ಹಿರಿಯ ಸಂಸ್ಕೃತಿ ಚಿಂತಕ ಕೆ.ಜಿ. ನಾಗರಾಜಪ್ಪ ಅವರ ಚಿಂತನಶೀಲ ಬರಹಗಳನ್ನು ಒಳಗೊಂಡಿರುವ ಕೃತಿ ಅನುಶ್ರೇಣಿಪ ಯಜಮಾನಿಕೆ. ಈ ಪುಸ್ತಕದಲ್ಲಿ ನಾಲ್ಕು ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯ ‘ಭಕ್ತಿ- ಕಾರ್ಯ ಸ್ವರೂಪ’, ಎರಡನೇ ಅಧ್ಯಾಯ ‘ಭಕ್ತಿ-ಹಿಂಸಾ ವಿಧಾನ’, ಮೂರನೇ ಅಧ್ಯಾಯ ‘ತಮಿಳು ಶೈವ ಪರಂಪರೆ ಮತ್ತು ರಗಳೆಗಳು’ ನಾಲ್ಕನೇ ಅಧ್ಯಾಯದಲ್ಲಿ ಸಹಜಪಂಥದ ಬಗ್ಗೆ ಚರ್ಚಿಸಲಾಗಿದೆ. ಮಧ್ಯಕಾಲೀನ ಭಕ್ತಿ ಪಂಥದ ಬಗ್ಗೆ ಆಸಕ್ತರಾಗಿರುವವರು ಗಮನಿಸಬೇಕಾದ ಕೃತಿಯಿದು. ಅಪರೂಪದ ಒಳನೋಟಗಳನ್ನು ಒಳಗೊಂಡಿದೆ. ಉದಾಹರಣೆಗೆ ಕನ್ನಡ ಸಂಸ್ಕೃತಿಯು ಪುನರುಜ್ಜೀವನಗೊಳ್ಳುವ ಕುರಿತು ಲೇಖಕರು ಈ ರೀತಿ ಬರೆದಿದ್ದಾರೆ.-
‘ಕನ್ನಡ ಸಂಸ್ಕೃತಿಯನ್ನು ಸಂಸ್ಕೃತದ ಕಸಿಯಿಂದ, ಬಲ-ಎಡಪಂಥೀಯ ಚಿಂತನೆಗಳ ಕಸಿಯಿಂದ, ವಿದೇಶಿ ಸಂಸ್ಕೃತಿಗಳ ಕಸಿಯಿಂದಲೂ ಕನ್ನಡ ಸಂಸ್ಕೃತಿಯ ನಾಡಿಬಡಿತ ದಿನೇ ದಿನೇ ಮಂದವಾಗುತ್ತಿರುವುದು ಶೋಚನೀಯ. ಕನ್ನಡ ಚಳವಳಿಯಿಂದಲೂ ಕನ್ನಡ ಸಂಸ್ಕೃತಿ ಪುಷ್ಟಿಗೊಳ್ಳಲಿಲ್ಲ. ಕನ್ನಡ ಸಂಸ್ಕೃತಿಯ ಪುನರುಜ್ಜೀವನಗೊಳ್ಳುವ ಮೂಲ ಜಲದ ಸೆಲೆ, ಸಿದ್ಧರ, ಸಂತರ, ತತ್ವಪದಗಳ ವಿವಿಧ ಸಂಪ್ರದಾಯಗಳು ಎಂಬ ಸರಳ ಸತ್ಯ ಕನ್ನಡಿಗರಿಗೆ ಅರಿವಾಗದಿರುವುದು ಒಂದು ವಿಪರ್ಯಾಸ.’
ಜೀವಪರ ನಿಲುವು- ಜನಪರ ಚಿಂತನ ಕ್ರಮವನ್ನು ಹೊಂದಿರುವ ಬರವಣಿಗೆ ಪುಸ್ತಕದುದ್ದಕ್ಕೂ ನೋಡಲು ಸಿಗುತ್ತದೆ.
ಕನ್ನಡದ ನಾಡಿಬಡಿತವನ್ನು ಕೇಳಿಸುವ ಕೃತಿ-ಪ್ರಜಾವಾಣಿ
’ಭಕ್ತಿ'ಯ ನೆಲೆಯಿಂದ ಸಂಸ್ಕೃತಿ ಶೋಧನೆ
ಕನ್ನಡದಲ್ಲಿ ಸಂಸ್ಕೃತಿ ನೆಲೆಗಟ್ಟನ್ನು ಆಧರಿಸಿದ ಅನೇಕ ಅಧ್ಯಯನ ವಿಧಾನ ಗಳು ಹಿಂದಿನಿಂದಲೂ ಬಳಕೆಯಲ್ಲಿವೆ. ಶಂಬಾ ಅವರ ಸಂಸ್ಕೃತಿ ಅಧ್ಯಯನವು ಮಾನವಶಾಸ್ತ್ರೀಯವಾದ ನೆಲೆಗಟ್ಟಿನಲ್ಲಿ ವೈದಿಕ ದರ್ಶನಗಳನ್ನೂ ಜಾನಪದೀಯ ದರ್ಶನಗಳನ್ನೂ ಶೋಧಿಸುವ ರೀತಿ ಕನ್ನಡದ ಒಂದು ಸ೦ಸ್ಕೃತಿ ಓದಿನ ಧಾರೆಯನ್ನು ಪರಿಚಯಿಸಿತು.ದೇವುಡು, ಕೃಷ್ಣಶರ್ಮ, ಡಿವಿಜಿ, ಮೊದಲಾದವರು ಅನುಸರಿಸಿದ ಸಂಸ್ಕೃತಿ ಅನುಸಂಧಾನದ ಮಾದರಿಗಳು ವಸಾಹತುಶಾಹಿ ನೋಟಕ್ರಮಕ್ಕೆ ಎದುರಾಗಿ ’ಭಾರತೀಯಸಂಸ್ಕೃತಿ' ಎನ್ನುವ ಕಲ್ಪನೆಯನ್ನು ಅಧಿಕೃತಗೊಳಿಸಲು ಯತ್ನಿಸಿದವು. ಇನ್ನೊಂದೆಡೆ, ಸಾಮಾಜಿಕ ನ್ಯಾಯದ ಆಧಾರದ ಮೇಲೆ ರೂಪುಗೊಂಡ ಸಾಮಾಜಿಕ ನಿಶ್ಚಿತತೆಗಳನ್ನು ಆಧರಿಸಿದ ಶ್ರೇಣೀಕರಣದ ಪದ್ಧತಿಯನ್ನು ವಿಮರ್ಶಿಸುವ ನೋಟಕ್ರಮವೂ ಪ್ರಚಲಿತವಾಗಿದೆ. ಕನ್ನಡದಲ್ಲಿ ಸಾಹಿತ್ಯ ವಿಮರ್ಶೆಯಲ್ಲಿ ಈ ಸಂಸ್ಕೃತಿ ಅಧ್ಯಯನಗಳು ಎಷ್ಟರಮಟ್ಟಿಗೆ ಆಕ್ರಮಿಸಿವೆ ಎಂದರೆ ಶ್ರೇಣೀಕರಣದ, ಸಾಮಾಜಿಕ ನ್ಯಾಯದ ಭಾಷೆಯಿಲ್ಲದೆ ಈ ಹೊತ್ತು ಸಾಹಿತ್ಯ ವಿಮರ್ಶೆಯನ್ನು ಕಲ್ಪಿಸಿಕೊಳ್ಳುವುದೇ ಕಷ್ಟ ಎನ್ನುವಂತೆ. ಈ ಎರಡು ಕ್ರಮಗಳ ಅಪಾಯಗಳೂ ಸಾಮರ್ಥ್ಯಗಳೂ ಸಂಸ್ಕೃತಿ ವಿಮರ್ಶೆಯ ಇತಿಮಿತಿಗಳೇ ಆಗಿವೆ. ಸಂಸ್ಕೃತಿ ಶೋಧಕರಾಗಿರುವ ಕೆ.ಜಿ.ನಾಗರಾಜಪ್ಪ ಅವರು ರೂಢಿಸಿಕೊಳ್ಳುವ ಸಂಸ್ಕೃತಿ ವಿಮರ್ಶೆಯೂ ಇದೇ ಬಗೆಯ ಮೇಲೆ ಲಕ್ಷಣಗಳನ್ನು ಹೊಂದಿದ್ದರೂ ಅದು ತಡಕುವ ಆಳ, ಶೋಧಿಸಕೊಳ್ಳುವ ಸಂಗತಿಗಳು ವಿಷಯ ವಿಸ್ತಾರದ ಕಾರಣದಿಂದ, ವಿಫುಲತೆಯ ಕಾರಣದಿಂದ ವಿಭಿನ್ನವಾದ ಓದು ಎನ್ನಿಸಿಕೊಳ್ಳುತ್ತದೆ.
