ಡಿ. ಆರ್. ನಾಗರಾಜರ ಬರವಣಿಗೆಯಲ್ಲಿ ಇದೊಂದು ಪ್ರವರ್ತಕ ಗುಣ ಪಡೆದುಕೊಂಡ ಆಚಾರ್ಯಕೃತಿ ಎನ್ನಬಹುದು. ಅಲ್ಲಮನನ್ನು ಅವನ ಕಾಲದಲ್ಲಿಟ್ಟು ನೋಡುವಂತೆಯೇ, ನನ್ನ ಕಾಲದ ದೃಷ್ಟಿಯಿಂದಲೂ ವಿಶ್ಲೇಷಿಸುವ ನಾಗರಾಜರ ಪ್ರತಿಭೆ ಅಸಾಮಾನ್ಯ ಶಕ್ತಿಯುಳ್ಳದ್ದು. ಎಕಕಾಲದಲ್ಲಿ ದಾರ್ಶನಿಕನೂ, ಕವಿಯೂ ಆದ ಅಲ್ಲಮನನ್ನು ತತ್ಪರವಾಗಿ ಅರಿಯುವ ಪ್ರಯತ್ನದಲ್ಲಿ ಭಾರತೀಯ ದರ್ಶನಗಳ ಬಗ್ಗೆ ನಮ್ಮ ತಿಳುವಳಿಕೆಯೂ, ಜೊತೆಗೆ ಭಾರತೀಯ ಕಾವ್ಯಮೀಮಾಂಸೆಯ ಗೃಹೀತಗಳೂ ಯಾಕೆ ಬದಲಾಗಬೇಕಾಗುತ್ತವೆ ಎಂಬುದನ್ನು ಈ ಕೃತಿಯ ಉದ್ದಕ್ಕೂ ಸೂಕ್ಷ್ಮವಾಗಿ ವಿದ್ವತ್ಪೂರ್ಣವಾಗಿ ನಾಗರಾಜರು ಪರಿಶೀಲಿಸಿದ್ದಾರೆ. ಗಾಢವಾದ ಒಳನೋಟಗಳಿಂದ ಬೆಳಗುವ ನಾಗರಾಜರ ಗದ್ಯಶೈಲಿಯೂ ಇಲ್ಲಿ ಕನ್ನಡ ಸಾಹಿತ್ಯವಿಮರ್ಶೆಯ ಇತಿಹಾಸದಲ್ಲಿ ತಾನು ಏರಿದ ಎತ್ತರವನ್ನು ಸೂಚಿಸುವಂತಿದೆ. ಓದುಗನ ಪ್ರಜ್ಞೆಯನ್ನೇ ಪರಿಷ್ಕರಿಸಿ ಉಲ್ಲಾಸದಲ್ಲಿ ಹಿಗ್ಗುವಂತೆ ಮಾಡುವ ಈ ಕೃತಿ ಪ್ರಪಂಚದ ಯಾವ ಭಾಷೆಯಲ್ಲಾದರೂ ಉತ್ಕೃಷ್ಟ ಕೃತಿ ಎನ್ನಿಸಿಕೊಂಡೀತು. ಕನ್ನಡದ ಒಂದು ಮನಸ್ಸು ಐರೋಪ್ಯಪ್ರಣೀತವಾದ ಆಧುನಿಕತೆಯನ್ನು ಅಲ್ಲಮನ ಮೂಲಕ ಮೀರಿ ನಮ್ಮ ಪ್ರಸ್ತುತ ಸಾಂಸ್ಕೃತಿಕ ಸಂದರ್ಭಕ್ಕೆ ಚೈತನ್ಯಪೂರ್ಣವಾಗಿ ಎದುರಾಗುವ ಪ್ರಕ್ರಿಯೆಯನ್ನು ಪ್ರತಿನಿಧಿಸುವ ಈ ಕೃತಿ ಕನ್ನಡ ಸಾರಸ್ವತ ಲೋಕದಲ್ಲಿ ಗಂಭೀರವಾದ ಚರ್ಚೆಗೆ ಅರ್ಹವಾಗಿದೆ. -ಯು. ಆರ್. ಅನಂತಮೂರ್ತಿ
ಕನ್ನಡದ ಖ್ಯಾತ ವಿಮರ್ಶಕ ಹಾಗೂ ಚಿಂತಕರಾದ ಡಾ.ಡಿ.ಆರ್.ನಾಗರಾಜು ಅವರು ಹುಟ್ಟಿದ್ದು ದೊಡ್ಡಬಳ್ಳಾಪುರದಲ್ಲಿ. ತಂದೆ ರಾಮಯ್ಯ, ತಾಯಿ ಅಕ್ಕಯ್ಯಮ್ಮ. ದೊಡ್ಡಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಾಗರಾಜ್ ಪ್ರೌಢ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಅಂದಿನ ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ವಿದ್ಯಾರ್ಥಿಯಾದ ಅವರು ಆನರ್ಸ್ ಪದವಿಯನ್ನು ಅಲ್ಲಿಯೇ ಪಡೆದರು. ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ ಪಡೆದ ಡಿ.ಆರ್ ಸ್ವಲ್ಪ ಕಾಲ ಸಂಶೋಧಕ ವೃತ್ತಿಯಲ್ಲಿದ್ದು ಅಲ್ಲಿಯೇ ಕನ್ನಡ ಅಧ್ಯಾಪಕರಾದರು. ಪ್ರವಾಚಕರಾದರು, ಜೊತೆಗೆ ಕೈಲಾಸಂ ಪೀಠದ ಸಂದರ್ಶಕ ಪ್ರಾಧ್ಯಾಪಕರೂ ಆದರು. ಕನ್ನಡದ ವಿಮರ್ಶೆಗೆ ಸಾಂಸ್ಕೃತಿಕ ಆಯಾಮವನ್ನು ಒದಗಿಸಿದ ನಾಗರಾಜ್ ಅಮೆರಿಕದ ...
READ MORE