ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ.
ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ಕರ್ನಾಟಕ ಕಾಲೇಜಿನಿಂದ ಪಡೆದ ಬಿ.ಎ. ಆನರ್ಸ್ ಪದವಿ, ಮತ್ತು ಮುಂಬಯಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ. ಪದವಿ, ಪ್ರತಿ ವರ್ಷವೂ ರ‍್ಯಾಂಕ್ ಪಡೆದ ವಿದ್ಯಾರ್ಥಿ. 1961ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ `THE CONCEPT OF COMEDY’ ಮಹಾ ಪ್ರಬಂಧ ಮಂಡಿಸಿ ಪಡೆದ ಪಿಹೆಚ್.ಡಿ. ಪದವಿ ಗಳಿಸಿದರು. ಗದುಗಿನ ತೋಂಟದಾರ್ಯ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇರಿ ನಂತರ ಔರಂಗಾಬಾದ್‌ನ ಮರಾಠವಾಡ ವಿದ್ಯಾಪೀಠದಲ್ಲಿ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ನಿವೃತ್ತರಾಗುವವರೆವಿಗೂ ಕಾರ್ಯ ನಿರ್ವಹಿಸಿದರು. ಮುರಾಠವಾಡ ವಿದ್ಯಾಪೀಠದಲ್ಲಿದ್ದಾಗಲೇ ಫುಲ್‌ಬ್ರೈಟ್ ಫೆಲಿಶಿಪ್ ಪಡೆದು ಅಮೆರಿಕದ ಕ್ಯಾಸಿಫೋರ್ನಿಯಾ (ಸಾಂಟಾಬಾರ್ಬರ) ಹಾಗೂ ಯೇಲ್ಸ್ ವಿಶ್ವವಿದ್ಯಾಲಯಗಳಲ್ಲಿ ಮತ್ತು 1973ರಲ್ಲಿ ಬ್ರಿಟಿಷ್ ಕೌನ್ಸಿಲ್ ಸಹಾಯದಿಂದ ಇಂಗ್ಲೆಂಡ್‌ನಲ್ಲಿ – ಹೀಗೆ ಎರಡುಬಾರಿ ಸಂಶೋಧನೆಯಲ್ಲಿ ನಿರತರಾಗಿದ್ದರು.
ಕನ್ನಡದ ಮೊದಲ ಕೃತಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾದುದು ಮಿಲ್ಟನ್ ಕವಿಯ ಮೇಲೆ ಬರೆದ ‘ಮಹಾಕವಿ ಮಿಲ್ಟನ್’ (1966). ನಂತರ ಮೊದಲ ವಿಮರ್ಶಾ ಪ್ರಬಂದಗಳ ಕೃತಿ ‘ಕೃತಿ ಪರೀಕ್ಷೆ’. ಸಮಕಾಲೀನ ಕಥೆ-ಕಾದಂಬರಿ, ಕನ್ನಡ ಕಾದಂಬರಿಯ ಬೆಳವಣಿಗೆ, ಅ.ನ. ಕೃಷ್ಣರಾಯ, ಅರ್ಥಲೋಕ ಮುಂತಾದ ಕೃತಿಗಳಲ್ಲದೆ ಬೇಂದ್ರೆಯವರ ಗಂಗಾವತರಣವನ್ನೂ ಮಧ್ಯಬಿಂದುವಾಗಿಟ್ಟುಕೊಂಡು ಕಾವ್ಯ ಹಾಗೂ ಕಾವ್ಯೇತರ ಬರಹಗಳನ್ನೂ ವಿವೇಚಿಸುವ ‘ಭುವನದ ಭಾಗ್ಯ’ ಕೃತಿ, ವ್ಯವಸಾಯ, ಕನ್ನಡ ಕಥನ ಸಾಹಿತ್ಯ: ಕಾದಂಬರಿ, ವಿರಾಟಪುರುಷ, ಸಾತ್ವಿಕ ಪಥ, ಕಾದಂಬರಿ ಸ್ವರೂಪ, ದತ್ತಾತ್ರೇಯ ರಾಮಚಂದ್ರಬೇಂದ್ರೆ ಮುಂತಾದ 39 ಕೃತಿಗಳಲ್ಲದೆ ಚಿತ್ತಾಲರ ಆಯ್ದ ಕಥೆಗಳು, ಕೆ ಸದಾಶಿವ ಅವರ ಕಥಾ ಸಾಹಿತ್ಯ, ಅವಳ ಕಥೆಗಳು, ಬೇಂದ್ರೆ ಕಾವ್ಯ, ಕನ್ನಡ ಕಥಾಲೋಕ, ಶ್ರೀರಂಗ ಸಾರಸ್ವತ, ಹುಯಿಲಗೋಳ ನಾರಾಯಣರಾಯರ ಸಮಗ್ರ ಸಾಹಿತ್ಯ ಮುಂತಾದವುಗಳನ್ನು ಸಂಪಾದಿಸಿದ್ದಾರೆ.
ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯೂ ಗೌರವಗಳಿಸಿದ್ದಾರೆ. ಇವರ ‘ಅರ್ಥಲೋಕ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಸ.ಸ. ಮಾಳವಾಡ ಪ್ರಶಸ್ತಿ; ಭುವನದ ಭಾಗ್ಯ ಕೃತಿಗೆ ಭಾರತೀಯ ಭಾಷಾ ಪರಿಷತ್-ಕೊಲ್ಕತ್ತಾ, ಪ್ರೊ.ವಿ.ಎಂ. ಇನಾಂದಾರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ; ಕನ್ನಡ ಕಥನ ಸಾಹಿತ್ಯ: ಕಾದಂಬರಿ ಕೃತಿಗೆ ಬಿ.ಎಚ್. ಶ್ರೀಧರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತಿದೆ. ಇವಲ್ಲದೆ ರಾಜ್ಯೋತ್ಸವ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ವಿಮರ್ಶಕ ರತ್ನ ಪ್ರಶಸ್ತಿ, ಅಖಿಲ ಭಾರತ ಮಾಧ್ವ ಮಹಾ ಮಂಡಲದಿಂದ ಕನ್ನಡ ಭಾಷಾ ಭೂಷಣ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ಸಂದೇಶ್ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಪಂಪ್ರಶಸ್ತಿ, ಮಾಸ್ತಿ ಪ್ರಶಸ್ತಿಗಳು ದೊರೆತಿವೆ. ಒಂದು ಕೃತಿಯನ್ನೂ ವಿಮರ್ಶಿಸುವಾಗ ಕೃತಿಯಲ್ಲಿ ಏನಿದೆ? ಏಕಿದೆ? ಎಂದು ವಿಮರ್ಶಿಸಬೇಕೇ ವಿನಃ ಏನಿಲ್ಲ, ಏನಿರಬೇಕಿತ್ತು ಎಂದು ಹುಡುಕುವುದು ವಿಮರ್ಶಕನ ಕೆಲಸವಾಗಬಾರದು ಮತ್ತು ವಿಮರ್ಶಕನಾದವನು ಅಂತಃ ಚಕ್ಷುಗಳನ್ನೂ ತೆರೆದು ಪೂರ್ವಾಗ್ರಹ ಪೀಡಿತನಾಗದೆ ಕೃತಿಯೊಡನೆ ಅನುಸಂಧಾನ ಮಾಡಬೇಕೆನ್ನುವುದೇ ಇವರ ಖಚಿತ ಅಭಿಪ್ರಾಯವಾಗಿದ್ದು ವಿಮರ್ಶೆಯ ಕ್ಷೇತ್ರದಲ್ಲಿ ಹೊಸಹೊಸ ಅನ್ವೇಷಣೆಗಳನ್ನು ಮಾಡಿ ಹೊಸಹೊಸ ವಿಸ್ತೃತ ವಿಮರ್ಶಾವಿಧಾನಗಳನ್ನೂ ರೂಪಿಸತೊಡಗಿದ್ದಾರೆ.
ಕ.ಸ.ಪಾದಿಂದ 2020ನೇ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿ ಪಡೆದಿರುವ ಇವರು 2020 ಸೆಪ್ಟಂಬರ್ 28ರಂದು ನಿಧನರಾದರು.