‘ಮನೋಧರ್ಮ’ ಕೃತಿಯು ಕೆ. ಸತ್ಯನಾರಾಯಣ ಅವರ ವಿಮರ್ಶಾತ್ಮಕ ಲೇಖನಗಳ ಸಂಕಲನವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಪುನರ್ಜನ್ಮದ ಕಲ್ಪನೆಯಲ್ಲಿ ನಂಬಿಕೆಯಿಲ್ಲದವರು ಕೂಡ ವಯಸ್ಸಾಗುತ್ತಿದ್ದಂತೆ ಪುನರ್ಜನ್ಮದ ಬಗ್ಗೆ ಆಸೆ ಪಡುತ್ತಾರೆ. ಮತ್ತೆ ತಾವು ಹುಟ್ಟಲು ಸಾಧ್ಯವಾಗುವುದಾದರೆ ಪ್ರಿಯರಾದವರ ಜೊತೆ, ಬಂಧುಗಳ ಜೊತೆ, ಶತ್ರು-ಹಿತ ಶತ್ರುಗಳ ಜೊತೆ ಹೇಗೆ ವ್ಯವಹರಿಸಬೇಕು ಎಂದೆಲ್ಲ ಲೆಕ್ಕ ಹಾಕುತ್ತಾರೆ. ಪುನರ್ಜನ್ಮದ ಕಲ್ಪನೆಯ ಬಗ್ಗೆಯೆ ಮನುಷ್ಯನಿಗೆ ಅದೇಕೆ ಅಷ್ಟೊಂದು ಆಸೆಯೆಂದರೆ ಅಮರತ್ವದ ಅವನ ಬಯಕೆಯನ್ನು ಅದು ಪೂರೈಸುತ್ತದೆ. ಮನುಷ್ಯ ಪುನರ್ಜನ್ಮದ ಸಂಬಂಧ ತುಂಬಾ ಗಹನವಾದ ವಿಷಯ, ತಾತ್ವಿಕರಿಗೆ, ಧರ್ಮಭೀರುಗಳಿಗೆ. ಅದನ್ನು ಬಿಟ್ಟು ಅಮರತ್ವ ಬಯಸದ, ನಿರ್ಲಿಪ್ತವಾಗಿ ನಿರುಪದ್ರವಿಯಾಗಿ ಗ್ರಂಥಾಲಯದ ಮೂಲೆಯಲ್ಲೋ, ಮನೆಯ ಅಟ್ಟದಲ್ಲೋ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯ ಬಿಕರಿ ವಸ್ತುವಾಗಿ ಫುಟ್ಪಾತ್ ಮೇಲೋ ಪುಸ್ತಕವೊಂದು ತಾನು ಬಯಸದೆ ಕೂಡ ಪುನರ್ಜನ್ಮ ಪಡೆಯುವ ಬಗೆ ಸೋಜಿಗವಾದದ್ದು. ಸಾಹಿತ್ಯ ವಲಯದ ವಾತಾವರಣ, ಜೀವಂತವಾಗಿರಬೇಕಾದರೆ ಈ ರೀತಿ ಕೃತಿಗಳು, ಲೇಖಕರು ದಿನವೂ ಓದುಗರ ಮನೆಗಳಲ್ಲಿ, ಮನಸ್ಸಿನಲ್ಲಿ, ಲೇಖಕರ ಕಲ್ಪನೆಗಳಲ್ಲಿ ಪುನರ್ಜನ್ಮ ಪಡೆಯುತ್ತಿರಲೇಬೇಕು. ವೈಯಕ್ತಿಕವಾಗಿ ನಮಗೆ ಹೀಗೆಲ್ಲ ಆಗುತ್ತಿರಬಹುದೇನೋ, ಆದರೆ ಉತ್ಸಾಹದಿಂದ, ಸಂಭ್ರಮದಿಂದ ನಾವು ಹಂಚಿಕೊಳ್ಳುವ, ಸಾಂಕ್ರಾಮಿಕಗೊಳಿಸಿರುವ ಉದಾಹರಣೆಗಳು ತೀರಾ ಕಡಿಮೆ. ಕನ್ನಡದ ಯಾವ ದಿನಪತ್ರಿಕೆಗಳೂ, ಸಾಹಿತ್ಯ ಪತ್ರಿಕೆಗಳೂ, ಇಂತಹ ಪುನರ್ಜನ್ಮದ ಅನುಭವವನ್ನು, ಅದರಿಂದ ಅನುಭವಿಸಿದ ಉತ್ಸಾಹವನ್ನು ದಾಖಲಿಸಿದ ಉದಾಹರಣೆಗಳು ಕಡಿಮೆ. ಶತಮಾನೋತ್ಸವ, ದಶಮಾನೋತ್ಸವ ಸಂದರ್ಭಗಳಲ್ಲೋ, ಸೆಮಿನಾರು ಸಂಕಿರಣದ ಸಂಕಷ್ಟದ ಸಮಯದಲ್ಲೋ ಹಿಂದಿನ ಲೇಖಕರ, ಕೃತಿಗಳ ಬಗ್ಗೆ ಲೇಖನಗಳು, ಪರಿಚಯ ಪ್ರಕಟವಾದರೂ ಇಂತಹ ಲೇಖನಗಳಲ್ಲೆಲ್ಲ ಸಾಂದರ್ಭಿಕ ಕೆಲಸವೊಂದನ್ನು ನಿರ್ವಹಿಸಿದ ಅಚ್ಚುಕಟ್ಟುತನ ಇರುತ್ತದೆಯೆ ಹೊರತು, ಮನುಷ್ಯರಾಗಿ, ಓದುಗರಾಗಿ ನಾವೇ ಅನುಭವಿಸಿದ ಸಂತೋಷ, ಪುಳಕ ಇರುವುದಿಲ್ಲ ಎಂದಿದೆ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE