‘ಕಣ್ಣಬಿಲ್ಲು’ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ ಲೇಖಕ ಡಿ.ಆರ್. ದೇವರಾಜ್ ಅವರ ವಿಮರ್ಶಾ ಲೇಖನಗಳ ಸಂಕಲನ.ಈ ಕೃತಿಗೆ ಹಿರಿಯ ಚಿಂತಕ ಬಂಜಗೆರೆ ಜಯಪ್ರಕಾಶ್ ಅವರ ಅರ್ಥಪೂರ್ಣ ಮುನ್ನುಡಿ ಇದ್ದು, ಕವಿ ಎಚ್.ಎಲ್. ಪುಷ್ಪ ಅವರ ಬೆನ್ನುಡಿ ಮಾತುಗಳಿವೆ.
‘ದೇವರಾಜ್ ಮತ್ತು ಅವರ ಓರಗೆಯ ಗೆಳೆಯರು ಒಂದು ಕಾಲದ ಬದುಕಿನ ಚಿಂತನೆಯ ವಲಯದಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಇವರು ಯಾವುದೇ ಸೀಮಿತವಾದ ಕಟ್ಟುಪಾಡುಗಳಲ್ಲಿ ತಮ್ಮನ್ನು ಕಟ್ಟಿಕೊಳ್ಳದೆ ಬಯಲು ಬಳಗದ ಮೂಲಕ ಆರೋಗ್ಯಕರವಾಗಿ ಬದುಕ ಹೊರಟವರು. ಇವರುಗಳು ಜಾತ್ಯತೀತವಾದ ನಿಲುವು, ಜಾತ್ಯತೀತವಾದ ವಿವಾಹಗಳನ್ನು ಒಪ್ಪಿಕೊಂಡವರು. ಸಹಜವಾಗಿಯೇ ಇಂತಹ ಕಡೆ ವೈಚಾರಿಕ ಚಿಂತನೆಗಳಿಗೆ ಬಂಧನಗಳಿರುವುದಿಲ್ಲ. ಹೀಗೆ ಆರೋಗ್ಯಕರ ಚಿಂತನೆಗಳಲ್ಲಿ ಬದುಕಿದ ದೇವರಾಜ್, ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ’ ಎನ್ನುತ್ತಾರೆ ಕವಿ ಎಚ್. ಎಲ್. ಪುಷ್ಪ.
ಇಲ್ಲಿನ ಲೇಖನಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ. ಭಾಗ-1ರಲ್ಲಿ ಸಾಹಿತ್ಯ ಸಂದರ್ಭ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ವಚನಗಳು: ಶಿಕ್ಷಣ-ಶುದ್ಧಿ, ಸಾಂಸ್ಕೃತಿಕ ನಾಯಕರಾಗಿ ಬಸವಣ್ಣ ಮತ್ತು ಕನಕದಾಸರು, ಕೆ.ವೈ.ಎನ್ ಕಾವ್ಯ ವಿಮರ್ಶೆ: ಸೃಜನಾತ್ಮಕ ಓದಿನ ಜಂಗಮ ಹಾದಿ, ಸಂಶೋಧನೆ ಮತ್ತು ಅನ್ಯಜ್ಞಾನ ಶಿಸ್ತುಗಳು, ಚಕ್ರರತ್ನ: ಲೋಕಶಾಂತಿಯ ತತ್ವ, ಜನಪ್ರಜ್ಞೆಯ ಚಿಂತಕ ಡಾ.ಹಿಶಿರಾ, ಪ್ರೇಮಭಾರತದ ಕನಸು ಕಂಡ ಎ. ಸೋಮಲಿಂಗಯ್ಯ, ಅಭಿವೃದ್ಧಿ ಮೀಮಾಂಸೆ: ಸಮುದಾಯಗಳ ಸಾಂಸ್ಕೃತಿಕ ಒಳಗೊಳ್ಳುವಿಕೆ ಎಂಬ ಒಂಭತ್ತು ಲೇಖನಗಳು ಸಂಕಲನಗೊಂಡಿವೆ. ಭಾಗ-2ರಲ್ಲಿ ಬುದ್ಧಭಾರತ: ಗಾಂಧಿ ಮರುಹುಟ್ಟು, ದೇಶೀಯತೆ ಮತ್ತು ಆಡಳಿತಶಾಹಿ ವ್ಯವಸ್ಥೆ, ಜನರಾಜಕಾರಣ: ಚಳವಳಿಗಳು ಮತ್ತು ಸಮುದಾಯಗಳು, ಕೋಮುವಾದದ ಕೊನೆಯ ದಿನಗಳು, ಗೋಹತ್ಯೆ ನಿಷೇಧ-ರೈತ ವಿರೋಧಿ ಕಾಯ್ದೆ, ಹಾಗೂ ಅಂತರ್ಜಾತಿ ಮದುವೆಗಳು ಜಾತಿ ಮೀರುವಿಕೆಯ ಅಸ್ತ್ರ ಎಂಬ ಆರು ಲೇಖನಗಳಿವೆ. ಪ್ರಸ್ತುತ ಕೃತಿಯ ಲೇಖನಗಳಲ್ಲಿ ನಮ್ಮ ನಂತರದ ಹೊಸ ತಲೆಮಾರೊಂದು ಈಗಾಗಲೇ ನಮ್ಮ ಹಿರಿಯ ಚಿಂತಕರು ಎದುರಿಸಿದ ಇನ್ನೂ ಎದುರಿಸುತ್ತಲೇ ಇರುವ ಸಮಸ್ಯೆಗಳಿಗೆ ಹೇಗೆ ಎದುರಾಗಬಲ್ಲರು ಎಂಬುದಕ್ಕೆ ಉತ್ತರಗಳು ಸಿಗುತ್ತವೆ ಎಂಬುದು ಕವಿ ಎಚ್.ಎಲ್. ಪುಷ್ಪ ಅವರ ಅಭಿಪ್ರಾಯ.
ಲೇಖಕ ಡಿ.ಆರ್. ದೇವರಾಜ್ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದವರು. ‘ಬಯಲು ಬಳಗ’ದ ಮೂಲಕ ಸಾಹಿತ್ಯ ಮತ್ತು ಸಾಮಾಜಿಕ ಚಳುವಳಿಗಳ ಒಡನಾಟ ಹೊಂದಿರುವ ದೇವರಾಜ್ ಅವರು ಸದ್ಯ ಚನ್ನಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಯ "ಕಣ್ಣಬಿಲ್ಲು" ಕೃತಿ ಪ್ರಕಟಗೊಂಡಿದೆ. ...
READ MORE