ಹೊಸ ತಲೆಮಾರಿನ ಕಾವ್ಯ ಒಂದು ರೀತಿಯಲ್ಲಿ ’ಹಲವು ಬಣ್ಣದ ಹಗ್ಗ’. ಅಲ್ಲಿ ಒಂದೇ ಬಗೆಯ ನೂಲುಗಳಿಲ್ಲ. ಸಾಹಿತ್ಯ ಚಳವಳಿ, ಸಾಮಾಜಿಕ ಚಳವಳಿಗಳು ಇಲ್ಲದ ಸಂದರ್ಭದಲ್ಲಿ ಇಂತಹ ವೈವಿಧ್ಯಮಯ ನೂಲಿನೆಳೆಗಳನ್ನು ಹೊಸೆಯಲು ಸಾಧ್ಯವಿರಬಹುದು.
ಹೊಸತಲೆಮಾರಿನಲ್ಲೇ ಹೊಸಬರಾದವರನ್ನು ಗುರುತಿಸಿ ಅವರ ಕುರಿತು ಅಧ್ಯಯನ ನಡೆಸಿದ್ದಾರೆ ಸಾಹಿತಿ, ವಿಮರ್ಶಕ ಸುರೇಶ್ ನಾಗಲಮಡಿಕೆ. ಕೃತಿಯ ಮೊದಲ ಭಾಗದಲ್ಲಿ ಹೊಸಬರ ಕಾವ್ಯದ ಲಕ್ಷಣಗಳನ್ನು ಗುರುತಿಸುವ ಕೆಲಸ ನಡೆದಿದೆ. ಎರಡನೇ ಭಾಗದಲ್ಲಿ ದಲಿತ ಮೀಮಾಂಸೆ ಕುರಿತ ಅಧ್ಯಾಯವಿದೆ. ಮೂರನೇ ಭಾಗ ಎರಡು ಕವಲುಗಳಾಗಿದ್ದು ಮೊದಲನೆಯದರಲ್ಲಿ ಚೀಮನಹಳ್ಳಿ ರಮೇಶ್ಬಾಬು, ಮಲ್ಲಿಕಾರ್ಜುನ ಛಬ್ಬಿ, ಸೈಫ್ ಜಾನ್ಸೆ ಕೊಟ್ಟೂರು, ಕಾವ್ಯ ಕಡಮೆ, ಕಾಜೂರು ಸತೀಶ್, ಸತ್ಯಮಂಗಲ ಮಹದೇವ ಅವರಂತಹ ಕವಿಗಳ ಸಮಕಾಲೀನ ಕಾವ್ಯವನ್ನು ವಿಮರ್ಶಿಸಲಾಗಿದೆ. ಎರಡನೇ ಕವಲು ಲಲಿತಾ ಸಿದ್ಧಬಸವಯ್ಯ, ಎನ್.ಕೆ. ಹನುಮಂತಯ್ಯ, ಕೆ.ಪಿ. ಮೃತ್ಯುಂಜಯ, ಡಿ.ಎಸ್. ರಾಮಸ್ವಾಮಿ, ರೂಪಾ ಹಾಸನ, ವಿನಯಾ, ಜ.ನಾ. ತೇಜಶ್ರೀ, ಎಚ್.ಎಸ್. ಅನುಪಮಾ, ಕವಿತಾ ರೈ, ರಮೇಶ್ ಅರೋಲಿ, ಆನಂದ್ ಈ ಕುಂಚನೂರು ಅವರ ಕಾವ್ಯದ ವಿಶ್ಲೇಷಣೆ ಇದೆ.
ಹೊಸ ತಲೆಮಾರಿನ ಕಾವ್ಯದ ಬಹುಮುಖ ಅಧ್ಯಯನ
ಸಮಕಾಲೀನ ಕಾವ್ಯವನ್ನು ಆಸಕ್ತಿಯಿಂದ ಓದುವ ಸುರೇಶ್ ನಾಗಲಮಡಿಕೆಯವರ ಈ ಕೃತಿ ಹೊಸ ಯವು ತಲೆಮಾರಿನ ಕಾವ್ಯ ಕುರಿತು ಅಧ್ಯಯನ ನಡೆಸಿದ ಒಂದು ಗಂಭೀರ ಪ್ರಯತ್ನವಾಗಿದೆ. ಕನ್ನಡದಲ್ಲಿ ಇಂದು ಶಕ್ತವಾಗಿ “ ಬರೆಯುತ್ತಿರುವ ಹೊಸ ತಲೆಮಾರಿನ ಕವಿಗಳ ಸಂಖ್ಯೆ ಸುಮಾರು ಐವತ್ತರ ಮೇಲೆ ಇದ್ದು ಅವರೆಲ್ಲರ ಕಾವ್ಯವನ್ನು ಆಸಕ್ತಿಯಿಂದ ಓದುವ, ಹಿಂಬಾಲಿಸುವುದು ಕಠಿಣಸಾಧ್ಯ.ಹಲವು ಐಡಿಯಾಲಾಜಿಗಳ, ಹಲವು ಸಂವೇದನೆಗಳ ಯುಗಧರ್ಮದ ಇಂದಿನ ಕಾವ್ಯವು ಒಂದು ಚೌಕಟ್ಟಿಗೆ ಒಳಪಡುವುದು ಕಷ್ಟ. ಸುರೇಶರು ತಮ್ಮ ಈ ಕೃತಿಯಲ್ಲಿ ಚದುರಿದ ಸಂವೇದನೆಗಳ ಹೊಸ ತಲೆಮಾರಿನ ಕಾವ್ಯವನ್ನು ಓದಿ ಸ್ಥಾನ ನಿರ್ದೇಶನ ಮಾಡುವ ನೀಡುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ಅವರ ಕಾವ್ಯಗಳ ಆಶಯ, ಆಕೃತಿಗಳನ್ನು ಕುರಿತು ಕೆಲವು ಒಳನೋಟಗಳನ್ನು ನೀಡಿದ್ದಾರೆ.
