ಬೆಳುದಿಂಗಳ ನೋಡಾ

Author : ಎಸ್. ಆರ್. ವಿಜಯಶಂಕರ್

Pages 240

₹ 240.00




Year of Publication: 2020
Published by: ಚಿಂತನ ಚಿತ್ತಾರ
Address: # 2,ಮುದ ಕಾಂಪ್ಲೆಕ್ಸ್‌, ಬ್ಲಾಕ್‌, ರಾಮಕೃಷ್ಣ ನಗರ, ಮೈಸೂರು-570022
Phone: 9945668082

Synopsys

ಹಿರಿಯ ಸಾಹಿತಿ-ವಿಮರ್ಶಕ ಡಾ. ಎಸ್‌. ಆರ್. ವಿಜಯಶಂಕರ ಅವರ ʼಬೆಳುದಿಂಗಳ ನೋಡಾʼ ಕೃತಿಯು ಒಂದು ವಿಮರ್ಶಾ ಪ್ರಬಂಧ ಕೃತಿಯಾಗಿದೆ. ಬೇಂದ್ರೆಯವರ ʼಬೆಳುದಿಂಗಳ ನೋಡಾʼ ಪದ್ಯದ ಸವಿಸ್ತೃತ ಸುದೀರ್ಘ, ಆಳವಾದ ನೋಟ ಇಲ್ಲಿ ಸಿಗುತ್ತದೆ. ಈ ಕೃತಿ ಓದಿದೊಡನೆ ಒಂದು ಬಾರಿ ರೋಮಾಂಚನವಾಯಿತು ಎನ್ನುತ್ತಾರೆ ಸಾಹಿತಿ ಡಾ ಡಿ. ಸಿ ಗೀತಾ. ಭೌತಿಕ ಶರೀರ ಬೆಂಕಿಯ ಮೂಲಕ ಬೆಳಕಿಗೆ ಸೇರುವ ಪ್ರಕ್ರಿಯೆ ಲೇಖಕರಲ್ಲಿ ಆಧ್ಯಾತ್ಮಿಕ ಲಹರಿಗಳನ್ನು ಉಂಟು ಮಾಡುವುದನ್ನು ನಾವು ಇಲ್ಲಿ ಕಾಣಬಹುದು.

ಬೆನ್ನುಡಿ ಬರೆದಿರುವ ಜಿ.ಕೆ ರವೀಂದ್ರ ಕುಮಾರ್‌ ಅವರು “ ಬೆಳುದಿಂಗಳ ಬಿಳಿ ಬೆಳಕು ನೆಲ ಆಕಾಶಗಳನ್ನು ಒಂದು ಮಾಡಿದ ಭಾವ ಅಗಮ್ಯವಾಗಿ ಕಂಡಿತು. ಸುತ್ತಲಿನ ಮರ ಗಿಡಗಳಿಂದ ಎಚ್ಚೆತ್ತ ಹಕ್ಕಿಗಳ ದನಿ, ಕೆಂಪಾಗಿ‌ ಮೇಲೆದ್ದ ಚಿತೆಯ ಬೆಂಕಿಯು ಕ್ರಮೇಣ ತನ್ನ ಕೆಂಬಣ್ಣವನ್ನು ಕಳಕೊಂಡು, ಆಕಾಶದ ಬಿಳಿಗೆ ಸೇರುತ್ತಿತ್ತು.ಇಲ್ಲಿ ಆ ಪರಿವರ್ತನೆಯ ಕುರಿತು ಲೇಖಕ ಸೊಗಸಾಗಿ ವಿವರಿಸಿದ್ದು, ಈ ಕವನಕ್ಕೊಂದು ಬೆಳಕಿನ ಶ್ರುತಿ ಇದೆ ಎಂದು ಹೇಳುತ್ತಾರೆ. ಒಟ್ಟಾರೆ, ಈ ಕೃತಿಯು ಬೇಂದ್ರೆಯವರ ಕವನವನ್ನು ಮತ್ತೊಮ್ಮೆ ನೆನಪಿಸುವಂತಿದೆ.

