‘ಚಿನ್ನದ ಕತ್ತಿಗೆ ಪರಾಕು ಪಂಪು’ ಅಡಿಗರ ಕಾವ್ಯ ಮತ್ತು ಕೋಮುವಾದದ ಒಂದು ವಾಗ್ವಾದ ಎಂ.ಡಿ. ಒಕ್ಕುಂದ ಅವರ ವಿಮರ್ಶಾ ಕೃತಿ. ಬರಹಗಾರ ಅರುಣ್ ಜೋಳದಕೂಡ್ಲಿಗಿ ಹಾಗೂ ಲೇಖಕ ರಾಜೇಂದ್ರ ಪ್ರಸಾದ್ ಬೆನ್ನುಡಿ ಬರೆದಿದ್ದಾರೆ. ‘ನಾವು ನಮ್ಮ ಹಿರಿಯರ ವಿಮರ್ಶೆಯ ಕನ್ನಡಕದಿಂದ ಕನ್ನಡ ಸಾಹಿತ್ಯವನ್ನು ನೋಡುವುದು ಎಷ್ಟು ಅಪಾಯಕಾರಿ ಎನ್ನುವುದನ್ನು ಎಂ.ಡಿ. ಒಕ್ಕುಂದ ಅವರ ಅಡಿಗರ ಕುರಿತ ವಿಮರ್ಶೆ ತೋರಿಸಿಕೊಟ್ಟಿದೆ’ ಎನ್ನುತ್ತಾರೆ ಅರುಣ್ ಜೋಳದಕೂಡ್ಲಿಗಿ.
ಅಡಿಗರ ಪಾಂಚಜನ್ಯ ವಸಾಹತ್ತೋತ್ತರ ಭಾರತದಲ್ಲಿ ಮುಸ್ಲೀಮರ ವಿರುದ್ಧ ಮೊಳಗುತ್ತದೆ, ಕನ್ನಡ ವಿಮರ್ಶಾಲೋಕ ಈ ತನಕ ದಿವ್ಯಮೌನದಲ್ಲಿ ಅಡಗಿಸಿಟ್ಟಿದ್ದ ಅಡಿಗರ ಮತಾಂಧತೆಯನ್ನು ಒಕ್ಕುಂದ ಅವರು ಬೆಚ್ಚಿಬೀಳಿಸುವಂತೆ ಬೇರುಸಮೇತ ಕಿತ್ತು ಲೋಕಕ್ಕೆ ತೋರಿಸಿದ್ದಾರೆ. ನಮ್ಮ ಹಿರಿಯರನ್ನು ಸಂವಿಧಾನದ ಸಮತೆಯ ಕಣ್ಣೋಟದಲ್ಲಿ ಮರುವಿಮರ್ಶಿಸುವ ದಿಟ್ಟ ಮಾದರಿಯನ್ನು ಕಟ್ಟಿಕೊಟ್ಟಿದ್ದಾರೆ ಎಂಬುದು ಅರುಣ್ ಅವರ ಅಭಿಪ್ರಾಯ.
ಜೊತೆಗೆ, ಅಡಿಗರ ಕಾವ್ಯಾಭ್ಯಾಸಗಳು ದಶಕಗಳಿಂದ ನಿರಂತರವಾಗಿ ನಡೆಯುತ್ತಲೇ ಇವೆ. ಅವೆಲ್ಲ ಕಾವ್ಯ ಶ್ರೇಷ್ಠತೆಯ ವ್ಯಸನಗಳಿಂದಲೇ ಕೂಡಿರುವುದಕ್ಕೆ ಅಡಿಗರ ಹೊರತಾದ ಕಾರಣಗಳಿಲ್ಲ ಎನ್ನುತ್ತಾರೆ ಕವಿ ರಾಜೇಂದ್ರ ಪ್ರಸಾದ್. ಇಷ್ಟೆಲ್ಲ ಅಭ್ಯಾಸವರ್ಗಗಳು ನಡೆದರೂ ಅವರ ಕಾವ್ಯದಲ್ಲಿರುವ ಕೋಮುವಾದಿ ನೆಲೆಗಳನ್ನು ಗುರುತಿಸುವಲ್ಲಿ, ಹೇಳುವಲ್ಲಿ ಉಂಟಾದ ವಿಳಂಬವು ದೊಡ್ಡದು ಮತ್ತು ಸೋಜಿಗವಾದದ್ದು. ಈ ಕೃತಿಯಲ್ಲಿ ಅಂತಹ ಪ್ರಯತ್ನವು ಪ್ರಾಮಾಣಿಕವಾಗಿ ಸಾಧ್ಯವಾಗಿದೆ. ಆ ನಿಟ್ಟಿನ ಸಂಶೋಧನೆ ಮತ್ತು ಸಂವಾದಗಳು ನಡೆದಿವೆ. ಅಡಿಗರ ಕಾವ್ಯವನ್ನು ನಾವು ಸಂಭ್ರಮಿಸುವ ಹೊತ್ತಿನಲ್ಲಿ ಅಲ್ಲಿರುವ ಅಭಾಸಗಳನ್ನು, ಅಸಹನೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು. ಈ ಕೃತಿಯು ಅಂತಹ ಎಚ್ಚರಿಕೆ ಒಂದು ಕಾಣ್ಕೆ ಎಂಬುದು ರಾಜೇಂದ್ರ ಪ್ರಸಾದ್ ಅವರ ಅಭಿಪ್ರಾಯ.
ಕವಿ- ಲೇಖಕ ಎಂ.ಡಿ.ಒಕ್ಕುಂದ ಅವರು ಕನ್ನಡ ಅಧ್ಯಾಪಕರಾಗಿದ್ದಾರೆ. ಅವರು ಧಾರವಾಡ ಜಿಲ್ಲೆ/ತಾಲೂಕಿನ ಅಮ್ಮಿನಭಾವಿಯಲ್ಲಿ 1967 ರ ಜೂನ್ 15 ರಂದು ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಗದಗ ಜಿಲ್ಲೆಯ ನರಗುಂದದ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ರೆಕ್ಕೆ ಗರಿಗಳ ಬಿಚ್ಚಿ, ತುಳುಕು ಅವರ ಕವನ ಸಂಕಲನವಾಗಿದೆ. ...
READ MORE