ಎಸ್. ಆರ್ ವಿಜಯಶಂಕರ ಅವರ ʼ ನಿಜಗುಣʼ ಕೃತಿಯು ವಿಮರ್ಶಾ ಬರಹಗಳ ಸಂಕಲನ.. ಸಾಹಿತಿ ಡಾ. ಬಿ.ಎನ್ ಸುಮಿತ್ರಾಬಾಯಿ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಕಳೆದ ಹಲವಾರು ದಶಕಗಳಿಂದ ತಮ್ಮ ಸ್ವತಂತ್ರ ಚಿಂತನೆ, ನೇರ ಹಾಗೂ ಖಚಿತವಾದ ವಿಶ್ಲೇ಼ಷಣೆ, ತರ್ಕಬದ್ದವಾದ ದಿಟ್ಟ ತೀರ್ಮಾನಗಳತ್ತ ತಲುಪಿಸಬಲ್ಲ ಮೇಧಾವಿ ವಿಮರ್ಶಕರಾಗಿ ಹೆಸರು ಪಡೆದಿರುವವರು. ಅವರ ವಿಮರ್ಶೆಗಳಿಗೆ ತಮ್ಮದೇ ಸ್ವತಂತ್ರ್ಯ ದಾರಿಯೊಂದನ್ನು ರೂಪಿಸಿಕೊಂಡವರು ಎಂಬುದನ್ನು ಅವರ ಮೂರು ವಿಮರ್ಶಾ ಸಂಕಲನಗಳು ತೋರಿಸಬಲ್ಲವು. ಅದರಲ್ಲಿ ನಿಜಗುಣ ಕೃತಿಯೂ ಸೇರಿಕೊಂಡಿದ್ದು, ಪರಂಪರೆಯ ಅರಿವಿನ ವಿಸ್ತರಣೆ, ಸಂಸ್ಕೃತಿಯ ಜೀವಂತಿಕೆ, ಸತ್ವವನ್ನು ಕಾಯ್ದುಕೊಳ್ಳುವ ಕಾಳಜಿ ಅಲ್ಲಿದ್ದು, ವಿಮರ್ಶೆಯ ಧಾಷ್ಪ್ಯವು ವಿನಯವಾಗಿ ಬದಲಾಗುತ್ತಿರುವುದನ್ನು ಕಾಣಬಹುದು. ಪ್ರಸ್ತುತ ಹೊರಬರುತ್ತಿರುವ ʼ ನಿಜಗುಣʼ ದಲ್ಲಿ ವಿಜಯಶಂಕರ ಅವರು ಒಬ್ಬ ನವ್ಯೋತ್ತರ ವಿಮರ್ಶಕರಾಗಿ ತಮ್ಮ ಅಭಿಜಾತ ಮನೋಧರ್ಮವನ್ನೂ ಕಾಯ್ದುಕೊಳ್ಳಲು ನಡೆಸಿರುವ ವಿಮರ್ಶಾ ಪ್ರಯೋಗಗಳು ಕಂಡುಬರುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಎಸ್. ಆರ್. ವಿಜಯಶಂಕರ್ ಒಬ್ಬ ವಿಮರ್ಶಕರು. ಬೆಂಗಳೂರಿನಲ್ಲಿ ವಾಸವಿರುವ ಅವರು, ಸಾಹಿತ್ಯ , ಸಂಸ್ಕೃತಿ, ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ. ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು, ಜನಪ್ರಿಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ. ಹಿಂದಿನ ಕೃತಿಗಳ ಮರು ಓದುಗರಿಗೆ ಗಮನ ಕೊಡುತ್ತಿರುವ ವಿಜಯ ಶಂಕರ್, ಕವಿ ಗೋಪಾಲಕೃಷ್ಣ ಅಡಿಗರ ಮರು ಓದಿನ 'ಪ್ರತಿಮಾ ಲೋಕ', ಕೃತಿಯನ್ನು ಸಂಪಾದಿಸಿದ್ದಾರೆ. ...