About the Author

ಎಸ್. ಆರ್. ವಿಜಯಶಂಕರ್

ಎಸ್. ಆರ್. ವಿಜಯಶಂಕರ್ ಒಬ್ಬ ವಿಮರ್ಶಕರು. ಬೆಂಗಳೂರಿನಲ್ಲಿ ವಾಸವಿರುವ ಅವರು, ಸಾಹಿತ್ಯ , ಸಂಸ್ಕೃತಿ,  ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ.  ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ  ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು, ಜನಪ್ರಿಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ.  ಹಿಂದಿನ ಕೃತಿಗಳ ಮರು ಓದುಗರಿಗೆ ಗಮನ ಕೊಡುತ್ತಿರುವ ವಿಜಯ ಶಂಕರ್, ಕವಿ ಗೋಪಾಲಕೃಷ್ಣ ಅಡಿಗರ  ಮರು ಓದಿನ 'ಪ್ರತಿಮಾ ಲೋಕ', ಕೃತಿಯನ್ನು ಸಂಪಾದಿಸಿದ್ದಾರೆ. ...

READ MORE

Reviews

ʼಬೆಳುದಿಂಗಳ ನೋಡಾʼ ಕೃತಿಯ ವಿಮರ್ಶೆ

ಬೇಂದ್ರೆಯವರ ʼ ಬೆಳುದಿಂಗಳ ನೋಡುʼ ಕವಿತೆಯ ವಿಶ್ಲೇಷಣೆಯ ಮೂಲಕ ಆರಂಭಗೊಳ್ಳುವ ಎಸ್.‌ ಆರ್‌  ವಿಜಯಶಂಕರ ಅವರ ʼಬೆಳುದಿಂಗಳ ನೋಡಾʼ ಕೃತಿ, ಲೇಖಕ ತನ್ನ ಓದು ಮತ್ತು ಚಿಂತನೆಗೆ ದಕ್ಕಿದ ಬೆಳುದಿಂಗಳನ್ನು ಸಹೃದಯದೊಂದಿಗೆ ಹಂಚಿಕೊಳ್ಳುವ ಪ್ರಯತ್ನದಂತಿದೆ. ಬೇಂದ್ರೆಯವರ ಬೆಳದಿಂಗಳ ನೋಟದ ಕವಿತೆಯ ಅರ್ಥಸಾಧ್ಯತೆಗಳನ್ನು ತೆರೆದಿಡುತ್ತಾ ಹೋಗುವ ಬರಹ, ಲೇಖಕರ ತಂದೆಯ ಆಂತಿಮಸಂಸ್ಕಾರದ ನೆನಪಿನೊಂದಿಗೆ ಹೊಸತೊಂದು ಆಯಾಮ ಪಡೆಯುತ್ತದೆ. ಭೌತಿಕ ಶರೀರ  ಬೆಂಕಿಯ ಮೂಲಕ ಬೆಳಕಿಗೆ ಸೇರುವ ಪ್ರಕ್ರಿಯೆ ಲೇಖಕರಲ್ಲಿ ಅಧ್ಯಾತ್ಮಿಕ ಲಹರಿಗಳನ್ನು ಉಂಟುಮಾಡುತ್ತದೆ; ಮೃತರ ಬದುಕೇ ಬೆಳದಿಂಗಳಾಗಿದ್ದುದನ್ನು ಸೂಚಿಸುತ್ತದೆ. ಏಕಕಾಲಕ್ಕೆ ವೈಯುಕ್ತಿಕವೂ ಸಾರ್ವತ್ರಿಕವೂ  ಆಗುವುದು ಒಳ್ಳೆಯ ಕವಿತೆಯದು ಮಾತ್ರವಲ್ಲ. ಎಲ್ಲ ಒಳ್ಳೆಯ ಬರಹಗಳ ಗುಣವೂ ಹೌದು. ಕಾವ್ಯದ ಆಶಯ ಪ್ರಧಾನ ವಿಶ್ಲೇಷಣೆಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ, ಸದ್ಯದ ಅಗತ್ಯವಾಗಿರುವ ರಸಪ್ರಧಾನ, ಭಾವಪ್ರಧಾನ  ಬರಹಗಳಿಗೆ ಉದಾಹರಣೆಯಾಗಿ ವಿಜಯಶಂಕರರ 'ಬೆಳುದಿಂಗಳ ನೋಡಾʼ ವಿಶ್ಲೇಷಣೆಯನ್ನು ನೋಡಬಹುದು.

