ಹಳೆಗನ್ನಡ ಕಾವ್ಯ, ಹೊಸ ತಲೆಮಾರಿನ ಕಾವ್ಯ ಮತ್ತು ಜನಪದ ಮಹಾಕಾವ್ಯಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿಕೊಂಡಿರುವ ಸುರೇಶ್ ಅವರ ಐದನೇ ಕೃತಿ ಇದಾಗಿದ್ದು, ಅವೈದಿಕ ಸಾಹಿತ್ಯಗಳ ಕುರಿತಂತೆ ಅವರು ಹೊಂದಿರುವ ನೋಟ ಕ್ರಮಗಳನ್ನು ಇಲ್ಲಿರುವ ಹೆಚ್ಚಿನ ಬರಹಗಳಲ್ಲಿ ಕಾಣಬಹುದು. ಕನಕದಾಸರು, ಲಿಂಗಧ್ಯಾನಿ ಸಿದ್ದರಾಮೇಶ್ವರ, ಕನಕ-ಶರೀರ ಮೂಲಕ ಭಕ್ತಿ ಆಧ್ಯಾತ್ಮ, ಸಂಗಂ ಕಾವ್ಯ, ವಚನಗಳ ವಿಶ್ಲೇಷಣೆ, ಹೀಗೆ ವರ್ತಮಾನದ ವೈದಿಕ ರಾಜಕೀಯಗಳ ಸಿಕ್ಕುಗಳನ್ನು ಬಿಡಿಸುವುದಕ್ಕಾಗಿ ಅವರು ಅವೈದಿಕ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಾರೆ. ಇಲ್ಲಿ ಅಂತಹ ಒಂಬತ್ತು ವಿಮರ್ಶಾ ಬರಹಗಳಿವೆ. 'ಕಾಡಿನ ಹುಡುಗ ಸುಬ್ರಹ್ಮಣ್ಯನ ಸುತ್ತ' ಲೇಖನ ಸುಬ್ರಹ್ಮಣ್ಯ ಕ್ಷೇತ್ರದ ಹಿನ್ನೆಲೆಯನ್ನಿಟ್ಟುಕೊಂಡು ನಡೆಸಿದ ಸಂಸ್ಕೃತಿ ಚಿಂತನೆಯಾಗಿದೆ. ದ್ರಾವಿಡ ಸಂಸ್ಕೃತಿಯನ್ನು ಇಲ್ಲಿ ವೈದಿಕ ಸಂಸ್ಕೃತಿ ನುಂಗಿ ಹಾಕಿ ಹೇಗೆ ಮಲೆಕುಡಿಯರಂತಹ ಸಮುದಾಯವನ್ನು ಶೋಷಣೆಗಿಳಿಸಿದ ಬಗೆಯನ್ನು ಇಲ್ಲಿ ವಿವರಿಸಲಾಗಿದೆ. ಕೇಶವ ಮಳಗಿಯವರು ಈ ಕೃತಿಗೆ ಮುನ್ನುಡಿ ಬರೆಯುತ್ತಾ ಇದೊಂದು ಕೇವಲ ಸಾಹಿತ್ಯ ವಿಮರ್ಶಾ ಕೃತಿಯಲ್ಲ. ಬದಲಿಗೆ ಭಾರತೀಯ ಸಮಾಜ, ಸಾಹಿತ್ಯ ಮತ್ತು ದರ್ಶನಗಳಲ್ಲಿ ಅವರು ಕಾಣಲು ಪ್ರಯತ್ನಿಸುತ್ತಿರುವ ಸಂಗತಿಗಳ ವಿಶಾಲ ನೆಲೆಯ ಪ್ರಸ್ತಾವನೆಗಳಾಗಿವೆ'' ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಸುರೇಶ್ ನಾಗಲಮಡಿಕೆ ಅವರು ಹುಟ್ಟಿದ್ದು ಆಂಧ್ರದ ಗಡಿಭಾಗ ಪಾವಗಡದ ನಾಗಲಮಡಿಕೆಯಲ್ಲಿ. ಸದ್ಯ ಜನಪದ ಮಹಾಕಾವ್ಯಗಳ ಅಧ್ಯಯನದಲ್ಲಿ ತೊಡಗಿಸಿಕೊಡಿರುವ ಇವರು ಮುತ್ತು ಬಂದಿದೆ ಕೇರಿಗೆ, ತಕ್ಕ ಮಣ್ಣಿನ ತೇವಕ್ಕಾಗಿ, ಕನಕ ಸಾಹಿತ್ಯ ಮತ್ತು ಲೋಕದೃಷ್ಟಿ, ಕಾಣ್ಕೆ ಕಣ್ಕಟ್ಟು, ಬಯಲಾಗುವ ಪರಿ, ಉಳಿದದ್ದು ಆಕಾಶ, ಹಲವು ಬಣ್ಣದ ಹಗ್ಗ, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ವಿಮರ್ಶೆಗಳಲ್ಲಿಯೇ ಹೆಚ್ಚಿನ ಆಸಕ್ತಿಯನ್ನು ಹೊಂದಿದ ಸುರೇಶ್ ಅವರ ಹೇಚ್ಚಿನ ಪುಸ್ತಕಗಳು ಗದ್ಯಕ್ಕೇ ಸೇರಿವೆ. ...
READ MORE