿಸಿರುವ ಭಾಗ ಗಮನಾರ್ಹವಾಗಿದೆ. ಮುಂದೆ ನವ್ಯ, ಬಂಡಾಯ, ದಲಿತ ಪಂಥಗಳ ಕಥೆಗಳನ್ನು ವಿಶ್ಲೇಷಿಸುವುದಲ್ಲದೆ, ಮುಸ್ಲಿಂ ಸಂವೇದನೆ ಮತ್ತು ಸಂವೇದನೆ ಇವನ್ನು ಕುರಿತು ಪ್ರತ್ಯೇಕ ವಿಶ್ಲೇಷಣೆಗಳಿರುವುದು ಗಮನಾರ್ಹ. ಕಡೆಯ ಅಧ್ಯಾಯ 'ನವ್ಯ ಕಥನ ಮತ್ತು ಸಮಾಜವಾದ ವಿಶಿಷ್ಟವಾದ ಬರಹ. ಇದು ಸಾಹಿತ್ಯವನ್ನು ಸಾಹಿತ್ಯವಾಗಿಯೇ ಓದುವ ಪ್ರಕ್ರಿಯೆಯಾಗಿ ಸಾಗಿ, ಸಾಮಾಜಿಕ ಅಧ್ಯಯನವನ್ನು ದಾಟಿ, ಸಾಮಾಜಿಕ ಸಂದರ್ಭ-ರಾಜಕೀಯ ಸಿದ್ಧಾಂತ ಸಾಹಿತ್ಯಗಳ ಸಂಬಂಧವನ್ನು ವಿಶ್ಲೇಷಿಸುತ್ತದೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಕನ್ನಡ ಸಣ್ಣಕಥೆಯಷ್ಟೇ ಅಲ್ಲ, ಇಡೀ ಕನ್ನಡ ಸಾಹಿತ್ಯ ಮತ್ತು ಭಾರತೀಯ ಸಾಹಿತ್ಯಗಳು ಎದುರಿಸಬೇಕಾದ ಸವಾಲುಗಳತ್ತ ಮುಖಮಾಡಿದೆ. ಕೃತಿಯಲ್ಲಿ ಅಲ್ಲಲ್ಲಿ ಡಾ. ಬೀಚನಹಳ್ಳಿಯವರು ತಮ್ಮ ವಿಮರ್ಶೆಯ ನೆಲೆಗಟ್ಟನ್ನು ವಿವರಿಸಿದ್ದಾರೆ. ಉದಾಹರಣೆಗೆ, ಪುಟ 70ರಲ್ಲಿ ಹೀಗೆ ಹೇಳುತ್ತಾರೆ. ಯಾವುದೇ ಸಾಹಿತ್ಯ ಕೃತಿಯ ಅಸ್ತಿತ್ವದ ಪರಿಧಿಯೊಳಗೇ ಮಾನವನ ಮನಸ್ಸು ಅವನ ಜೀವನಕ್ರಮ, ನೋವು, ನಲಿವು ವ್ಯವಹರಿಸುತ್ತವೆ. ಒಂದು ಸಾಹಿತ್ಯ ಕೃತಿಯ ವಸ್ತು ಭಾಷೆ ತಂತ್ರದ ಅಧ್ಯಯನವೆಂದರೆ ಒಟ್ಟು ಸಂಸ್ಕೃತಿಯ ಬಹುಮುಖಿ ಅಧ್ಯಯನವೆಂದು, ಲೇಖಕ ಕಟ್ಟಿದ ಅಖಂಡ ಬದುಕಿನ ಅಧ್ಯಯನವೆಂದು ತಿಳಿಯಬಹುದು. ಸಾಹಿತ್ಯ ಕೃತಿ ಸಾವಯವ ಸೃಷ್ಟಿ ಎಂಬುದು ನಮ್ಮ ದೊಡ್ಡ ನಮಗೆ ತಂದುಕೊಟ್ಟ ಪರಿಕಲ್ಪನೆ ಇದನ್ನು ಸ್ವೀಕರಿಸಿ, ಜತೆಗೆ ಲೇಖಕರು ಸಣ್ಣಕಥೆಯ ಅಧ್ಯಯನವನ್ನು ಕೈಗೊಂಡಿರುವುದು ಸ್ವಾರಸ್ಯದ ಸಂಗತಿ. ಸಾಂಸ್ಕೃತಿಕ ಕನ್ನಡ ಸಣ್ಣಕಥೆಯ ಚರಿತ ಬಹು ಕುತೂಹಲಕಾರಿಯಾದದ್ದು ಇಂಗ್ಲಿಷ್ ಸಾಹಿತ್ಯದ ಪ್ರಭಾವ ಶಕ್ತವಾಗಿದ್ದ ಕಾಲದಲ್ಲಿ ಇಂಗ್ಲಿಷ್ ಸಾಹಿತ್ಯವನ್ನೇ ಅಭ್ಯಾಸ ಮಾಡಿದವರು ಸಣ್ಣಕಥೆಗಳನ್ನು ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದಾಗಲೇ ಇಂಗ್ಲಿಷ್ ಸಾಹಿತ್ಯದ ಪ್ರಭಾವವಿಲ್ಲದ ಸ್ವಂತಿಕೆಯನ್ನು ತೋರಿದರೆಂಬುದು ಗಮನಾರ್ಹ ಸಂಗತಿ. ಮಾಸ್ತಿಯವರ ಮೊದಲನೆಯ ಕಥಾ ಸಂಕಲನದಲ್ಲಿ ಕಾಣುವುದು ಭರವಸೆಯ ಸಿದ್ದಿ ಬೇರೆ ಬೇರೆ ಕಾಲಾವಧಿಗಳಲ್ಲಿ ಚಿಂತನೆಯಲ್ಲಿ ಹೊರ ದೇಶಗಳ ಪ್ರಭಾವಕ್ಕೆ ಒಳಗಾದರೂ ಕಥೆಯೊಳಗಿನ ಅನುಭವ ಅದರ ವಿಕಾಸ ಕಥನ ಕಲೆಗಳಲ್ಲಿ ಈ ಸಾಹಿತ್ಯವು ಸ್ವತಂತ್ರವಾಗಿ ಮುನ್ನಡೆದು `ಈಚೆಗಿನ ದಶಕಗಳಲ್ಲಿ ಯು.ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ಶಾಂತಿನಾಥ ದೇಸಾಯಿ ಮೊದಲಾದವರ ಕಥೆಗಳು, ಸಣ್ಣಕಥೆಯ ಸ್ವರೂಪವನ್ನು ಚರ್ಚಿಸುವಾಗ ಬೇರೆ ದೇಶಗಳ ಶ್ರೇಷ್ಠ ಕಥೆಗಾರರ ಕಥೆಗಳ ಸರಿಸಮನಾಗಿ ಗಮನಾರ್ಹವಾಗಿದೆ’ ಎಂದಿದ್ದಾರೆ.
©2024 Book Brahma Private Limited.