READ MORE(ಹೊಸತು, ಮೇ 2012, ಪುಸ್ತಕದ ಪರಿಚಯ)
ವಿಮರ್ಶೆ ಎಂಬುದು ಒಂದು ಮೌಲ್ಯಮಾಪನ. ಉತ್ತಮಾಂಶಗಳನ್ನು ಮೆಚ್ಚಿ ಕೃತಿಯಲ್ಲಿ ಮಸುಳಿರಬಹುದಾದ ಲೋಪದೋಷಗಳನ್ನು ವೈಮನಸ್ಯ – ಮನಸ್ತಾಪಗಳಿಗೆಡೆ ಮಾಡಿಕೊಡದಂತೆ ತಿಳಿಹೇಳುವಿಕೆ ಇದರ ಲಕ್ಷಣ ಸುಮಾರು ಮೂವತ್ತು ವರ್ಷಗಳಷ್ಟು ದೀರ್ಘಕಾಲ ವಿಮರ್ಶಾ ಕ್ಷೇತ್ರದಲ್ಲಿ ಹೆಸರು ಮಾಡಿರುವ ಎಸ್. ಆರ್. ವಿಜಯಶಂಕರ ಹೆಚ್ಚು ಕಡಿಮೆ ಇದೇ ದಾರಿಯಲ್ಲಿ ಸಾಗಿಬಂದವರು. ಆಯಾ ಕಾಲದ ಸಂದರ್ಭಕ್ಕೆ ತಕ್ಕಂತೆ ಬರೆದ ಕೃತಿಗಳನ್ನು ಸಮಗ್ರವಾಗಿ ಓದಿ ತನ್ನ ನೆಲೆಯಿಂದ ಮಾತ್ರವಲ್ಲದೆ ಇತರ ಓದುಗರನ್ನೂ ದೃಷ್ಟಿಯಲ್ಲಿಟ್ಟುಕೊಂಡು ವಿಮರ್ಶಕನಾದವನು ಬರೆಯಬೇಕಾಗುತ್ತದೆ. ಹಾಗೆ೦ದು ತನ್ನ ಸ್ವತಂತ್ರ ನಿಲುವು, ನೇರ ವಿಶ್ಲೇಷಣೆ ಮುಂತಾದುವನ್ನು ಕಡೆಗಣಿಸಿದಲ್ಲಿ ಶ್ರೇಷ್ಟ ಮಟ್ಟದ ವಿಮರ್ಶಕನ ಸ್ಥಾನವನ್ನು ಕಳೆದುಕೊಂಡಂತೆಯೇ ಇಂಥ ಸಮತೋಲನ ಕಾಪಾಡಿಕೊಂಡ ಅಪರೂಪದ ಸಂಕಲನ ಇದು. ವಿಸ್ತಾರವಾದ ಬರವಣಿಗೆ ಇಲ್ಲಿದ್ದು, ನಾವು ಓದಿ ಅರ್ಥೈಸಿಕೊಂಡ ಅವೇ ಪುಸ್ತಕಗಳಿಗೆ ನಮಗೆ ದಕ್ಕಿರದ ಇನ್ನಷ್ಟು ಹೊಳಹುಗಳು ಸಿಗುತ್ತವೆ. ಕನ್ನಡದ ಪ್ರತಿಷ್ಠಿತ ಬರಹಗಾರರ ಕೃತಿಗಳನ್ನು ವಿಮರ್ಶೆಗೆ ಆಯ್ಕೆ ಮಾಡಲಾಗಿದೆ. ಸೃಜನಶೀಲ ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದ್ದು, ಅವೆಲ್ಲ ಹೆಚ್ಚಿನವರು ಓದಿರುವುದೇ ಆಗಿವೆ. ಕಾವ್ಯ-ಕಥನ- ವಿಮರ್ಶೆ ಮೂರೂ ಪ್ರಕಾರಗಳನ್ನು ವಿಮರ್ಶೆಗೊಳಪಡಿಸಿದ ಬಲು ಪ್ರಯಾಸದ ಕೆಲಸವೊಂದು ಇಲ್ಲಿ ನಡೆದು ಓದುಗರಿಗೆ ನಿರಾಯಾಸವಾಗಿ ಕೈಗೆಟುಕಿ ಪುಸ್ತಕದ ಹೂರಣವನ್ನು ವಿಮರ್ಶೆಯ ಮೂಲಕ ತಿಳಿಯು ಅನುಕೂಲವಾಗಿದೆ.