ಪ್ರೊ.ಸಿ.ಎನ್. ರಾಮಚಂದ್ರನ್ ಕನ್ನಡ ಸಾಹಿತ್ಯ ವಿಚಾರ-ವಿಮರ್ಶೆಯಲ್ಲಿ ಮುಂಚೂಣಿಯಲ್ಲಿರು ವಿಮರ್ಶಕರು. ರಾಮಚಂದ್ರನ್ ಅವರು ಬರೆದು, ಬೆಂಗಳೂರಿನ ವಸಂತ ಪ್ರಕಾಶನ ಪ್ರಕಟಿಸಿರುವ ‘ಡಾ.ಯು.ಆರ್.ಅನಂತಮೂರ್ತಿ ಮತ್ತು ಡಾ.ಎಸ್.ಎಲ್.ಭೈರಪ್ಪ ಕಥನ ಮತ್ತು ತಾತ್ವಿಕತೆ’ ಪುಸ್ತಕ ಸಾಹಿತಿದ್ವಯರತ್ತ ನಮ್ಮ ಗಮನಸೆಳೆಯುತ್ತದೆ ಜೊತೆಗೆ ಒಂದು ಪುನರಾವಲೋಕನಕ್ಕೆ ಪ್ರೇರಣೆಯಾಗುತ್ತದೆ.
ರಾಮಚಂದ್ರನ್ ಅವರ ನೂರಿಪ್ಪತ್ತೆಂಟು ಪುಟಗಳ ಈ ಹೊತ್ತಿಗೆ ನವೋದಯದ ನಂತರದ ಕನ್ನಡದ ಇಬ್ಬರು ಪ್ರಮುಖ ಲೇಖಕರ ತೌಲನಿಕ ಅಧ್ಯಯನ ಇರಬಹುದೇ ಎಂಬ ನಿರೀಕ್ಷೆಯಿಂದ ಕೈಗೆತ್ತಿಕೊಂಡವರಿಗೆ ನಿರಾಶೆಯಾದೀತು. ಏಕೆಂದರೆ ರಾಮಚಂದ್ರನ್ ಅವರು ಆರಂಭದಲ್ಲೇ ಇದು ತೌಲನಿಕ ವಿಮರ್ಶೆಯಲ್ಲ. ಇಬ್ಬರಲ್ಲಿ ಯಾರು ಹೆಚ್ಚು ಸಮರ್ಥ ಲೇಖಕರು ಎಂದು ಗುರುತಿಸುವ ಪ್ರಯತ್ನವಲ್ಲವೆಂದು ಕುತೂಹಲಕ್ಕೆ ತಣ್ಣೀರೆರೆಚಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಈ ಇಬ್ಬರು ಮಹತ್ವದ ಲೇಖಕರ ಕೊಡುಗೆಯನ್ನು ತಾತ್ವಿಕವಾಗಿ ಸಮೀಕ್ಷಿಸುವ ಮೂಲಕ ಗುರುತಿಸುವ ಪ್ರಯತ್ನ ಇದೆಂದು ರಾಮಚಂದ್ರನ್ ಅವರ ವಿನಮ್ರ ಅರಿಕೆ.
ರಾಮಚಂದ್ರನ್ ಅವರ ಪುಸ್ತಕದಲ್ಲಿ ಮೂರು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಅನಂತಮೂರ್ತಿಯವರ ಸಣ್ಣಕತೆ, ಕಾದಂಬರಿ, ಲೇಖನ ಮತ್ತು ವಿಮರ್ಶೆ ಸೇರಿದಂತೆ ಎಲ್ಲಾ ಕೃತಿಗಳನ್ನೂ ಗಮನಿಸಿ ಒಂದು ತಾತ್ವಿಕ ನಿರ್ಧಾರಕ್ಕೆ ಬರುವ ಪ್ರಯತ್ನ ಮಾಡಿದ್ದಾರೆ. ಎರಡನೆ ಭಾಗದಲ್ಲಿ ಭೈರಪ್ಪನವರ ಕೃತಿಗಳ ಬಗ್ಗೆ ಇಂಥಹುದೇ ಪ್ರಯತ್ನವಿದೆ. ಮೂರನೆಯ ಭಾಗದಲ್ಲಿ ‘ಸಂಸ್ಕಾರ ಮತ್ತು ವಂಶವೃಕ್ಷ ನಡೆದು ಬಂದ ದಾರಿ’ ಎಂಬ ಲೇಖನವಿದೆ. ರಾಮಚಂದ್ರನ್ ಅವರ ಇಲ್ಲಿನ ಸಮೀಕ್ಷೆ ಪಾಶ್ಚಾತ್ಯ ಅಥವಾ ನಮ್ಮ ಕಾವ್ಯ ಮೀಮಾಂಸೆಯ ಮಾನದಂಡಗಳಿಂದ ಒರೆಗೆಹಚ್ಚುವ ರೀತಿಯದ್ದಲ್ಲ. ಇದೊಂದು ತಾತ್ವಿಕ ಮಾನದಂಡವನ್ನೇ ಪ್ರಮುಖವಾಗಿರಿಕೊಂಡ ವಿಮರ್ಶೆ. ಅಂದರೆ ಈ ಇಬ್ಬರು ಲೇಖಕರ ತಾತ್ವಿಕ ನಿಲುವೇ ಇಲ್ಲಿ ಮಾನದಂಡವಾಗಿದೆ.
ರಾಮಚಂದ್ರನ್ ಅವರು ಜನಿಸಿದ್ದು (ಜ ೧೯೩೬) ಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಅಮೆರಿಕೆಯ ಮಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ. ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೯೬ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಧ್ಯಾಪಕರಾಗಿ ನಿವೃತ್ತಿ. ಸಾಹಿತ್ಯ ವಿಮರ್ಶೆ, ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಪ್ರತಿರೋಧ, ಎಡ್ವರ್ಡ್ ಸೈದ್, ಬಯಲುರೂಪ, ರಕ್ತ-ರೂಪಣೆ, ಹೊಸ ಮಡಿಯ ಮೇಲೆ ಚದುರಂಗ, ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು ವಿಮರ್ಶಾ ಕೃತಿಗಳು. ಶೋಧ ಕಾದಂಬರಿ, ಕಸಾಂದ್ರ ಕಥಾ ಸಂಕಲನ. ಇನಾಂದಾರ್ ಪ್ರಶಸ್ತಿ, ...
READ MORE