ವಿಚಾರ ಬಿಂಬ- ಶ್ರೀಪತಿ ಹಳಗುಂದ ಅವರ 8ನೇ ಪುಸ್ತಕ. ಇವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಈ ಪುಸ್ತಕದಲ್ಲಿ ಸಮಾಜ, ಸಂಸ್ಕೃತಿ, ಭಾಷೆ, ವ್ಯಾಕರಣ, ಮಾಧ್ಯಮ, ಶಿಕ್ಷಣ, ರಾಜಕಾರಣ, ವಲಸೆ, ಆರ್ಥಿಕ ನೀತಿ, ಹಿಂದುಳಿದ ವರ್ಗಗಳು, ಮಹಿಳಾ ಪ್ರಶ್ನೆಗಳು, ಪರಿಸರದ ಪ್ರಶ್ನೆಗಳು.ಪುಸ್ತಕ ವಿಮರ್ಶೆ - ಈ ವಿಷಯಗಳನ್ನು ಕುರಿತು ಆಳವಾಗಿ ಚಿಂತಿಸಿ ಬರೆದ ಲೇಖನಗಳಿವೆ. ಶ್ರೀಪತಿಯವರು ಕನ್ನಡ ಸಾಹಿತ್ಯದ ಅಧ್ಯಾಪಕರು. ಹಾಗಾಗಿ ಇವರ ಆಲೋಚನೆಗಳಲ್ಲಿ ಸಾಹಿತ್ಯಕ ಮನಸ್ಸೊಂದು ತಾನೇತಾನಾಗಿ ಕೆಲಸ ಮಾಡಿದೆ. ಲೋಕವನ್ನು ಸೂಕ್ಷ್ಮ ದೃಷ್ಟಿಯಲ್ಲಿ ಗ್ರಹಿಸಿದ್ದಾರೆ. ಇವರ ಆಲೋಚನೆಗಳಲ್ಲಿ ಕನ್ನಡತನ ಮತ್ತು ಅಘೋಷಿತ ರೂಪದ ಸಾಮಾಜಿಕ ಹೊಣೆಗಾರಿಕೆಗಳು ಅಂತರ್ಗತವಾಗಿವೆ.
ಇಲ್ಲಿನ ಇಷ್ಟೂ ಲೇಖನಗಳನ್ನು ಭಾಷೆ, ಸಾಹಿತ್ಯ, ಶಿಕ್ಷಣ, ಕೃಷಿ/ಪರಿಸರ ಮತ್ತು ಸಾಮಾಜಿಕ ವಿಷಯಗಳು ಎಂದು ವಿಭಾಗಿಸಬಹುದು. ಭಾಷೆಯನ್ನು ಕುರಿತು ಬರೆಯುವಾಗ ಅದರ ಸಮಸ್ಯೆಗಳನ್ನು ಮತ್ತು ಅದರ ಪರಿಹಾರೋಪಾಯಗಳನ್ನು ಕುರಿತು ಚರ್ಚಿಸಿದ್ದಾರೆ. ಕನ್ನಡಕ್ಕೆ ಒಂದು ಕಡೆ ಸಂಸ್ಕೃತ, ಮತ್ತೊಂದು ಕಡೆ ಇಂಗ್ಲಿಶ್ ಸಂಪರ್ಕಗಳಿರುವುದನ್ನು ಸೂಕ್ಷ್ಮವಾಗಿ ಗುರುತಿಸಿದ್ದಾರೆ. ಇದರ ಜೊತೆಗೆ ಕನ್ನಡದ ಬರವಣಿಗೆ ಮಾತಿನ ಕನ್ನಡಕ್ಕೆ ಹತ್ತಿರವಾಗಬೇಕೆಂಬ ಡಿ.ಎನ್. ಶಂಕರಭಟ್ಟರ ಆಲೋಚನೆಗಳನ್ನೂ ಪರಿಶೀಲಿಸಿದ್ದಾರೆ. ಕನ್ನಡಿಗರು ಮತ್ತು ಕನ್ನಡಿಗರಲ್ಲದವರನ್ನು ಕುರಿತು ಚರ್ಚಿಸುವಾಗ, ಕನ್ನಡದ ಬಗ್ಗೆ ಏಕಮುಖವಾಗಿ ಭಾವುಕರಾಗಿ ಆಲೋಚಿಸದೆ ಕನ್ನಡದ ಬಗ್ಗೆ ಒಳವಿಮರ್ಶಕರಾಗಿ ಆಲೋಚಿಸಿದ್ದಾರೆ. ಕನ್ನಡಿಗರಲ್ಲದವರನ್ನು ನಕಾರಾತ್ಮಕವಾಗಿ ನೋಡದೆ ಅವರೊಳಗಿನ ಸಹಬಾಳ್ವೆಯ ನುಡಿಸಂಕರದ ಪ್ರಭಾವವನ್ನು ಗುರುತಿಸಿದ್ದಾರೆ.
ಡಾ. ಶ್ರೀಪತಿ ಹಳಗುಂದ ಕೆ. ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪಳಗುಂದದವರು. ಎಂ.ಎ. ಪಿಎಚ್.ಡಿ. ಪದವೀಧರಾಗಿರುವ ಅವರು ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯಗಂಗೆ (ಕಾವ್ಯ), ಕಾರಂತರ ಕಾದಂಬರಿಗಳಲ್ಲಿ ಕಲಾವಂತೆಯರು (ವಿಮರ್ಶೆ) ಪ್ರಕಟಿತ ಕೃತಿಗಳು. ಕನ್ನಡ ಕಾದಂಬರಿಗಳಲ್ಲಿ ವೇಶ್ಯಾ ಜೀವನ (ಪಿಎಚ್.ಡಿ. ಮಹಾಪ್ರಬಂಧ). ಅವರಿಗೆ ಪಂಡಿತ ಪುಟ್ಟರಾಜ ಸಾಹಿತ್ಯ ಪುರಸ್ಕಾರ ಸಂದಿದೆ. ...
READ MORE