ಮಾನವೀಯ ವಚನ ಪರಂಪರೆಯನ್ನು ನಾಡಿನಾದ್ಯಂತ ಪಸರಿಸಲು ಹೊರಟ ಶರಣರ ಹೋರಾಟ-ಎದುರಿಸುವ ಅಡ್ಡಿಗಳನ್ನು ಸಮಕಾಲಿನ ತೆಕ್ಕೆಯಲ್ಲಿಟ್ಟು ರಚಿಸಿರುವ ನಾಟಕ ‘ಮುಂದಣ ಕಥನ’.
ರಂಗದ ಮೇಲೆ ಹಲವಾರು ಪ್ರದರ್ಶನಗಳನ್ನು ಕಂಡು ಜನರ ಮೆಚ್ಚುಗೆ ಗಿಟ್ಟಿಸಿದ ನಟರಾಜ್ ಹುಳಿಯಾರ್ ಅವರ 'ಮುಂದಣ ಕಥನ' ನಾಟಕ ಹಿಂದಣ ಕಥೆಯಲ್ಲ. ಅದು 12ನೇ ಶತಮಾನವನ್ನು ಆದರ್ಶೀಕರಿಸುವುದಿಲ್ಲ; ಬದಲಿಗೆ ಪ್ರಸ್ತುತಗೊಳಿಸುತ್ತದೆ.
ವಚನ ಚಳವಳಿಗೆ ಎದುರಾದ ಬಿಕ್ಕಟ್ಟಿನ ಕಾಲದಲ್ಲಿ ವಚನಗಳನ್ನು ಹೊತ್ತು ಕನ್ನಡನಾಡಿನ ಮೂಲೆಮೂಲೆಗಳಿಗೆ ನಡೆದ ಜನರು, ವಚನಗಳ ಜ್ಞಾನವನ್ನು ಎಲ್ಲೆಡೆ ಹಬ್ಬಿಸಲು ಹೊರಟಾಗ ನಡೆದ ಸಂಚು ಹಾಗೂ ಕೊಲೆಗಳು ಆ ಕಾಲದಂತೆ ಎಲ್ಲ ಕಾಲಗಳಲ್ಲೂ ಹೆಜಿಮನಿಯ ಸಾಧನಗಳಾಗಿ ಮುಂದುವರಿಯುವುದನ್ನು ನಾಟಕ ಭಿನ್ನ ನೆಲೆಯಲ್ಲಿ ಅಭಿವ್ಯಕ್ತಿಸುತ್ತದೆ. ಶರಣರ ಆಂದೋಲನದ ಮತ್ತೊಂದು ಮಗ್ಗುಲನ್ನು ನಟರಾಜ್ ಹುಳಿಯಾರ್ ತುಂಬ ಗಂಭೀರವಾಗಿ ಮಂಡಿಸಿದ್ದಾರೆ. ಬಹುಶಃ ವಚನ ಚಳವಳಿಯನ್ನು ಇಷ್ಟು ಸಮಗ್ರವಾಗಿ ಈ ಹಿಂದಿನ ನಾಟಕಕಾರರಿಗೆ ಗ್ರಹಿಸಲು ಸಾಧ್ಯವಾಗಿರಲಿಲ್ಲ ಎನ್ನುವುದೇ 'ಮುಂದಣ ಕಥನ'ದ ಗಹನತೆಯನ್ನು ಸೂಚಿಸುತ್ತದೆ ಎಂದು ಕೃತಿಗೆ ಬೆನ್ನುಡಿ ಬರೆದ ರಾಜಪ್ಪ ದಳವಾಯಿ ಪ್ರಶಂಸಿಸಿದ್ದಾರೆ.
©2024 Book Brahma Private Limited.