ʼಬೆಳುದಿಂಗಳ ನೋಡಾ ʼಎನ್ನುವ ಆಹ್ವಾನ, ಸಂಕಲನದ ಉಳಿದ ಬರಹಗಳಿಗೂ ಅನ್ವಯಿಸುವಂತದ್ದು ಕನ್ನಡ ಸಾಂಸ್ಕೃತಿಕ ಲೋಕದ ಕೆಲವು ತಾರೆಗಳನ್ನು ʼ ಇಗೋ ನೋಡಿರಿʼ ಎಂದು ತೋರುವ ತೋರುಬೆರಳಿನಂತೆ ಈ ಕೃತಿಯ ಬರಹಗಳಿವೆ. ಟಿ.ಎಸ್‌ ವೆಂಕಣ್ಣಯ್ಯ, ಟಿ.ವಿ ವೆಂಕಟಶಾಸ್ತ್ರಿ, ಜಿ ರಾಮಕೃಷ್ಣ, ಚೆನ್ನವೀರ ಕಣವಿ, ಏರ್ಯ ಲಕ್ಷ್ಮೀನಾರಾಯಣ ಅರ್ಯ, ಉಮಾಕಾಂತ ಭಟ್ಟ, ಷ, ಶೆಟ್ಟರ್‌, ಬರಗೂರು ರಾಮಚಂದ್ರಪ್ಪ ಮುಂತಾದವರ ಕುರಿತ ಬರಹಗಳು ಕೃತಿಗಳ ಮೂಲಕ ವ್ಯಕ್ತಿಯನ್ನು, ವ್ಯಕ್ತಿತ್ವದ ನೆರಳು ಕೃತಿಗಳಲ್ಲಿ ಇರುವುದನ್ನು ಗುರುತಿಸುವ ಪ್ರಯತ್ನಗಳಾಗಿವೆ. ಈ ಕೃತಿ- ವ್ಯಕ್ತಿವಿಶೇಷಗಳ ಬರಹಗಳಲ್ಲಿ ವಿಶಿಷ್ಟವಾಗಿ ಕಾಣಿಸುವುದು ಗಿರೀಶ ಕಾರ್ನಾಡರ ನಾಟಕಗಳ ಅನನ್ಯತೆಯನ್ನು ಸೂಚಿಸುತ್ತ, ಆ ಕೃತಿಗಳನ್ನೇ ಅವರ ನಿಷ್ಠುರ ಪ್ರಾಮಾಣಿಕ ಹಾಗೂ ಧರ್ಮನಿರಪೇಕ್ಷ ವ್ಯಕ್ತಿತ್ವವೂ ವಿಶಿಷ್ಟವಾಗಿದ್ದುದನ್ನು ವಿಜಯಶಂಕರ್ ಗುರುತಿಸುತ್ತಾರೆ. ಕಾಲೇಜು ದಿನಗಳಲ್ಲಿ ಕಂಡ ಕೆ.ಬಿ. ಸಿದ್ದಯ್ಯನವರ ವೈಚಾರಿಕತೆ ಮುಂದಿನ ದಿನಗಳಲ್ಲಿ ಅವರ ಕಾವ್ಯದಲ್ಲಿ  ಪ್ರಖರವಾಗಿಉ ಅಭಿವ್ಯಕ್ತಗೊಂಡಿದ್ದನ್ನು ವಿಶ್ಲೇಷಿಸುವ ಮೂಲಕ, ಕಾವ್ಯದ ಬಗ್ಗೆ ಓದುಗರ ಗಮನ ಸೆಳೆಯುತ್ತಾರೆ. 

