‘ಭಾಷೆಗಳ ಗಡಿ ಗೆದ್ದ ಭಾರತೀಯ’ ಕೃತಿಯು ಜಿ.ಎನ್. ಉಪಾಧ್ಯ ಹಾಗೂ ಉಮಾ ರಾಮರಾವ್ ಅವರ ಸಂಪಾದಕತ್ವದ ಕೃತಿಯಾಗಿದೆ. ಈ ಕೃತಿಯಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮಿತ್ರರು ಕಂಡಂತೆ ‘ಎಸ್.ಎಲ್. ಭೈರಪ್ಪ’ ಎಂಬ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಕಾದಂಬರಿಕಾರ ಎಸ್.ಎಲ್. ಭೈರಪ್ಪನವರಿಗೆ ಮುಂಬಯಿಯೊಂದಿಗೆ ಪ್ರೀತಿಯ ನಂಟಿದೆ. ಭೈರಪ್ಪನವರು ತಮ್ಮ ಮುಂಬಯಿ ಪ್ರವಾಸದ ಸಂದರ್ಭದಲ್ಲಿ ಕಲವು ಬಾರಿ ನಮ್ಮ ಕನ್ನಡ ವಿಭಾಗಕ್ಕೂ ಭೇಟಿಯಿತ್ತಿದ್ದಾರೆ. ಭೈರಪ್ಪನವರ ಸಾಹಿತ್ಯಶಕ್ತಿಗೆ ಮಾರುಹೋದ ಅನೇಕ ಅಭಿಮಾನಿಗಳು ನಮ್ಮ ವಿಭಾಗದಲ್ಲಿದ್ದಾರೆ. ಅವರೆಲ್ಲರ ಕೆಲವು ಅನಿಸಿಕಗಳ ಬರಹ ರೂಪವೇ ಈ ಪುಸ್ತಕ. ಈ ಹೊತ್ತಗೆಯ ದಗ್ಗಳಿಕೆಯೆಂದರೆ ಇದರಲ್ಲಿರುವ ಲೇಖನಗಳ ಕರ್ತೃಗಳೆಲ್ಲರೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸದಸ್ಯರು. ಭೈರಪ್ಪನವರ ಕಾದಂಬರಿಗಳನ್ನು ಕುರಿತು, ಅವುಗಳಲ್ಲಿನ ಪಾತ್ರಗಳನ್ನು ಕುರಿತು, ಅವರ ಕಾದಂಬರಿಗಳು ತಮ್ಮನ್ನು ತಟ್ಟಿರುವ ಅನನ್ಯತೆಯನ್ನು ಕುರಿತು, ಈ ಕಾದಂಬರಿಗಳಿಗೆ ವ್ಯಕ್ತವಾಗಿರುವ ಧನಾತ್ಮಕ ಸ್ಪಂದನೆಯನ್ನು ಕುರಿತು, ಭೈರಪ್ಪನವರ ಮುಂಬಯಿ ನಂಟಿನ ಕುರಿತು ಇಲ್ಲಿ ಲೇಖನಗಳಿವೆ.
ಭೈರಪ್ಪನವರೊಡನೆ ನಡೆಸಿದ ಮುಕ್ತ ಸಂವಾದದ, ಪರ್ವವನ್ನು ಕುರಿತಾಗಿ ಅವರು ನೀಡಿರುವ ಕೆಲವು ಅಪರೂಪದ ಮಾಹಿತಿಯ ದಾಖಲೆಯಿಲ್ಲಿದೆ. ಇಲ್ಲಿನ ಬರಹಗಳಲ್ಲಿ ವೈವಿಧ್ಯವಿದೆ, ಪ್ರಾಮಾಣಿಕತೆಯಿದೆ, ಮುಗ್ಧತೆಯಿದೆ. ಇತ್ತೀಚಿನ ದಿನಗಳಲ್ಲಿ ಭೈರಪ್ಪನವರು ಕೇವಲ ಕರ್ನಾಟಕದವರು, ಕನ್ನಡದ ಲೇಖಕರು ಎನ್ನುವುದು ತುಸು ಬಾಲಿಶವಾದೀತೇನೋ ಎನ್ನುವಂತಹ ವಾತಾವರಣವು ಏರ್ಪಟ್ಟಿದೆ. ಅವರ ಕೃತಿಗಳು ಸ್ವೀಕರಿಸಲ್ಪಟ್ಟಿರುವ ವ್ಯಾಪಕತೆಯು ಬೆರಗು ಎನ್ನಿಸುತ್ತಿದೆ, ದಕ್ಷಿಣ ಕರ್ನಾಟಕದ ಪುಟ್ಟ ಊರಾದ ಸಂತೇಶಿವರದಲ್ಲಿ ಜನ್ಮವೆತ್ತಿದ ಈ ಪ್ರತಿಭೆ ರಾಜ್ಯ ದೇಶಗಳ ಗಡಿಯನ್ನು ಮೀರಿ ಜಾಗತಿಕ ಮಟ್ಟದಲ್ಲಿ ತನ್ನ ಸಾಹಿತ್ಯ ಸಾಧನೆಗಳ ಕಂಪನ್ನು ಪಸರಿಸುತ್ತಿರುವುದು ಕನ್ನಡಿಗರೆಲ್ಲರಿಗೂ ಅತ್ಯಂತ ಹಮ್ಮೆಯ ಸಂಗತಿಯಾಗಿದೆ. ಭೈರಪ್ಪನವರ ಕಾದಂಬರಿಗಳು ಇಂಗ್ಲಿಷ್ ಮತ್ತು ಭಾರತದ ವಿವಿಧ ಸಾಂವಿಧಾನಿಕ ಭಾಷೆಗಳಿಗೆ ಅನುವಾದಗೊಂಡಿರುವುದೇ ಅಲ್ಲದೆ ಲಿಪಿಯಿಲ್ಲದ ಕೆಲವು ಉಪಭಾಷೆಗಳಿಗೂ ಅನುವಾದಗೊಂಡಿವೆ ಎನ್ನುತ್ತದೆ ಈ ಕೃತಿ.