‘ದೇವನೂರು ಕಥನ’ ಟಿ.ಪಿ. ಅಶೋಕ್ ಅವರು ಸಂಪಾದಿಸಿರುವ ದೇವನೂರು ಮಹಾದೇವ ಅವರ ಸಮಗ್ರ ಕತೆಗಳ ಸಂಕಲನ. ದೇವನೂರ ಮಹಾದೇವರ ಗದ್ಯವನ್ನು ಕಾವ್ಯದಂತೆಯೇ ಓದಿಕೊಳ್ಳಬೇಕು. ಮಹಾದೇವರ ಕತೆ ಕಾದಂಬರಿಗಳು ಗಾತ್ರದಲ್ಲಿ ಸಣ್ಣವು. ಆದರೆ ಅವು ತೋರುವುದಕ್ಕಿಂತ ಹೆಚ್ಚು ಧ್ವನಿಸುತ್ತವೆ. ಅಲ್ಲಿಯೂ ಮಹಾದೇವ ವಾಸ್ತವವಾದೀ ಮಾರ್ಗಕ್ಕಿಂತ ರೂಪಕಾತ್ಮಕ ಮಾರ್ಗವನ್ನೇ ತುಳಿದಿದ್ದಾರೆ. ವಾಸ್ತವಿಕ ವಿವರಗಳಿಗಿಂತ ಹೆಚ್ಚಾಗಿ ರೂಪಕಗಳಿಂದಲೇ ಕಟ್ಟುವುದರಿಂದ ಅವರ ರಚನೆಗಳಿಗೆ ಕಾವ್ಯದ ಬಿಗಿ, ಸಾಂದ್ರತೆ, ಸಂಕ್ಷಿಪ್ತತೆಗಳು ತಾನಾಗಿ ಬಂದುಬಿಟ್ಟಿವೆ. ವೈಚಾರಿಕ ಗದ್ಯಕ್ಕಿಂತ ಮೌಖಿಕ ಸಂಪ್ರದಾಯದ ಕಥನ, ಹಾಡು, ಪದ್ಯ, ಪುರಾಣಗಳಿಗೆ ಅವರ ಕೃತಿಗಳು ಹೆಚ್ಚು ಹತ್ತಿರವಾಗಿವೆ. ಸಂಕೋಚ ಸ್ವಭಾವದ ಮಿತಭಾಷಿ. ಮಹಾದೇವರ ಹಾಸ್ಯಪ್ರಜ್ಞೆ ಅವರ ಆಪ್ತ ವಲಯಕ್ಕಷ್ಟೇ ಪರಿಚಿತ. ಸಂಕ್ಷಿಪ್ತತೆ ಮತ್ತು ಮೌನ ಅವರ ಮಿತಿ ಎನಿಸದೆ ಅವು ಅವರ ವ್ಯಕ್ತಿತ್ವ ಮತ್ತು ಬರವಣಿಗೆಗಳ ಪ್ರಧಾನ ಲಕ್ಷಣಗಳಾಗಿ ಮಾತ್ರ ತೋರುತ್ತವೆ. ಅಷ್ಟೇ ಅಲ್ಲ; ಅವು ಅವರ ದೊಡ್ಡ ಶಕ್ತಿ. ಅಂಥಹ ಎಲ್ಲ ತೆಗಳೂ ಈ ಕೃತಿಯಲ್ಲಿವೆ.
