ಕನ್ನಡದ ಮೊದಲ ಉಪಲಬ್ದ ಗ್ರಂಥ ಕವಿರಾಜಮಾರ್ಗ. ಈ ಗ್ರಂಥವು ತನ್ನ ಕಿರುಭಾಷೆಯ ಅಂಗೈನೆಲದಲ್ಲಿ ಪ್ರಪಂಚವನ್ನು ಆವಾಹಿಸಿ, ಅರಗಿಸಿ ಕನ್ನಡವೆಂಬ ನಿಸ್ಸೀಮೆಯ ಪ್ರತಿಜಗತ್ತನ್ನು ಸೃಷ್ಟಿಸಿಕೊಳ್ಳುವ ಬಗೆಯನ್ನು ಚಿಂತಿಸುತ್ತದೆ. ‘ಕವಿರಾಜಮಾರ್ಗ’ ದಲ್ಲಿನ ಒಂದು ಕಿರು ಕಂದಪದ್ಯವು ಅದನ್ನು ಮನೋಜ್ಞವಾಗಿ ವಿವರಿಸುತ್ತದೆ. ‘ಕಾವೇರಿಯಿಂದಂ-ಆ - ಗೋದಾವರಿವರಂ - ಇರ್ದ - ನಾಡು - ಅದು ಆ ಕನ್ನಡದೊಳ್‌ಭಾವಿಸಿದ ಜನಪದಂ’. ಈ ನಾಡು ಮತ್ತು ಜನಪದವು ತತ್ಕಾಲದಲ್ಲಿ ಕಾಣಿಸುತ್ತಿದ್ದ ಭೌಗೋಲಿಕ ಘಟಕವಷ್ಟೇ ಅಲ್ಲ; ಅದು ‘ಭಾವಿತ’ವಾದದ್ದು; ‘ಕನ್ನಡ’ ವೆಂಬುದರ ಒಳಗಡೆ -- ಆ ಚಿಪ್ಪಿನ ಒಳಗೆ ಎನ್ನಿ -- ‘ಭಾವಿತ’ ವಾದದ್ದು. ಅಂದರೆ, ‘ಕನ್ನಡ’ ವೆಂಬುದು ಒಂದು ಚಿತ್-ಜಗತ್ತು, ಒಂದು ಕಣಸು, ದರ್ಶನ; ಮೊದಲು ಚಿತ್ - ಜಗತ್ತಿನೊಳಗೆ ಮೈದಾಳಿದ್ದಾಗಿ ಅನಂತರ ನಿರ್ಮಿತಗೊಂಡಿದೆ. ಮತ್ತು ಇದು, ‘ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ’. ವಸುಧಾ (ಭೂಮಿ) ಎನ್ನುವುದು ಅನಂತ ಬ್ರಹ್ಮಾಂಡದೊಳಗಿನ ಒಂದು ‘ವಲಯ’ ಅಷ್ಟೇ; ಮತ್ತು ‘ಕನ್ನಡ’ ವೆಂಬ ‘ವಿಷಯ’ (ನಾಡು) ವು ಆ ವಸುಧಾವಲಯದಲ್ಲಿ ‘ವಿಲೀನ’ ವಾಗಿದೆ, ಸಮರಸವಾಗಿ ಬೆರೆತುಕೊಂಡಿದೆ. ಹಾಗೆಂದಮಾತ್ರಕ್ಕೆ ಇದು ಸ್ವಂತಿಕೆಯ ಚಹರೆಯಿಲ್ಲದೆ ವಸುಧೆಯಲ್ಲಿ ಗುರುತು ಸಿಗದಂತೆ ಮುಳುಗಿಹೋದದ್ದಲ್ಲ; ತನ್ನದೇ ‘ವಿಶೇಷ’ (ವೈಶಿಷ್ಟ್ಯ) ಇರುವ ನಾಡು. ಅಷ್ಟೇ ಅಲ್ಲ - ಇದು ‘ವಿಶದ’ ವಾದದ್ದು; ವಸುಧೆ ಅಥವಾ ಬ್ರಹ್ಮಾಂಡದಷ್ಟೇ ವ್ಯಾಪಕವಾದದ್ದು. ಯಾಕೆಂದರೆ ಇದು, ‘ವಸುಧಾವಲಯ ವಿಲೀನ, ವಸುಧೆಯ ಒಳಗಿನ ಒಂದು ಕಿರುಬಿಂದುವಾಗಿದ್ದೂ ತನ್ನೊಳಗೆ ಆ ವಸುಧೆಯನ್ನೇ ಅರಗಿಸಿಕೊಂಡಿರುವ ‘ಕನ್ನಡ’ ದ ಇಂಥ ಪ್ರತಿಮೆಯನ್ನು ‘ಕವಿರಾಜಮಾರ್ಗ’ವು ಕಂಡರಿಸಿಟ್ಟಿದೆ.
ನನ್ನ ಕನ್ನಡ ಜಗತ್ತು, ಕವಿರಾಜಮಾರ್ಗವು ನಿರ್ಮಿಸಿದ ಕನ್ನಡ ಜಗತ್ತು, ಕನ್ನಡವು ದಕ್ಕಿಸಿಕೊಂಡ ಅರಿವು ಮತ್ತು ಎಚ್ಚರ ಎಂಬ ಭಾಗಗಳಲ್ಲಿ ಚರ್ಚೆ ನಡೆಸಲಾಗಿದೆ. ಕೆ.ವಿ. ಸುಬ್ಬಣ್ಣನವರ ವಿಶ್ಲೇಷಣಾತ್ಮಕ ವಿವರಣೆಯು ಗ್ರಂಥದ ಮಹತ್ವ ಮತ್ತು ಕನ್ನಡ ಜಗತ್ತು ಕಂಡ ರೀತಿಯನ್ನು ವಿವರಿಸುತ್ತದೆ.
ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...
READ MOREಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ-2003