ಅವೈದಿಕ ನೆಲೆಯಲ್ಲಿ ನಿಂತು ಭಾರತೀಯ ಸಂಸ್ಕೃತಿಯನ್ನು ಒಂದು ಶೋಷಕ-ಶೋಷಿತ ಸಂಸ್ಕೃತಿಯನ್ನಾಗಿ ಓದಿದ ಅಂಬೇಡ್ಕರ್ ಅವರ ನೋಟಕ್ರಮವು ಸಾಮಾಜಿಕ ನ್ಯಾಯವನ್ನು ಚಾರಿತ್ರಿಕವಾಗಿ ಶೋಧಿಸಿಕೊಳ್ಳುವ ರೀತಿಯನ್ನು ತೋರಿಸಿಕೊಟ್ಟಿದೆ. ನಾಗರಾಜಪ್ಪ ಅವರ ಚಿಂತನಾ ಕ್ರಮವೂ ಒಂದು ರೀತಿ ಇದೇ ಬಗೆಯದು. ನಾಗರಾಜಪ್ಪ ಅವರು ಕೆಳವರ್ಗಗಳ ಎಪಿಸ್ಟೀಮಾಲಾಜಿಯ ಬಗೆಗೆ ಅಧಿಕೃತವಾಗಿ ಮಾತನಾಡುವಾಗ ಸಾಮಾಜಿಕ ನ್ಯಾಯದ ದೀಪ ಹೊತ್ತಿಕೊಳ್ಳುತ್ತದೆ. ಈ ಬಗೆಯ ತಕ್ಕಡಿ ತೂಗುವಿಕೆ ಒಂದು ಅರ್ಥದಲ್ಲಿ ಪರ್ಯಾಯ ದೃಷ್ಟಿಯನ್ನು ಸೃಷ್ಟಿಸುತ್ತಿದ್ದರೆ ಇನ್ನೊಂದೆಡೆ ದ್ವಿತ್ವದ ಮಿತಿಯನ್ನು ಹೇಳುತ್ತಿರುತ್ತದೆ ಎನಿಸುತ್ತದೆ.
ಪ್ರಸ್ತುತ ನಾಗರಾಜಪ್ಪ ಅವರ 'ಅನುಶ್ರೇಣಿ-ಯಜಮಾನಿಕೆ' ಕೃತಿಯು ಭಕ್ತಿಯನ್ನು ಕೇಂದ್ರ ವಿಷಯವನ್ನಾಗಿರಿಸಿಕೊಂಡು ಸಂಸ್ಕೃತಿಯ ಪ್ರಶ್ನೆಗಳನ್ನು ಎತ್ತುತ್ತದೆ. ನಾಗರಾಜಪ ಅವರು ಒರೆಹಚ್ಚಲೆತ್ನಿಸುವ ವೈದಿಕ ಮತ್ತು ಅವೈದಿಕ (ಶೂದ್ರ) ಪರಂಪರೆಗಳ ನಡುವೆ ಇರುವ ಕಂದರಗಳು ಅಗಾಧವಾದುದು. ಹಾಗೆಂದ ಮಾತ್ರಕ್ಕೆ ಇಲ್ಲಿ ಭಿನ್ನತೆಗಳ ಕಂದರಗಳು ಮಾತ್ರವೇ ಇದೆ ಎನ್ನಲಾಗದು. ವೈದಿಕ ಮತ ಅವೈದಿಕ ಸಂಸ್ಕತಿಗಳು ಭಿನ್ನಧಾರೆಗಳಾಗಿದ್ದರೂ ಕೊಡುಕೊಳುವಿಕೆಯ ಕೂಡುಸ್ಥಳಗಳ ಯಾವುದು ನೀಡಿತು, ಯಾವುದು ಪಡೆದುಕೊಂಡಿತು, ಎನ್ನುವುದನ್ನು ಊಹಿಸುವುದು ಕಷ್ಟ, ಅದನ್ನು ವಿಶ್ಲೇಷಿಸುವುದಕ್ಕೆ ಅಪಾರವಾದ ಓದು, ವಿದ್ವತ್ತು ಅಪೇಕ್ಷಣೀಯವಾಗಿದೆ. ಅಂತಹ ಓದು ನಾಗರಾಜಪ್ಪ ಅವರಿಗೆ ಇದೆ ಎನ್ನುವುದನ್ನು ಈ ಕೃತಿ ತೋರಿಸುತ್ತದೆ.