ಕನ್ನಡದ ಹಿರಿಯ ವಿಮರ್ಶಕರಾದ ಟಿ.ಪಿ. ಅಶೋಕರವರ ಕೃಷ್ಣ ಕಥನ ಹಾಗೂ ದೇವನೂರು ಕಥನ ಕೃತಿಗಳು ಅಶೋಕರವರ ಸಹಜ ಸಾಹಿತ್ಯ ಪ್ರೀತಿ ಮತ್ತು ಗಂಭೀರ ಅಧ್ಯಯನದ ಉದಾಹರಣೆಗಳಾಗಿವೆ. ಕನ್ನಡ ಬರಹಗಳ ಎರಡು ಮಾದರಿಗಳಾದ ಕೃಷ್ಣ ಕಥನ ಭಾಷಣ ಮಾದರಿ ಹಾಗೂ ಪ್ರಬಂಧ ದೇವನೂರು ಕಥನ ಮಾದರಿಗಳ ಮಿತಿಗಳನ್ನು ಈ ಕೃತಿಗಳು ಮೀರಿವೆ. ಭಾಷಣ ಮಾದರಿ ಬರಹಗಳ ಅತಿ ಭಾವುಕತೆ, ರೆಟರಿಕ್ ಮೂಲಕವೇ ಎಲ್ಲವನ್ನೂ ಸಾಬೀತುಗೊಳಿಸಬಹುದೆಂಬ ನಂಬಿಕೆ, ವಾಚಾಳಿತನ ಈ ಕೃತಿಗಳಲಿಲ್ಲ. ಹಾಗೇ ಪ್ರಬಂಧ ಮಾದರಿ ಬರಹಗಳ ಪಾಂಡಿತ್ಯದ ಪ್ರದರ್ಶನ, ಪ್ರಸಿದ್ಧ ವಿಮರ್ಶಕರ ಬರಹಗಳ ಅನವಶ್ಯಕ ಉಲ್ಲೇಖ, ಅನವಶ್ಯಕವಾಗಿ ಪಾರಿಭಾಷಿಕ ಪದಗಳ ಬಳಕೆ ಇಲ್ಲಿ ಕಾಣುವುದಿಲ್ಲ.
................
ದೇವನೂರು ಕೃತಿಯ ಪುಸ್ತಕ ವಿಮರ್ಶೆ- ಹೊಸ ಮನುಷ್ಯ
ಕೃಷ್ಣ ಕಥನವನ್ನು ಅಶೋಕರವರು ಶ್ರೀ ಕೃಷ್ಣ ಆಲನಹಳ್ಳಿಯವರ ಸಮಗ್ರ ಸಾಹಿತ್ಯ ಆಧ್ಯಯನ ಎಂದು ಹೇಳಿದ್ದಾರೆ. ಆದರೆ ಇದು ಕೇವಲ ಪರಿಚಯಾತ್ಮಕ ಪುಸ್ತಕವಲ್ಲ. ಕೃಷ್ಣ ಅವರ ಕೃತಿಗಳ ಬಗ್ಗೆ ಮಾತಾಡುವಾಗಲೇ ಅಶೋಕರವರು ಕಾದಂಬರಿ ಅನ್ನುವ ಪ್ರಕಾರ ಹಾಗೂ ಕನ್ನಡದಲ್ಲಿ ಕಾದಂಬರಿ ಅನ್ನುವ ಪ್ರಕಾರ ರೂಪುಗೊಂಡ ಪ್ರಕ್ರಿಯೆಯ ಬಗ್ಗೆ ಬಹಳ ಪಾಂಡಿತ್ಯಪೂರ್ಣವಾದ ಹಾಗೂ ಒಳನೋಟಗಳನ್ನು ಹೊಂದಿರುವ ಮಾತುಗಳನ್ನು ಆಡುತ್ತಾರೆ. ಮಾಡಿದ್ದುಣ್ಣೋ ಮಹರಾಯದಿಂದ ಕುಸುಮಬಾಲೆಯವರೆಗೆ ಕನ್ನಡ ಕಥನ ಸಾಹಿತ್ಯ ಬೆಳೆದುಬಂದ ರೀತಿಯ ಬಗ್ಗೆ ಅಶೋಕರವರು ಹೇಳಿರುವುದು ಕನ್ನಡ ಕಾದಂಬರಿಗಳ ಸಂಕ್ಷಿಪ್ತ ಇತಿಹಾಸವೂ, ಹಾಗೂ ಈ ದೀರ್ಘ ಇತಿಹಾಸದಲ್ಲಿ ಕಂಡುಬರುವ ವಿನ್ಯಾಸಗಳನ್ನು ವ್ಯಕ್ತಗೊಳಿಸುವ ಪ್ರಯತ್ನವೂ ಆಗಿದೆ. ಕೃಷ್ಣ ಅವರ ಸಾಹಿತ್ಯವನ್ನು ಅಶೋಕರವರು ನೋಡುವುದು ಈ ರೀತಿಯ ವಿನ್ಯಾಸದ ಭಾಗವಾಗಿ, “ಪ್ರಾಚೀನ-ನವೀನಗಳ ಸ್ನೇಹ ಸಮರಗಳ ದ್ವಂದ್ವ ವಿನ್ಯಾಸ” ಹೇಗೆ ಕಾನೂರು ಹೆಗ್ಗಡತಿ, ಮರಳಿ ಮಣ್ಣಿಗೆ ಹಾಗೂ ಕೃಷ್ಣ ಅವರ ಕಾದಂಬರಿಗಳಲ್ಲಿ ಮುಖ್ಯವಾಗಿದೆ ಅನ್ನುವುದನ್ನು ತೋರಿಸಿಕೊಡುತ್ತಾರೆ. ಕೃಷ್ಣ ಅವರ ಕಥನ ಸಾಹಿತ್ಯದಲ್ಲಿನ ವಿನ್ಯಾಸಗಳ ಬಗ್ಗೆಯೂ ಅಶೋಕರವರು ಹೇಳುತ್ತಾರೆ. ಉದಾಹರಣೆಗೆ, ಆಧುನೀಕರಣದ ಪ್ರಕ್ರಿಯೆಗೆ ಸ್ಪಂದಿಸುವ ರೀತಿ ಕೃಷ್ಣ ಅವರ ಕಾದಂಬರಿಗಳಲ್ಲಿ ಬೆಳೆಯುವ ಬಗೆಗೆ, ಆಧುನಿಕತೆಯ ಪ್ರಶ್ನೆಗಳನ್ನು ಕೃಷ್ಣ ದ್ವಂದ್ವ ನೆಲೆಯಿಂದಲೇ ನೋಡುತ್ತಾರೆ ಅನ್ನುವುದು, ಅವರ ಕಾದಂಬರಿಗಳ ಭೌತಿಕ ಲೋಕ ವಿಸ್ತಾರವಾಗುವ ಪ್ರಕ್ರಿಯೆ, ಹಾಗೂ “ವಾಸ್ತವತೆ ನವ್ಯತೆಗಳ ಕಿರು ಇಕ್ಕಟ್ಟಾದ ದಾರಿಯಲ್ಲಿ” ಪ್ರಾರಂಭ ಮಾಡುವ ಕೃಷ್ಣ ರಸ್ತೆಗೆ ಇಳಿದು ಕೊನೆಗೆ ವಾಸ್ತವತೆಯ ಹೆದ್ದಾರಿಗೆ ಬರುವ ಬಗ್ಗೆ ಹೇಳಿರುವುದನ್ನು ಗಮನಿಸಬಹುದು. ಆದರೆ ಈ ಸಮಗ್ರ ಅಧ್ಯಯನದ ಹಿರಿಮೆ ಇರುವುದು ಅದು ಕೃಷ್ಣ ಅವರ ಕಾದಂಬರಿಗಳು ಹೇಗೆ “ಒಂದನ್ನು ಮುಟ್ಟಿದರೆ ಇನ್ನೊಂದೂ ಮಿಡಿಯುವ” ಕನ್ನಡ ಕಾದಂಬರಿ ಜೀವಜಾಲದ ಭಾಗವಾಗಿದೆ ಎಂದು ತೋರಿಸುವಲ್ಲಿ. ಅಶೋಕರವರು ತೋರಿಸಿಕೊಡುವಂತೆ ಹೋಟೆಲ್ ಅನ್ನುವ ಪ್ರತಿಮೆ ಹೇಗೆ ಮರಳಿ ಮಣ್ಣಿಗೆ-ಭುಜಂಗಯ್ಯನ ದಶಾವತಾರ-ಒಡಲಾಳ ಇವುಗಳಲ್ಲಿ ಬಳಕೆಯಾಗಿದೆ ಅನ್ನುವುದು ಕನ್ನಡ ಕಾದಂಬರಿ ಲೋಕದ ಸಾತತ್ಯಕ್ಕೆ ಒಂದು ಉದಾಹರಣೆ. ಅಶೋಕರವರು ಕೊನೆಯಲ್ಲಿ ಹೇಳುವ “ದೇವನೂರು ಮಹದೇವ, ಕುಂ. ವೀರಭದ್ರಪ್ಪ, ಬಿ.