‘ಮಹಾಗಾರುಡಿ’ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರು ರಚಿಸಿರುವ ನಾಟಕ. ಕವಿತೆ-ಕತೆಗಳನ್ನು ರಚಿಸುತ್ತಿದ್ದ ನರಸಿಂಹಮೂರ್ತಿ ಅವರು ಈ ಕೃತಿಯ ಮೂಲಕ ನಾಟಕಕಾರಾಗಿಯೂ ಹೊರಹೊಮ್ಮಿದ್ದಾರೆ. ಪ್ರಕಾರ ಬೇರೆಯಾದರೂ ಅವರ ಸಾಹಿತ್ಯದ ಮೂಲಕ ಲೋಕಹಿತ ಸಾಧ್ಯವೆನ್ನುವ ಅಪೇಕ್ಷೆ, ಉದ್ದೇಶ, ಆದರ್ಶಗಳು ಬೇರೆಯಾಗಿಲ್ಲ. ಭಾಸನ ಪಂಚರಾತ್ರ ನಾಟಕದಂತೆಯೇ ಇದೂ ಮಹಾಭಾರತವನ್ನು ಆಧರಿಸಿ ರೂಪುಗೊಂಡ ನಾಟಕ. ಅಲ್ಲಿನಂತೆಯೇ ಇಲ್ಲಿಯೂ ಯುದ್ಧ ನಡೆಯದು. ಅಲ್ಲಿಗಿಂತ ಭಿನ್ನವಾಗಿ ಇಲ್ಲಿ ಕರ್ಣ-ದ್ರೌಪದಿಯರ ಸಂಬಂಧ. ಮುಂದಾಗುವ ಕೆಡುಕು ಖಚಿತವೆಂದು ಕಂಡಮೇಲೆ ಅದನ್ನು ತಪ್ಪಿಸಲು ವಿನಾಶದತ್ತ ಸಾಗುತ್ತಿರುವ ಮನುಕುಲ ಹಿಡಿಯಬೇಕಾದ ಹಾದಿ ಇದು ಎಂದು ಮಹಾಭಾರತದ ಮರುರಚನೆಯ ಮೂಲಕ ಮೂರ್ತಿ ತೋರಲು ಬಯಸಿದ್ದಾರೆ.
ಜ್ಞಾನಸಿಂಧು ವ್ಯಾಸ ಮತ್ತು ಲೋಕವಿವೇಕಿ ಕೃಷ್ಣ ಇಬ್ಬರೂ ಒಂದುಗೂಡಿ ಯುದ್ಧತಂತ್ರವನ್ನು ಶಾಂತಿಯ ಪ್ರತಿತಂತ್ರದಿಂದ ಮುರಿದು ಲೋಕದ ಉಳಿವಿಗೆ ಶ್ರಮಿಸುವ ಈ ನಾಟಕ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಎಷ್ಟೇ ಅಸಾಧ್ಯವೆನಿಸಿದರೂ ಶಾಂತಿಯನ್ನು ಬಯಸುವ ಲೋಕಕ್ಕೆ ದಾರಿ ತೋರುವ ನಾಯಕರು ಹಿಡಿಯಬೇಕಾದ ದಾರಿಯನ್ನು ತೋರುತ್ತದೆ.
©2024 Book Brahma Private Limited.