ಅರಿವು ಮೀರಿದ ಘನ ಕೃತಿಯಲ್ಲಿ ಅಲಕ್ಷಿತ ತಳಸಮುದಾಯದ ಕ್ರಾಂತಿಕಾರಿ ವಚನಕಾರ್ತಿಯರನ್ನು ಗುರುತಿಸಿ ವೈಚಾರಿಕವಾಗಿ ವಿಶ್ಲೇಷಿಸಲಾಗಿದೆ. ಒಟ್ಟು 16 ಜನ ಶರಣೆಯರ ವಚನಗಳನ್ನು ಕ್ರೋಡಿಕರಿಸಿ ಅವರ ವಚನಗಳ ಸರಳತೆ ಮತ್ತು ಅದರ ಒಳಧ್ವನಿಯಲ್ಲಿರುವ ಅಗಾಧತೆಯನ್ನು ಕಟ್ಟಿಕೊಡಲು ಯಶಸ್ವಿಯಾಗಿದ್ದಾರೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯತ್ನ, ಹಾಗೆಯೇ ವಿಶಿಷ್ಟ ಪ್ರಯತ್ನ. ಬೆನ್ನುಡಿಯಲ್ಲಿ ಹೇಳುವಂತೆ, ವಚನಗಳ ಮೂಲಕ ಲೇಖಕರು, ಶರಣ ಶರಣೆಯರ ಬದುಕಿನ ಹಂದರವನ್ನು ಚಿತ್ರಿಸುತ್ತಾ, ಸರ್ವೋದಯ ಸಮಾನತೆ ಭವಿಷ್ಯಕ್ಕಾಗಿ ನಮ್ಮೊಳಗೆ ರೂಢಿಸಿಕೊಳ್ಳಬೇಕಾದ ಜೀವದಯೆಯನ್ನು ಎತ್ತಿ ಹಿಡಿಯುತ್ತಾರೆ. ಹೇಗೆ ವೈದಿಕ ನೆಲೆಗಟ್ಟನ್ನೇ ಈ ವಚನಗಳು ಪ್ರಶ್ನಿಸುತ್ತವೆ ಎನ್ನುವುದನ್ನು ಅವರು ವಿವರಿಸುತ್ತಾರೆ. ಮೂಲೆಗುಂಪಾಗಿದ್ದ ಪ್ರತಿ ಸಂಸ್ಕೃತಿಯನ್ನು ಈ ಮೂಲಕ ಬಯಲಿಗೆಳೆದಿದ್ದಾರೆ. ಅಧ್ಯಯನಕಾರರಾಗಿ ಇನ್ನಷ್ಟು ವಿಶಾಲ ದಾರಿಯೊಂದನ್ನು ತೆರೆದುಕೊಟ್ಟಿದ್ದಾರೆ. ಸಾಧಾರಣವಾಗಿ ಈಗಾಗಲೇ ಜನಪ್ರಿಯವಾಗಿರುವ ಹೆಸರುಗಳನ್ನು ಪಕ್ಕಕ್ಕಿಟ್ಟು, ಪ್ರಜ್ಞಾಪೂರ್ವಕವಾಗಿ ಬದಿಗೆ ಸರಿದಿರುವ ಕೆಲವು ವಚನಕಾರ್ತಿಯರನ್ನು ಮುನ್ನೆಲೆಗೆ ತಂದಿದ್ದಾರೆ. ಇದು ಅಲಕ್ಷಿತ ಸಮಾಜದ ಅನುಭಾವಿ ವಚನಕಾರ್ತಿಯರ ಪರಿಚಯ ಎನ್ನಬಹುದು.