1999ರ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ನಕ್ಷೆ ನಕ್ಷತ್ರ. ಇದು ಡಾ. ಬಸವರಾಜ ಸಿ, ಕಲ್ಗುಡಿ ಅವರ ಲೇಖನಗಳ ಸಂಗ್ರಹ. ಕಲ್ಗುಡಿಯವರು ಕನ್ನಡ ಸಂಸ್ಕೃತಿ ಮೀಮಾಂಸೆಯಲ್ಲಿ ತೊಡಗಿರುವ ಪ್ರಮುಖ ಚಿಂತಕರು. ಪ್ರಸ್ತುತ ನಡೆಯುತ್ತಿರುವ ತಾತ್ವಿಕ ಚೌಕಟ್ಟುಗಳ ಮೇಲಾಟದಲ್ಲಿ ಉದ್ವಿಗ್ನರಾಗದೇ, ಸಂತೆ ಹೊತ್ತಿನ ಆಯ್ಕೆಗಳಿಗೆ ಮಾರುಹೋಗದೇ ತಮ್ಮ ನಂಬುಗೆ ಪರಿಕರಗಳನ್ನು ಬಳಸಿ. ಚಿಂತನಾಕ್ರಮಗಳನ್ನು ಬೆಳೆಸುತ್ತಿದ್ದಾರೆ. ತಾತ್ವಿಕ ಚೌಕಟ್ಟುಗಳು ನಮ್ಮ ಸಂಸ್ಕೃತಿಯ ಒಡಲಿನಿಂದ ಮೈದಳೆಯಬೇಕೆಂದು ತಿಳಿಯುವುದು ಒಂದು ಬಗೆಯಾದರೆ, ಸಂಸ್ಕೃತಿಯ ಅವಶ್ಯಕತೆಗಳಿಗೆ ಅನುಗುಣವಾಗಿ ಯಾವುದೇ ತಾತ್ವಿಕ ಚೌಕಟ್ಟಿನ ಪರಿಕರಗಳನ್ನು ಒಗ್ಗಿಸುವ, ಬರಿಸುವುದು ಇನ್ಮೊಂದು ವಿಧ. ಇವೆರಡೂ ಡಾ. ಕಲ್ಗುಡಿಯವರ ಬರಹಗಳಲ್ಲಿ ಕಾಣಸಿಗುತ್ತವೆ.
ಮುಖ್ಯವಾಗಿ ಸಂಸ್ಕೃತಿಯನ್ನು ಒಂದು ಸಿದ್ಧವಸ್ತುವೆಂದು ಪರಿಗಣಿಸದೇ, ಅದನ್ನೊಂದು ಪ್ರತಿಕ್ರಿಯೆಯೆಂದು ತಿಳಿಯುತ್ತಾರೆ. ಹಾಗಾಗಿ ಕೃತಿಗಳನ್ನೂ, ಅವುಗಳ ನಡುವಣ ಸಂಬಂಧವನ್ನು ಚಾರಿತ್ರಿಕ ಫಲಿತವೆಂದು ತಿಳಿಯುವುದಿಲ್ಲ. ಈ ಹೊತ್ತಿನೊಡನೆ ನಡೆಯುವ ಒಡನಾಟ ಅವರ ಶೋಧನೆಯ ಮುಖ್ಯ ಆಸಕ್ತಿಯಾಗಿದೆ. ಸಾಹಿತ್ಯ ಮತ್ತು ಸಂಸ್ಕೃತಿಗಳ ಸಂಬಂಧವನ್ನು ಏಕಮುಖಿಯವಾಗಿ ಹಾಗೂ ಬಹುಮುಖಿಯಾಗಿಯೂ ನೋಡುವ ಹಾದಿಯನ್ನು ಅವರು ತೊರೆದಿದ್ದಾರೆ. ಇವೆರಡರಲ್ಲಿ ಒಂದು ಇನ್ನೊಂದಕ್ಕೆ ನಕ್ಷೆಯಾಗುವ ಸಾಧ್ಯತೆಯನ್ನು ವಿವಿಧ ಸಂದರ್ಭಗಳಲ್ಲಿ ಕಂಡುಕೊಳ್ಳಲು ಯತ್ನಿಸಿದ್ದಾರೆ. ಚರಿತ್ರೆ, ತತ್ವಶಾಸ್ತ್ರ, ಮಾನವಶಾಸ್ತ್ರಗಳಿಂದ ಪಡೆದ ತಿಳಿವನ್ನು ಸಂಸ್ಕೃತಿಯ ಅನುಸಂಧಾನದಲ್ಲಿ ಅರಿವನ್ನಾಗಿ ಮಾರ್ಪಡಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇಂಥದೊಂದು ದುರ್ಗಮ ಹಾದಿಯ ಹೆಜ್ಜೆ ಗುರುತುಗಳು ಇಲ್ಲಿಯ ಲೇಖನಗಳಲ್ಲಿ ಕಾಣಬಹುದು.