ಈ ಅಧ್ಯಯನದ ಮೊದಲ ಭಾಗದಲ್ಲಿ ಹೊಸಬರ ಕಾವ್ಯದ ಆಶಯ, ಆಕೃತಿಗಳನ್ನು ತಾತ್ವಿಕ ನೆಲೆಗಟ್ಟಿನಿಂದ ಬಿಡಿಸಿಡುವ ಕ್ರಮವಿದೆ. ಹೊಸ ತಲೆಮಾರಿನ ವಸ್ತುಗಳು ಜಾಗತೀಕರಣ ಸೇರಿದಂತೆ ಏನೆಲ್ಲಾ ಇವೆ ಎನ್ನುವುದನ್ನು ಸುರೇಶ್ ಅವರು ವಿಫುಲವಾದ ಉದಾಹರಣೆಗಳ ಮೂಲಕ ನಿರೂಪಿಸುವ ಯತ್ನ ಮಾಡಿದ್ದಾರೆ. ಈ ಮೂಲಕ ಹೊಸಬರಲ್ಲಿ ಸಾಮಾಜಿಕವಾದ ಸಂವೇದನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ ಎನ್ನುವುದನ್ನು ಅವರು ಗುರುತಿಸಿದ್ದಾರೆ.
ಇಲ್ಲಿ ಇವರು ಗುರುತಿಸುವ ಹೊಸ ತಲೆಮಾರಿನ ಸಮಸ್ಯೆಗಳಲ್ಲಿ ಭಾಷೆಯ ಬಳಕೆಯೂ ಒಂದಾಗಿದೆ. ಹೊಸ ಕಾವ್ಯದ ಅಭಿವ್ಯಕ್ತಿಯಲ್ಲಿ ಕಾಣುವ ವಾಚಾಳಿತನ, ಸಡಿಲ ನಿರೂಪಣೆಗಳನ್ನು ಅವರು ಗುರುತಿಸುತ್ತಾ ಕವಿಗಳಲ್ಲಿ ಗೈರು ಹಾಜರಾದ ರೂಪಕ ಬಳಕೆಯನ್ನು ಕುರಿತು ಹೇಳುತ್ತಾರೆ. ಅಂತಿಮವಾಗಿ ಕಾವ್ಯ ಮುಖ್ಯವಾಗುವುದು ಕವಿ ಪ್ರತಿಭೆಯು ಸೃಷ್ಟಿಸುವ ಮಾಂತ್ರಿಕತೆಯಿಂದ, ಕೌಶಲತೆಯ ಸಂಗತಿ ಎರಡನೆಯದು. ಆದರೆ ಆಶಯ ಆಕೃತಿಗಳ ಬಗೆಗೆ ಅವರು ಹೇಳುವ ಮಾತುಗಳನ್ನು ಒಪ್ಪುತ್ತಲೇ ಅವರು ಇದನ್ನು ಇನ್ನಷ್ಟು ಸ್ಪಷ್ಟ ಶಬ್ದಗಳಲ್ಲಿ ಹೇಳಬೇಕಿತ್ತು ಎನ್ನಿಸುತ್ತದೆ.
