‘ಕಲ್ಲಲ್ಲ ಕಾಮನಬಿಲ್ಲು’ ಲೇಖಕ ಡಾ.ಸಿ. ನಾಗಣ್ಣ ಅವರ ವಿಮರ್ಶಾ ಲೇಖನಗಳ ಸಂಕಲನ. ಈ ಕೃತಿಗೆ ಲೇಖಕ ಭೈರಮಂಗಲ ರಾಮೇಗೌಡ ಮುನ್ನುಡಿ ಬರೆದು ‘ಇಲ್ಲಿ ಐದು ವಿಮರ್ಶಾಲೇಖನಗಳು ಮತ್ತು ಒಂದು ಸಂದರ್ಶನವಿದೆ. ಸಿ.ನಾಗಣ್ಣ ಬರವಣೆಗೆಗೆ ಆಯ್ಕೆ ಮಾಡಿಕೊಂಡಿರುವ ವಿಷಯಗಳು ಮತ್ತು ಅವುಗಳ ಮೂಲಕ ಅವರು ಸಮಾಜಕ್ಕೆ ತಲುಪಿಸಲು ಬಯಸುತ್ತಿರುವ ಸಂದೇಶ ಇವುಗಳನ್ನು ಗಮನಿಸಿದರೆ ಸಮಾಜದ ಬಗ್ಗೆ, ಜನತೆಯ ಬಗ್ಗೆ ಅವರಿಗಿರುವ ಪ್ರೀತಿ ಮತ್ತು ಕಾಳಜಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಬ್ರಿಟಿಷರ ಆಡಳಿತದಲ್ಲಿ ಶಿಕ್ಷಣ, ಆಧುನಿಕತೆ ಮತ್ತು ಕನ್ನಡ ಸಾಹಿತ್ಯ, ಅನಂತಮೂರ್ತಿಯವರ ಕಥಾ ಸಾಹಿತ್ಯ, ಎ.ಎನ್. ಮೂರ್ತಿರಾವ್ ಮತ್ತು ಲಿಂಗದೇವರು ಹಳೆಮನೆಯವರನ್ನು ಕುರಿತ ಲೇಖನಗಳು, ಸಿ.ಪಿ.ಕೆ ಯವರ ಸಂದರ್ಶನದಲ್ಲಿ ಕೇಳಿರುವ ಪ್ರಶ್ನೆಗಳು ಇವೆಲ್ಲವೂ ಸಿ.ನಾಗಣ್ಣನವರ ಚಿಂತನಶೀಲ ಮನಸ್ಸಿನ ಸಾಕ್ಷಿಗಳಾಗಿವೆ’ ಎಂದು ಪ್ರಶಂಸಿಸಿದ್ದಾರೆ.
ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...
READ MORE