1956ರಲ್ಲಿ ಬೆಳಗಾವಿಯಲ್ಲಿ ಜನಿಸಿದ ಬಸವರಾಜ ಕಲ್ಗುಡಿ ಅವರು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಕಾಲೇಜು ವ್ಯಾಸಂಗವು ಬೆಂಗಳೂರಿನಲ್ಲಿ ನಡೆಸಿದರು. ಎಂ.ಎ. (1975) ಪದವೀಧರರು. ‘ಅನುಭಾವ ಮತ್ತು ಸಾಂಸ್ಕೃತಿಕ ಸಮಸ್ಯೆಗಳು' ಸಂಶೋಧನಾ ಪ್ರಬಂಧಕ್ಕೆ (1983) ಪಿಎಚ್.ಡಿ. ಪದವಿ. ಕರ್ನಾಟಕದಲ್ಲಿಯ ಮಾಸ್ತಿಕಲ್ಲು ಕುರಿತಾಗಿ ಕ್ಷೇತ್ರಕಾರ್ಯ ಮಾಡಿ ಮಂಡಿಸಿದ ಮತ್ತೊಂದು ಸಂಶೋಧನೆ `ಮಹಾಸತಿ ಆಚರಣೆ'. ಅವರ ಅಧ್ಯಯನ ಶಾಸನವನ್ನು ಕುರಿತಾಗಿದ್ದರೂ, ಶಾಸನದ ಪಠ್ಯವನ್ನು ಕನ್ನಡ ಸಂಸ್ಕೃತಿಯ ಶೋಧನೆಗೆ ಪ್ರಮುಖ ಆಕರವಾಗಿ ಬಳಸಿದ್ದಾರೆ. ಸಂಸ್ಕೃತಿ ಕುರಿತಂತೆ ವ್ಯಾಖ್ಯಾನಿಸುವಲ್ಲಿ ಕಲ್ಗುಡಿಯವರು ಸಂಸ್ಕೃತಿಯಲ್ಲಿಯ ಚಲನೆಯ ಪಲ್ಲಟವನ್ನು ಸಮಗ್ರವಾಗಿ ವಿವಿಧ ನೆಲೆಗಳಿಂದ ಶೋಧಿಸುತ್ತಾರೆ. ಕಲ್ಗುಡಿಯವರು ವಚನ ಸಾಹಿತ್ಯ ಕುರಿತ ಸಂಶೋಧನಾತ್ಮಕ ಅಧ್ಯಯನದಲ್ಲಿ ವಿವಿಧ ಜ್ಞಾನಶಿಸ್ತುಗಳನ್ನು ಒಳಗೊಂಡಿದೆ. ಅವರು ವರ್ತಮಾನದ ಹಿನ್ನೆಲೆಯಿಂದ ವಚನ ಸಂಸ್ಕೃತಿಯನ್ನು ವ್ಯಾಖ್ಯಾನಿಸಿದ್ದು, ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ-1999