ಪುಸ್ತಕದ ಎರಡನೇ ಭಾಗದಲ್ಲಿನ ʼಇಪ್ಪತ್ತೊಂದನೇ ಶತಮಾನದ ಮೊದಲ ಘಟ್ಟದ ಕಿನ್ನಡ ಸಾಹಿತ್ಯʼ ಲೇಖನ ಈ ಸಂಕಲನದಲ್ಲಿ ಹೆಚ್ಚು ಕುತೂಹಲ ಕೆರಳಿಸುವ ಹಾಗೂ ಚರ್ಚೆಗೆ ಅವಕಾಶ ಕಲ್ಪಿಸುವ ಬರಹ.  56 ಪುಟಗಳಷ್ಟು ದೀರ್ಘವಾದ ಈ ಬರಹ  2001 ರಿಂದ 2017ರವರೆಗಿನ ಕನ್ನಡ ಸಾಹಿತ್ಯದ ಅವಲೋಕನವಾಗಿದೆ. ಈ ಅವಧಿಯಷ್ಟು, ಕಳೆದ ಐದು ದಶಕಗಳ ಎಲ್ಲ ಸಾಹಿತ್ಯ ಶ್ರದ್ದೆಗಳೂ  ಸಕ್ರಿಯವಾಗಿರುವ ಕಾಲಘುಟ್ಟ ಎಂದು ಸರಿಯಾಗಿಯೇ ಗುರ್ತಿಸಿರುವ ಸಮೀಕ್ಷಕರು, ಸಾಮಾಜಿಕ ಕಳಕಳಿ, ಆದಾಯ-ಶೋಷಣೆಗಳ ವಿರುದ್ಧದ ಹೋರಾಟ ಮುಂತಾದ ಆಶಯಗಳು ಸಾಹಿತ್ಯ ಕೃತಿಗಳ ʼಕಲಾಸಿದ್ಧಿಗಿಂತ ಮುಖ್ಯʼ ಎಂಬ ವಿಚಾರ ರೂಪುಗೊಂಡಿರುವುದರ ಬಗ್ಗೆ ಗಮನ ಸೆಳೆಯುತ್ತದೆ.  

ಈ ವಿಚಾರಗಳೆಲ್ಲವೂ ಸರಿಯೆ. ಆದರೆ, ಹೊಸ ಶತಮಾನದ  ಮೊದಲೆರಡು ದಶಕಗಳ ಅವಧಿಯಲ್ಲಿ ಗಮನಸೆಳೆದ ಹೊಸ ಲೇಖಕರ ಸಮೀಕ್ಷೆ ಎನ್ನುವ ಕುತೂಹಲದಿಮದ ಓದಿದರೆ ಈ ಬರಹ ನಿರಾಶೆ ಹುಟ್ಟಿಸುತ್ತದೆ. ಈ ಎರಡು ದಶಕಗಳಿಗೆ ಮೊದಲೇ ಬರಹಗಾರರಾಗಿ ಪ್ರಸಿದ್ಧರಾದ ಲೇಕಕರ ಸಾಹಿತ್ಯದ ವಿವೇಚನೆಯೇ ಇಲ್ಲಿ ಹೆಚ್ಚಿನ ಸ್ಥಾನ ಪಡೆದುಕೊಂಡಿದೆ. ಮೂಲಭೂತವಾದವನ್ನು ವಿರೋಧಿಸುವ ಕವಿ ಎಂದು ಆರೀಫ್‌ ರಾಜಾ ಅವರ ಬಗ್ಗೆ ಮೂರ್ನಾಲ್ಕು ಸಾಲುಗಳಲ್ಲಿ ಬರೆಯುವ ವಿಜಯಶಂಕರರು, ಹಿಂದೂಮೂಲಭೂತವಾದದ ವಿರೋಧಿ ದಿನಯಾಗಿ ದೀರ್ಘವಾಗಿ ಚರ್ಚಿಸಿರುವುದು ಎಚ್ೆಸ್.‌ ವೆಂಕಟೇಶ್‌ಮೂರ್ತಿ ಅವರ ಕವಿತೆಯನ್ನು ತಿರುಮಲೇಶರ ಕಾವ್ಯಕ್ಕೆ ಹೆಚ್ಚಿನ ಅವಕಾಶ ಇರುವ ಸಮೀಕ್ಷೆಯಲ್ಲಿ , ಆಶಯದ ಜೊತೆಗೆ ಕಲಾಸಿದ್ದಿಯಲ್ಲೂ ಗಮನಾರ್ಹ ಯಶಸ್ಸು ಪಡೆದಿರುವ ಲಲಿತಾ ಸಿದ್ಧಬಸಯ್ಯನವರ ಕಾವ್ಯಕ್ಕೆ ಸಿಕ್ಕಿರುವುದು ಒಂದು ಪ್ಯಾರಾ ಮಾತ್ರ.

ಮೌನೇಶ ಬಡಿಗೇರರ ʼಮಾಯಾ ಕೋಲಾಹಲʼ ದ ಕಥೆಗಳಿಗೆ ವಿಮರ್ಶೆಯ ನ್ಯಾಯ ಸಂದಿದೆಯಾದರೂ ಕಳೆದೆರಡು ದಶಕಗಳಲ್ಲಿ ಗಮನಾರ್ಹ ಕಥೆಗಳನ್ನು ಬರೆದ ಮಂಜುನಾಥ್‌ ಲತಾ., ಗಂಗಾಧರ ಬೀಚನಹಳ್ಳಿ ಅವರ ಕಥೆಗಳ ಪ್ರಸ್ತಾಪವೇ ಸಮೀಕ್ಷೆಯಲ್ಲಿಲ್ಲ. ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಸಂವೇದನೆಯನ್ನು ಸೇರ್ಪಡೆಗೊಳಿಸುವ ವಿ.ಎಂ ಮಂಜುನಾಥರ ʼಅಸ್ಪ್ರಷ್ಟ ಗುಲಾಬಿʼ ಕೃತಿಯ ಉಲ್ಲೇಖವೂ ಇಲ್ಲ. ಹೊಸ ಬರಹಗಾರರ ಸಾಹಿತ್ಯವನ್ನು ವಿಮರ್ಶಕರು ಗಮನಿಸುವುದಿಲ್ಲ ಎನ್ನುವ ʼ ಜನಪ್ರಿಯ ಆರೋಪ; ಕ್ಕೆ ವಿಜಯಶಂಕರ ಅವರ ಈ ಸಮೀಕ್ಷೆಯೂ ಹೊರತಾಗಿಲ್ಲ.

ತಮ್ಮ ಬರಹಗಳನ್ನು ಲೇಖಕರು ʼ ವಿಮರ್ಶಾ ಪ್ರಬಂಧಗಳುʼ ಎಂದು ಕರೆದಿದ್ದಾರೆ. ಆದರೆ, ಪ್ರಬಂಧದ ಶಿಲ್ಪ ಹಾಗೂ ಧ್ವನಿ ಇಲ್ಲಿಲ್ಲ. ವ್ಯಕ್ತಿಚಿತ್ರಗಳೇ ಹೆಚ್ಚಿನ ಪ್ರಮಾಣದಲ್ಲಿರುವ ಈ ಸಂಕಲದ ರಚನೆಗಳನ್ನು ಲೇಖನಗಳು ಎಂದು ಕರೆಯುವುದೇ ಹೆಚ್ಚು ಸರಿ. ವಿಮರ್ಶಾನ್ಯಾಯ- ಪ್ರಾತಿನಿಧ್ಯದ ದೃಷ್ಟಿಯಿಂದ ಚರ್ಚೆಗೆ ಅವಕಅಶ ಕಲ್ಪಿಸಿದರೂ ʼ ಮದುಮಗಳ ಕಣ್ಣಿನ ಬಗೀ ಚಂದಿರನ ನಗಿʼ ಇರುವಂಥ ಸಾಂಸ್ಕೃತ ಬೆಳುದಿಂಗಳನ್ನ ಸಹೃದಯರೊಂದಿಗೆ ಸೊಗಸಾಗಿ ಹಂಚಿಕೊಂಡಿರುವ ಕಾರಣದಿಂದಾಗಿ ಈ ಕೃತಿ ಆಪ್ತವೆನ್ನಿಸುತ್ತದೆ. 

(ಕೃಪೆ: ಪ್ರಜಾವಾಣಿ. ಬರಹ- ರಘನಾಥ ಚ.ಹ)

Related Books