‘ನೆಲನಿಲ್ಲದ ಭೂಮಿ’ ಲೇಖಕ ರವಿಕುಮಾರ್ ನೀಹ ಅವರ ವಿಮರ್ಶಾ ಲೇಖನಗಳ ಸಂಕಲನ. ಈ ಕೃತಿಯಲ್ಲಿ ಸಂಸ್ಕೃತಿ, ಜಾನಪದ, ದಲಿತ ಸಂವೇದನೆ, ಕನ್ನಡ ಕಾವ್ಯ ಮೀಮಾಂಸೆ, ಆಹಾರ ಪದ್ದತಿ, ನೆಲಮೂಲ ಸಂಸ್ಕೃತಿ, ದೇಸಿ ಪರಿಕಲ್ಪನೆ. ಮುಂತಾದ ಅಂತರ್ ಶಿಸ್ತೀಯ ಆಲೋಚನೆಗೆ ಒಳಪಟ್ಟ ಬಹು ಆಯಾಮದಲ್ಲಿ ತೆರೆದುಕೊಂಡಿದೆ. ಇದರ ಮೂಲಕ ನೀಹ ಅವರು ಆಧುನಿಕೋತ್ತರ ಕಾಲಘಟ್ಟದ ಸಂವೇದನೆಗಳನ್ನು ಭಾವುಕವಾಗಿ ಪರಿಭಾವಿಸದೆ ತಲಸ್ಪರ್ಶಿ ಅಧ್ಯಯನಕ್ಕೊಳಪಡಿಸಿದ್ದಾರೆ. ಜಾಗತಿಕ ಮಾರುಕಟ್ಟೆಯು ಸ್ಥಳೀಯ ಸಂಸ್ಕೃತಿಗಳನ್ನು, ದೇಸಿಯ ಬದುಕಿನ ವೈವಿಧ್ಯತೆಯನ್ನು ಹುರಿದು ಮುಕ್ಕುತ್ತಿರುವ ಈ ಸಂದರ್ಭದಲ್ಲಿ ಸಾಹಿತ್ಯದ ಓದು ಅಳಿವಿನಂಚಿನಲ್ಲಿರುವವರ ಬದುಕಿನತ್ತ ವಾಲುತ್ತಿದೆ. ಸಬಾಲ್ಟ್ರನ್ ಸ್ಟಡೀಸ್ ಶಿಸ್ತು ಇಂದಿನ ಸಾಹಿತ್ಯಕ್ಕೆ ಅಗತ್ಯವಾಗಿ ಬೇಕಾಗಿರುವುದು ಕೇವಲ ನೆಪಕ್ಕೆ ಮಾತ್ರವಲ್ಲ. ತನ್ನನ್ನು ತಾನು ಮರುಕಟ್ಟಿಕೊಳ್ಳುವುದಕ್ಕಾಗಿದೆ. ಅನುಭವಗಳು ಮತ್ತು ಬರವಣಿಗೆಗಳು ಜಡ್ಡುಗಟ್ಟುತ್ತಿರುವ ಈ ದಿನಗಳಲ್ಲಿ ರವಿಕುಮಾರ್ ನೀಹರವರ ಈ ವಿಮರ್ಶಾ ಲೇಖನಗಳು ಸಾಹಿತ್ಯವನ್ನು ಮರು ಓದುವಲ್ಲಿ ಅನನ್ಯವಾದ ಒಳನೋಟಗಳನ್ನು ಕಟ್ಟಿಕೊಡುತ್ತದೆ ಎನಿಸುತ್ತದೆ.
ಕನ್ನಡದ ಬಹುವಿಸ್ತಾರದ ವಿಮರ್ಶಾಲೋಕದಲ್ಲಿ ಹೊಸ ಹೆಜ್ಜೆ-ಹೊಳಹುಗಳಿಂದ ಗಮನಸೆಳೆದಿರುವ ಡಾ. ರವಿಕುಮಾರ್ ನೀಹ ಅವರು ಹಳ್ಳಿಗಾಡಿನ ಪ್ರತಿಭೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೋಕಿನ ನೀಲಗೊಂಡನಹಳ್ಳಿಯಲ್ಲಿ ಜನನ. ತಂದೆ- ಎನ್.ಸಿ. ಹನುಮಂತಯ್ಯ, ತಾಯಿ ದೊಡ್ಡಕ್ಕ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ರವಿಕುಮಾರ್ ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ.ಪದವಿಗಳಿಸಿದ್ದಾರೆ. ಆನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ’ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ಬರಹದ ಪಯಣದಲ್ಲಿ ವಿಮರ್ಶೆಯ ಮಾರ್ಗ ಹಿಡಿದಿರುವ ರವಿಕುಮಾರ್ ನೀಹ ಸಂಶೋಧನೆ, ಖಂಡಕಾವ್ಯಗಳೆಡೆಗೂ ಗುರುತಿಸಿಕೊಂಡವರು. ...
READ MORE