ಚಂದ್ರೇಗೌಡ ಮೊದಲಾದ ಲೇಖಕರ ಹಿಂದೆ ಕೃಷ್ಣ ಖಂಡಿತವಾಗಿ ಇದ್ದಾರೆ” ಅನ್ನುವುದನ್ನು ಈ ಅಧ್ಯಯನ ಸಾಧಿಸಿ ತೋರಿಸಿದೆ. ಇನ್ನು ಅಶೋಕರವರು ಕೃಷ್ಣರವರ ಕತೆಗಳಲ್ಲಿ ಇರುವ ವಿನ್ಯಾಸಗಳ ಬಗ್ಗೆ ಹಾಗೂ ಕವಿತೆಗಳ ಬಗ್ಗೆ ಬರೆದಿರುವುದು ಒಂದು ಸೇರ್ಪಡೆಯಾಗಿದೆಯೇ ಹೊರತು ಕಾದಂಬರಿಗಳ ಬಗ್ಗೆ ಬರೆದಿರುವುದರ ಮುಂದುವರಿಕೆಯಾಗಿಲ್ಲ. ಅದಕ್ಕೆ ಕೃಷ್ಣರವರ ಕತೆಗಳು ಹಾಗೂ ಕವಿತೆಗಳ ಸಂಖ್ಯೆ ಹಾಗೂ ಸ್ವಭಾವಗಳೇ ಕಾರಣವಾಗಿರಬಹುದು. ದೇವನೂರು ಕಥನದಲ್ಲೂ ಅಶೋಕರವರು ದೇವನೂರರ ಬರವಣಿಗೆಗಳಲ್ಲಿ ಇರುವ ಪರಸ್ಪರ ಸಾವಯವ ಸಂಬಂಧ ಹಾಗೂ ಆ ಬರಹಗಳು ಕನ್ನಡದ ಇತರ ಸಾಹಿತ್ಯ ಕೃತಿಗಳ ಜೊತೆಗೆ ಹೊಂದಿರುವ ಸಂಬಂಧಗಳಲ್ಲಿ ಆಸಕ್ತನಾಗಿದ್ದೇನೆಂದು ಹೇಳುತ್ತಾರೆ. ಇಲ್ಲಿಯೂ ದೇವನೂರರ ಎಲ್ಲಾ ಬರಹಗಳಲ್ಲಿ ಇರುವ ವಿನ್ಯಾಸಗಳನ್ನು ಹಾಗೂ ಕನ್ನಡ ಸಾಹಿತ್ಯ ಲೋಕದ ಎಲ್ಲಾ ಚಟುವಟಿಕೆಗಳ ಹಿಂದಿರುವ ವಿನ್ಯಾಸಗಳ ಮುಂದುವರಿಕೆಯಾಗಿ ದೇವನೂರರ ಬರಹಗಳು, ಭಾಷಣಗಳು ಹಾಗೂ ಇತರ ಸಾಮಾಜಿಕ ಕೆಲಸಗಳನ್ನು ನೋಡಲು ಪ್ರಯತ್ನ ಪಡುತ್ತಾರೆ. ಅಶೋಕರವರು ಕೃಷ್ಣ ಕಥನದಲ್ಲಿ ತೋರಿಸಿಕೊಟ್ಟಿರುವಂತೆ ಕಥಾನಾಯಕರುಗಳಲ್ಲಿನ ಪ್ರಜ್ಞೆ ಮತ್ತು ಪರಿಸರದ ವಿಘಟನೆ ಟಿ.