ಸದ್ಯ ಈ ಕೃತಿಯಲ್ಲಿ ಇರುವ ಕ್ರಮವು ಒಂದು ರೂಢಿಗತ ಕ್ರಮದಲ್ಲಿ ಇರುವ ಶ್ರೇಣಿಯನ್ನು ಮುರಿದು ಕಟ್ಟಿಕೊಳ್ಳುವುದರ ಮೂಲಕ ನಿರಚನೆ ಮಾಡಿಕೊಳ್ಳುತ್ತದೆ. ಅದಕ್ಕಾಗಿ ಭಕ್ತಿಯ ಸಂಗತಿಯನ್ನೇ ತನ್ನ ನಿರಚನೆಯ ತತ್ವಕ್ಕೆ ಕೇಂದ್ರವಾಗಿರಿಸಿಕೊಳ್ಳುತ್ತದೆ. ಭಕ್ತಿ ಎನ್ನುವುದು ಮೇಲ್ನೋಟಕ್ಕೆ ಕಾಣುವಷ್ಟು ಸರಳ ಸಂಗತಿಯಲ್ಲ. ಅದರೊಳಗೆ ಅನೇಕ ವೈದಿಕ ಮತ್ತು ಅವೈದಿಕ ಧಾರೆಗಳು ಮುಖಾಮುಖಿಯಾಗಿವೆ. ಇಲ್ಲಿ ಯಜಮಾನಿಕೆಯ ಪ್ರಶ್ನೆ ಕೂಡ ಒಂದು ಅಧಿಕೃತತೆಯನ್ನು ಒದಗಿಸುವುದರಿಂದ ಭಕ್ತಿಯಂತಹ ವಿಷಯದಲ್ಲಿಯೂ ಶ್ರೇಣೀಕರಣವು ಇಣುಕುತ್ತದೆ. ಭಕ್ತಿ, ಅನುಭಾವ, ತಂತ್ರ ಮುಂತಾದ ಅನುಸರಣೆಗಳಲ್ಲಿ ಯಾರು ಭಾಗವಹಿಸುತ್ತಾರೆ? ಅವರ ಸ್ಥಾನಗಳೇನು? ಅವರ ಉದ್ದೇಶಗಳೇನು? ಎಂಬುದನ್ನು ಅನೇಕ ರೀತಿಗಳಲ್ಲಿ ಶೋಧಿಸಿಕೊಳ್ಳಬೇಕಾಗುತ್ತದೆ. ನಾಗರಾಜಪ್ಪ ಅವರು ಇದಕ್ಕಾಗಿ ಭೌತವಾದಿ-ಸಾಂಸ್ಕತಿಕ ಮಾದರಿಯನ್ನು ಅನುಸರಿಸುವಂತೆ ಕಾಣುತ್ತದೆ. ಅವರು ಭಕ್ತಿಯೆನ್ನುವುದನ್ನು 'ಪರ'ದ ವೈಭವೀಕರಣವನ್ನಾಗಿ ಭಾವಿಸದೆ ಇಹದ ಉತ್ಪನ್ನವಾಗಿ ನೋಡುತ್ತಾರೆ. ಇದರಿಂದ ಸಿಗುವ ಸಾಮಾಜಿಕ ಆಯಾಮವು ಭಕ್ತಿಯೊಳಗೆ ಇರಬಹುದಾದ ಶ್ರೇಣೀಕರಣದ ವಿನ್ಯಾಸವನ್ನು ಕೆದಕುತ್ತದೆ. ಆದರೆ ನಾಗರಾಜಪ್ಪ ಅವರು ತಮ್ಮ ಸಂಶೋಧನಾ ಸಲಕರಣೆಗಳ ಬಗೆಗೆ ಎಚ್ಚರದಿಂದ ಇದ್ದಾರೆ. ಅವರಿಗೆ ಪಾಶ್ಚಾತ್ಯ ಮತ್ತು ಪೌರ್ವಾತ್ಯ ತಂತ್ರಗಳ ಮಿತಿಗಳು ತಿಳಿದಿದ್ದು ತಮ್ಮದೇ ಆದ ದಾರಿಯನ್ನು ಅವರು ಕಂಡುಕೊಳ್ಳುವುದಕ್ಕೆ ಹೊರಡುತ್ತಾರೆ.