ಕನ್ನಡ ಕಾವ್ಯದ ಓದು ಇಂದು ದಲಿತ, ಸ್ತ್ರೀ, ಸಬಾಲ್ಟ್ರನ್ ಇತ್ಯಾದಿ ಅಂಶಗಳನ್ನು ಮುನ್ನೆಲೆಯಲ್ಲಿಟ್ಟು ನೋಡುವಂತದ್ದಾಗಿದೆ. ಅದರಂತೆ ನಾಗಲಮಡಿಕೆಯವರು ಸಹ ಸೂಕ್ಷ್ಮ (micro) ಓದಿಗೆ ಮಹತ್ವ ನೀಡಿದ್ದಾರೆ.ಈ ಕೃತಿಯ ಒಂದು ಅಧ್ಯಾಯಗಳು ದಲಿತ ಮೀಮಾಂಸೆಯನ್ನೇ ಪ್ರಧಾನವಾಗಿ ಚರ್ಚಿಸುತ್ತದೆ. ಹೊಸ ತಲೆಮಾರಿನ ದಲಿತ ಕವಿಗಳ ವಸ್ತು, ಆಕೃತಿಗಳ ಜೊತೆ ದಲಿತ ಕಾವ್ಯ ಮೀಮಾಂಸೆಯನ್ನು ಇಟ್ಟು ನೋಡಲಾಗಿದೆ.ನಗರ ಬದುಕಿನ ದಲಿತರ ಮತಾಂತರದ ಹಿಂದಿನ ಅಸ್ಮಿತೆಯ ಪ್ರಶ್ನೆ, ಸ್ಲಂ ವಾಸ ಇತ್ಯಾದಿಗಳು ಅಸ್ಪಶ್ಯತೆಯ ಹೊಸ ವ್ಯಾಖ್ಯಾನವನ್ನು ಬೇಡುತ್ತಿವೆ ಎನ್ನುವುದನ್ನು ಗುರುತಿಸಲಾಗಿದೆ. ಇದೇ ರೀತಿ ಸುರೇಶ್ ಅವರ ಆಸಕ್ತಿ ಮಹಿಳಾ ಕಾವ್ಯದ ಬಗೆಗೂ ಇದೆ ಎನ್ನುವುದನ್ನು ಅವರು ಓದಿಗೆಂದು ಎತ್ತಿಕೊಳ್ಳುವ ಕಾವ್ಯಗಳು ದೃಢ ಪಡಿಸುತ್ತವೆ.
ಈ ಕೃತಿಯ ಮೊದಲ ಅಧ್ಯಾಯಗಳು ಕಾವ್ಯ ಮೀಮಾಂಸೆಯನ್ನು ಚರ್ಚಿಸಿದರೆ, ಕೃತಿಯ ಆನಂತರದ ಭಾಗಗಳು ಕವಿತೆಗಳ ಪಾತ್ಯಕ್ಷಿಕ ಅಧ್ಯಯನಗಳಾಗಿವೆ. ಒಟ್ಟಾರೆ ಈ ಲೇಖಕರ ಇಂಗಿತ ಕನ್ನಡದ ಹೊಸ ತಲೆಮಾರಿನ ಕಾವ್ಯವನ್ನು ಈಗಾಗಲೇ ಹೇಳಿದಂತೆ ಸೂಕ್ಷ್ಮ ಮತ್ತು ಸಮಗ್ರವಾಗಿ ನೋಡುವುದು.
ಸುರೇಶರ ಈ ಅಧ್ಯಯನದಲ್ಲಿ ಸಮಸ್ಯೆ ಎನಿಸುವುದು ಅವರು ವಸ್ತುವಿನ ಸಮಕಾಲೀನತೆಯ ಬಗೆಗೆ ತಳೆಯುವ ನಿಲುವು. ವಸ್ತು ಎನ್ನುವುದು ಜಾಗತೀಕರಣ, ಕೋಮುಭಾವನೆಗಳಂತಹ ಸಂಗತಿಗಳನ್ನು ತೆಗೆದುಕೊಂಡ ಮಾತ್ರಕ್ಕೆ ಸಮಕಾಲೀನವಾಗುವುದು ಎನ್ನಬಹುದೇ? ಎನ್ನುವುದನ್ನು ಅವರು ಗೊಂದಲದಿಂದ ಗ್ರಹಿಸುತ್ತಾರೆ ಎನ್ನಿಸುತ್ತದೆ. ಅಲ್ಲದೆ ಆಧುನಿಕೋತ್ತರ ಎನ್ನುವ ಪರಿಭಾಷೆಯು ನವ್ಯೋತ್ತರವೋ ಅಥವಾ ಪೋಸ್ಟ್ಮಾರ್ಡನ್ ತತ್ವದ ಪರಿಭಾಷೆಯೋ ಎನ್ನುವುದು ಇಲ್ಲಿ ಎಲ್ಲರಂತೆ ಸುರೇಶರಿಗೂ ಕಾಡಿದ ಸಂಗತಿಯೆನಿಸುತ್ತದೆ. ಅಲ್ಲದೆ ಬಹುಮುಖಿಯಾದ ಬಹುಜನರ ಕಾವ್ಯಗಳನ್ನು ಓದಿಗಾನಿಸಿಕೊಳ್ಳುವಾಗ ಉಲ್ಲೇಖಗಳೇ ಒಂದು ಸಮಸ್ಯೆಯಾಗಿ ಕಾಡಿದಂತೆ ತೋರುತ್ತದೆ.
-ಆರ್. ತಾರಿಣಿ ಶುಭದಾಯಿನಿ
ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ (ಮೇ 2019)
©2024 Book Brahma Private Limited.