1956ರಲ್ಲಿ ಬೆಳಗಾವಿಯಲ್ಲಿ ಜನಿಸಿದ ಬಸವರಾಜ ಕಲ್ಗುಡಿ ಅವರು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಕಾಲೇಜು ವ್ಯಾಸಂಗವು ಬೆಂಗಳೂರಿನಲ್ಲಿ ನಡೆಸಿದರು. ಎಂ.ಎ. (1975) ಪದವೀಧರರು. ‘ಅನುಭಾವ ಮತ್ತು ಸಾಂಸ್ಕೃತಿಕ ಸಮಸ್ಯೆಗಳು' ಸಂಶೋಧನಾ ಪ್ರಬಂಧಕ್ಕೆ (1983) ಪಿಎಚ್.ಡಿ. ಪದವಿ. ಕರ್ನಾಟಕದಲ್ಲಿಯ ಮಾಸ್ತಿಕಲ್ಲು ಕುರಿತಾಗಿ ಕ್ಷೇತ್ರಕಾರ್ಯ ಮಾಡಿ ಮಂಡಿಸಿದ ಮತ್ತೊಂದು ಸಂಶೋಧನೆ `ಮಹಾಸತಿ ಆಚರಣೆ'. ಅವರ ಅಧ್ಯಯನ ಶಾಸನವನ್ನು ಕುರಿತಾಗಿದ್ದರೂ, ಶಾಸನದ ಪಠ್ಯವನ್ನು ಕನ್ನಡ ಸಂಸ್ಕೃತಿಯ ಶೋಧನೆಗೆ ಪ್ರಮುಖ ಆಕರವಾಗಿ ಬಳಸಿದ್ದಾರೆ.
ಸಂಸ್ಕೃತಿ ಕುರಿತಂತೆ ವ್ಯಾಖ್ಯಾನಿಸುವಲ್ಲಿ ಕಲ್ಗುಡಿಯವರು ಸಂಸ್ಕೃತಿಯಲ್ಲಿಯ ಚಲನೆಯ ಪಲ್ಲಟವನ್ನು ಸಮಗ್ರವಾಗಿ ವಿವಿಧ ನೆಲೆಗಳಿಂದ ಶೋಧಿಸುತ್ತಾರೆ. ಕಲ್ಗುಡಿಯವರು ವಚನ ಸಾಹಿತ್ಯ ಕುರಿತ ಸಂಶೋಧನಾತ್ಮಕ ಅಧ್ಯಯನದಲ್ಲಿ ವಿವಿಧ ಜ್ಞಾನಶಿಸ್ತುಗಳನ್ನು ಒಳಗೊಂಡಿದೆ. ಅವರು ವರ್ತಮಾನದ ಹಿನ್ನೆಲೆಯಿಂದ ವಚನ ಸಂಸ್ಕೃತಿಯನ್ನು ವ್ಯಾಖ್ಯಾನಿಸಿದ್ದು, ಕನ್ನಡ ವಿಮರ್ಶೆಯ ಲೋಕದಲ್ಲಿಯೇ ವಿಶಿಷ್ಟ ಎಂದು ಪರಿಗಣಿಸಲಾಗುತ್ತದೆ.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ತಮ್ಮ ವೃತ್ತಿ ಆರಂಭಿಸಿ, 30 ವರ್ಷ ಕಾಲ ಬೋಧಕರಾಗಿದ್ದರು. ಉತ್ತಮ ಆಡಳಿತಗಾರರು ಹೌದು. ಬೆಂಗಳೂರು ವಿಶ್ವವಿದ್ಯಾಲಯ ಪ್ರಸಾರಾಂಗದ ನಿರ್ದೇಶಕರಾಗಿದ್ದರು. ಗಾಂಧಿ ಅಧ್ಯಯನ ಕೇಂದ್ರ, ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಸಂಶೋಧನಾ ಕೇಂದ್ರ ನಿರ್ದೇಶಕರಾಗಿದ್ದರು.
ಪ್ರಕಟಿತ ಕೃತಿಗಳು: ಮಹಾಸತಿ ಆಚರಣೆ - ಒಂದು ಅಧ್ಯಯನ, ಬೆಂಗಳೂರು ವಿಶ್ವವಿದ್ಯಾಲಯ, ಅನುಭಾವ: ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ, ಪುಸ್ತಕ ಪ್ರಾಧಿಕಾರ (ಮೂರನೆಯ ಮುದ್ರಣ), ನಕ್ಷೆ ನಕ್ಷತ್ರ : ವಿಮರ್ಶಾ ಸಂಕಲನ, ಕ್ರೈಸ್ಟ್ ಕಾಲೇಜು, ಬೆಂಗಳೂರು, ಬೇಂದ್ರೆಯವರ ಕಾವ್ಯ, ಕ್ರೈಸ್ಟ್ ಕಾಲೇಜು, ಬೆಂಗಳೂರು, ಕರ್ನಾಟಕ ಸಂಗಾತಿ (ಸಂ), ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬಹುರೂಪಿ(ಸಂ) ಬೆಂಗಳೂರು ವಿಶ್ವವಿದ್ಯಾಲಯ, ಆಧುನಿಕ ಕನ್ನಡ ಕಥಾ ಸಾಹಿತ್ಯ (ಸಂ) ಬೆಂಗಳೂರು ವಿಶ್ವವಿದ್ಯಾಲಯ, ವಿಚಾರ ಸಾಹಿತ್ಯ (ಸಂ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ಪ್ರಶಸ್ತಿ-ಗೌರವಗಳು: ಶಂಬಾ ಅಧ್ಯಯನ ಮಂಡಳಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ವಿಮರ್ಶೆ) (1998), ಜಿ.ಎಸ್.ಎಸ್.ವಿಶ್ವಸ್ಥ ಮಂಡಳಿ ಪ್ರಶಸ್ತಿ (1998), ಜೆ.ಎಸ್.ಎಸ್. (ಮೈಸೂರು) ಪೀಠ ಪ್ರಶಸ್ತಿ (1998), ಡಾ.ಎಚ್.ಎನ್.ಪ್ರಶಸ್ತಿ ( 2011), ಬುದ್ಧ ಪೂರ್ಣಿಮೆ ಗೌತಮ ಪ್ರಶಸ್ತಿಗಳು ಸಂದಿವೆ.