ಈ ಕೃತಿಯಲ್ಲಿ ಭಕ್ತಿಯ ಮೀಮಾಂಸೆಯನ್ನು ನಾಲ್ಕು ಭಾಗಗಳಲ್ಲಿ ಮಾಡಲಾಗಿದೆ. ಮೊದಲನೆಯ ಅಧ್ಯಾಯದಲ್ಲಿ ಭಕ್ತಿಯ ಕಾರ್ಯಸ್ವರೂಪವನ್ನು ಕುರಿತು ವಿಶ್ಲೇಷಣೆ ಇದೆ. ಸಾಮಾನ್ಯ ತಿಳಿವಳಿಕೆಯ ಪ್ರಕಾರ ಭಕ್ತಿಯೆಂಬ ಕ್ರಿಯೆ ಮೂಲತ: ಸಾಮಾನ್ಯರಿಗೆ ಸಂಬಂಧ ಪಟ್ಟಿರುವಂತದ್ದು. ಈ ಸಂಪ್ರದಾಯವು ಗುರು-ಶಿಷ್ಯ, ಭಗವಂತ-ಭಕ್ತ ಎನ್ನುವ ದ್ವಿತ್ವದಲ್ಲಿ ನಿಜವಾಗುವಂತಹ ಅನುಭವವನ್ನು ರೂಢಿಸಿಕೊಂಡಿದೆ. ಈ ದ್ವಿತ್ವದಲ್ಲಿ ಇರುವ ಶ್ರೇಣೀಕರಣವು ಒಂದು ಹಿರಿದು, ಇನ್ನೊಂದು ಕಿರಿದು ಎನ್ನುವ ಒಪ್ಪಿತ ಸಂಗತಿಯೊಂದಿಗೇ ಆರಂಭವಾಗುತ್ತದೆ. ಆದರೆ ಭಕ್ತಿ ಪಂಥದಲ್ಲಿ ಈ ಶ್ರೇಣೀಕರಣವು ಸ್ಥಿರವಾದುದಲ್ಲ. ಆದರೆ ಭಕ್ತಿ ಪಂಥಗಳು ಸಾಂಸ್ಥಿಕರಣಗೊಳ್ಳುತ್ತಾ ಬಂದಂತೆ ವೈದಿಕ ಮತ್ತು ಅವೈದಿಕ ಪರ೦ಪರೆಗಳು ಸಂಕೀರ್ಣವಾಗಿ ಬೆರೆತುಕೊಂಡು ಅಲ್ಲಿ ಒಂದು ಮರುಶ್ರೇಣೀಕರಣವೂ ಉಂಟಾಗಿದೆ. ಶೂದ್ರೀಕರಣಗೊಳ್ಳುವ ಮೂಲಕ ವೈದಿಕ ಪರಂಪರೆಯು ಪಡೆದುಕೊಂಡಿದ್ದೇನು? ಎನ್ನುವ ಅಂಶವನ್ನು ಅವರು ಒತ್ತುಕೊಟ್ಟು ನೋಡಿದ್ದಾರೆ. ತಂತ್ರ ಮುಂತಾದ ಪರ್ಯಾಯ ಧಾರೆಗಳನ್ನು ಅನುಸರಿಸಿ, ಆನಂತರ ಅವುಗಳನ್ನು ಬ್ರಾಹ್ಮಣೀಕರಣಗೊಳಿಸಿ ಅವುಗಳ ಸತ್ವವನ್ನು ಬದಲಾಯಿಸಿದರು ಎನ್ನುವುದು. ಆದುದರಿಂದ ಭಕ್ತಿಯ ಮಾರ್ಗಗಳು ಚಾರಿತ್ರಿಕ ಗತಿಯಲ್ಲಿ ಸಾಗಿ ಬರುತ್ತಾ ವರ್ಣಾಶ್ರಮ ಧರ್ಮವನ್ನು ಅಪ್ಪಿಕೊಳ್ಳುವಂತಾಯಿತು. ಈ ಸಂಗತಿಗಳನ್ನು ನಾಗರಾಜಪ್ಪನವರು ಅಪಾರವಾದ ತಾತ್ವಿಕ ಮತ್ತು ಸಾಹಿತ್ಯಕ ಪಠ್ಯಗಳ ಉಲ್ಲೇಖಗಳೊಂದಿಗೆ ಪರಿಶೀಲಿಸುತ್ತಾ ಹೋಗುತ್ತಾರೆ. ಇನ್ನೊಂದು ಸೂಕ್ಷ್ಮವಾದ ಸ್ತರದಲ್ಲಿ ಭಕ್ತಿ ಎನ್ನುವುದು ಭಾರತೀಯ ಪರಂಪರೆಯಲ್ಲಿ ಇರುವ ಶೈವ ಮತ್ತು ವೈಷ್ಣವ ಪಂಥಗಳಲ್ಲಿ ಯಾವ ಸ್ವರೂಪ ತಳೆಯುತ್ತದೆ ಎನ್ನುವುದನ್ನು ಕೃತಿ ಶೋಧಿಸುತ್ತದೆ. ಶೈವ ಧಾರೆಗಳಲ್ಲಿ ಇರುವ ಮುಕ್ತತೆಯು ವೈಷ್ಣವ ಪಂಥಗಳಲ್ಲಿ ಸಂಕುಚಿತವಾಗುತ್ತದೆ ಎನ್ನುವುದನ್ನು ಅವರು ತಮಿಳಿನ ಶೈವ ಪಂಥಗಳ ಸ್ವರೂಪವನ್ನು ವಿವರಿಸುವ ಮೂಲಕ ನಿರೂಪಿಸುತ್ತಾರೆ. ಆದುದರಿಂದ ವಚನಗಳು ಸಾಧನೆಯ ಮಾರ್ಗವನ್ನು ಸೂಚಿಸಿದರೆ ಕೀರ್ತನೆಗಳು ಕಲಾತ್ಮಕ (ಪು೫೧) ಎನ್ನುವ ಅಭಿಪ್ರಾಯವನ್ನು ಇಲ್ಲಿ ವ್ಯಕ್ತ ಪಡಿಸಲಾಗಿದೆ. ಭಕ್ತಿಯ ಆಚರಣೆಗಳಲ್ಲಿ ಇರುವ ಹಿಂಸೆಯನ್ನು ಕೃತಿ ಅವಲೋಕಿಸುತ್ತದೆ. ಅಲ್ಲದೆ ಭಾರತೀಯ ಸಾಧನಾ ಪರಂಪರೆಗಳಲ್ಲಿ ಇರುವ ಹಿಂಸೆಯ ಆಚರಣೆಗಳನ್ನು ಅವಲೋಕಿಸಿದಾಗ ಅವು ಬ್ರಾಹ್ಮಣ ಮತ್ತು ಶೂದ್ರ ಪರಂಪರೆಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುವುದನ್ನು ಗಮನಿಸಲಾಗಿದೆ.
ಈ ಕೃತಿಯಲ್ಲಿ ಮುಖ್ಯವಾಗಿ ಅವರು ಎತ್ತುವ ಪ್ರಶ್ನೆಗಳೆಂದರೆ ಶೂದ್ರ ಪರಂಪರೆಗಳು ಕಟ್ಟುವ ಪರ್ಯಾಯ ಜ್ಞಾನಗಳು ಯಾಕಾಗಿ ಭಾರತೀಯ ಪರಂಪರೆಯಲ್ಲಿ ಮರೆಯಲ್ಲಿಯೇ ಉಳಿದುಕೊಂಡವು? ಎನ್ನುವುದು ಹಾಗು ಶೂದ್ರ ಸಮುದಾಯಗಳು ಕಟ್ಟಿಕೊಂಡ ಜ್ಞಾನಗಳು ರೂಪಾಂತರ ಹೊಂದಿದ್ದು ಯಜಮಾನಿಕೆಯ ಸಂಚಿನ ಭಾಗವಾಗಿಯೇ? ಎನ್ನುವುದು. ಈ ಎರಡೂ ಪ್ರಶ್ನೆಗಳು ಸಾಮಯಿಕವೇ ಆದರೂ ಸಂಸ್ಕೃತಿಯ ಇರ್ಬಾಯ ಖಡ್ಗಗಳು ಎಲ್ಲರನ್ನೂ ತಿವಿಯುತ್ತವೆ ಎನ್ನುವುದನ್ನು ಸಹ ಈ ಸಂದರ್ಭದಲ್ಲಿ ವಿಷಾದದಿಂದಲೇ ಗಮನಿಸಬೇಕಿದೆ.
-ಆರ್. ತಾರಿಣಿ ಶುಭದಾಯಿನಿ
ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕದಿನಪತ್ರಿಕೆ (ಜನವರಿ 2019)
©2024 Book Brahma Private Limited.