ರಾಮಾಯಣದಲ್ಲಿ ಸೀತೆಯನ್ನು ಕೇಂದ್ರವಾಗಿಟ್ಟು ಮತ್ತೆ ಮತ್ತೆ ಬರಹಗಳು ಬರುತ್ತಲೇ ಇವೆ. ಆಧುನಿಕ ಮಹಿಳಾ ಸಂವೇದನೆಗಳು ಜಾಗೃತಗೊಂಡ ದಿನದಿಂದ ರಾಮಾಯಣವನ್ನು ಸೀತೆಯ ಕಣ್ಣಲ್ಲಿ ವಿಶ್ಲೇಷಿಸಿದ ಹಲವು ಕೃತಿಗಳು ಬಂದಿವೆ. ಇಲ್ಲಿ ಎಸ್. ಮಾಲತಿ ಅವರು ವಾಲ್ಮೀಕಿ ರಾಮಾಯಣವನ್ನು ಆಧರಿಸಿ ಸೀತಾ ಚರಿತ ಎನ್ನುವ ಕಿರು ನಾಟಕವನ್ನು ಬರೆದಿದ್ದಾರೆ. ಓರ್ವ ಮಹಿಳೆಯಾಗಿ ಸೀತೆ ಮಾಲತಿಯವರನ್ನು ಹೆಚ್ಚು ಕಾಡಿರುವುದೂ ಈ ಕೃತಿಯಲ್ಲಿ ಕಾಣಸಿಗುತ್ತದೆ . ಇದು, ಪುರುಷ ಪ್ರಧಾನ ವ್ಯವಸ್ಥೆಯಿಂದ ಪದೇ ಪದೇ ವಂಚನೆಗೊಳಗಾಗುತ್ತಾ, ಶೋಷಣೆಗೊಳಗಾಗುತ್ತಾ ರೋಸಿ ಭೂಮಿ ತಾಯಿಯ ಗರ್ಭ ಸೇರುವ ಸೀತೆಯ ಕತೆ, ಸೀತೆಯ ಶೋಷಣೆಯೇ ನಾಟಕದ ಮುಖ್ಯ ಭಾಗವಾದಾಗ, ಶ್ರೀರಾಮನ ಪಾತ್ರ ಮಂಕಾಗುತ್ತಾ ಬರುತ್ತದೆ. ಇಡೀ ರಾಮಾಯಣದ ಕತೆಯ ಸಾರವನ್ನು ಒಳಗೊಂಡಿರುವ ಈ ಕಿರು ನಾಟಕ 14 ದೃಶ್ಯಗಳನ್ನು ಹೊಂದಿದೆ. ಶ್ರೀರಾಮಪಟ್ಟಾಭಿಷೇಕದಿಂದ ಆರಂಭವಾಗಿ, ವನವಾಸ, ಸೀತಾಪಹರಣ, ರಾವಣ ವಧೆ, ಅಯೋಧ್ಯೆ ಪಟ್ಟಾಭಿಷೇಕ, ಸೀತೆ ಮತ್ತೆ ಕಾಡುಪಾಲು, ಲವಕುಶ ಜನನ, ಅಂತಿಮವಾಗಿ ಮತ್ತೆ ರಾಮನ ಮುಖಾಮುಖಿ, ಸೀತೆಯ ನಿರ್ಗಮನ ಹೀಗೆ ಪ್ರಮುಖ ಸಂಗತಿಗಳನ್ನು ಈ ಕಿರುನಾಟಕದಲ್ಲಿ ಕಟ್ಟಿಕೊಡಲಾಗಿದೆ.
©2024 Book Brahma Private Limited.