ಪಿ. ಅಶೋಕ ಅವರ ನಾಲ್ಕು ಕಿರು ಅಧ್ಯಯನಗಳು ಹಾಗೂ ಆಧುನಿಕತೆ-ಸಾಂಪ್ರದಾಯಿಕತೆಗಳ ಘರ್ಷಣೆ ಕನ್ನಡ ಕಾದಂಬರಿ ಜೀವಜಾಲದ ಮುಖ್ಯ ತಂತು. ಇವು ದೇವನೂರರ ಸಾಹಿತ್ಯದಲ್ಲಿ ಹಾಗೂ ಅವರ ಒಟ್ಟಾರೆ ಚಟುವಟಿಕೆಗಳಲ್ಲಿ ಹೇಗೆ ಮುಂದುವರೆದಿವೆ ಅನ್ನುವುದನ್ನು ಹೇಳುತ್ತಾರೆ. ಆಧುನಿಕತೆ ತರುವ ಬದಲಾವಣೆಗಳನ್ನು ಬಯಸುವ ಲೇಖಕ ತನ್ನ ಜನಾಂಗದ ನಂಬಿಕೆ, ಆಚರಣೆ, ಸಂಸ್ಕೃತಿಗಳನ್ನು ಹೇಗೆ ನೋಡುತ್ತಾರೆ ಅನ್ನುವುದರ ಬಗ್ಗೆ ಅಶೋಕರವರು ಹೇಳುವುದು ಆಸಕ್ತಿದಾಯಕವಾಗಿದೆ. ಆದರೆ ಕೃಷ್ಣ ಅವರ ಬಗೆಗಿನ ಅಧ್ಯಯನಕ್ಕೆ ಹೋಲಿಸಿದರೆ ದೇವನೂರು ಅವರ ಬಗ್ಗೆ ಬರೆದಿರುವುದು ಹೆಚ್ಚು ಪರಿಚಯಾತ್ಮಕ ಮತ್ತು ವಿವರಣಾತ್ಮಕವಾಗಿದೆ. ಇಲ್ಲಿ ದೇವನೂರು ಅವರ ಬರಹಗಳಿಂದ ಹಾಗೂ ಅವರ ಬಗ್ಗೆ ಬೇರೆಯವರು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆದಿರುವ ಲೇಖನಗಳ ಉಲ್ಲೇಖಗಳ ಗಾತ್ರ ಹಾಗೂ ಸಂಖ್ಯೆ ಜಾಸ್ತಿಯಾಗಿದೆ. (ಕೃಷ್ಣ ಅವರ ಬಗ್ಗೆ ಬಂದಿರುವ ಅಧ್ಯಯನಗಳ ಸಂಖ್ಯೆ ಕಡಿಮೆ ಅನ್ನುವುದು ನಿಜ: ಆದರೆ ದೇವನೂರು ಕಥನದಲ್ಲಿ ಚದುರಿದಂತಿರುವ ವಿವರಗಳನ್ನು ಒಂದು 'ಥೀಸಿಸ್' ಮೂಲಕ ಬೆಳೆಸಲಾಗಿಲ್ಲ.)
ದೇವನೂರು ಅವರ ಸಾಹಿತ್ಯದ ಬಗ್ಗೆ ಬಂದಿರುವ ಟೀಕೆಗಳ ಬಗ್ಗೆ ಇನ್ನೂ ಹೆಚ್ಚಿನ ಪರಿಚಯ ಮಾಡಿಸಬಹುದಾಗಿತ್ತು ಹಾಗೂ ಕೇವಲ ಉಲ್ಲೇಖಿಸುವುದರ ಬದಲು ಪುನರ್ ಪರಿಶೀಲಿಸಬಹುದಾಗಿತ್ತು. ದೇವನೂರು ಮಹದೇವ ಅವರ ಸಾಹಿತ್ಯದ ಅನುಸಂಧಾನಕ್ಕೆ ಅರ್ಥಪೂರ್ಣ ಪ್ರವೇಶವನ್ನು ಈ ಅಧ್ಯಯನ ನೀಡುತ್ತದೆ.
(ಕೃಪೆ: ಪುಸ್ರಕಾವಲೋಕನ, ಬರಹ: ಬಿ. ವಿ ರಾಮ ಪ್ರಸಾದ್)
©2024 Book Brahma Private Limited.