ಡಾ. ಚಂದ್ರಶೇಖರ ಕಂಬಾರರ ಹೊಸ ನಾಟಕ ‘ಮಹಮೂದ್ ಗಾವಾನ್’. ಕಂಬಾರರು ಅಪರೂಪಕ್ಕೆ ಇತಿಹಾಸದ ವಸ್ತುವನ್ನು ನಾಟಕವಾಗಿಸಿದ್ದಾರೆ. ಹಾಗೆ ನೋಡಿದರೆ ಇತಿಹಾಸಕ್ಕೆ ಸಂಬಂಧಿಸಿದಂತೆ ಇದು ಕಂಬಾರರ ಮೊದಲ ನಾಟಕವೇನಲ್ಲ. ಕಳೆದ ಕೆಲವು ವರ್ಷಗಳಿಂದ ಜಾನಪದದ ಹೆಜ್ಜೆಜಾಡಿನಿಂದ ಕಾಲು ಕಿತ್ತ ಕಂಬಾರರು ಆಕರ್ಷಕ ವಸ್ತುಗಳನ್ನು ಹುಡುಕಿ ನಾಟಕ ಮಾಡತೊಡಗಿದ್ದಾರೆ. ಗುಳಕಾಯಜ್ಜಿ, ಶಿವರಾತ್ರಿ, ಚಕ್ಕಣಾಚಾರ್ಯ ಚರಿತ್ರೆಯನ್ನು ವಸ್ತುವಾಗಿಸಿಕೊಂಡ ನಾಟಕಗಳು. ಈಗ ಅದೇ ಸಾಲಿಗೆ ಹೊಸ ನಾಟಕ ‘ಮಹಮೂದ್ ಗಾವಾನ್’ ಸೇರ್ಪಡೆಯಾಗಿದೆ.
ಕಂಬಾರರ ಗಾವಾನ್ ಒಂದು ಉತ್ತಮ ಮತ್ತು ಮಹಾತ್ವಾಕಾಂಕ್ಷಿ ನಾಟಕ. ನಾಟಕ ಬರೆಯುವುದರಲ್ಲಿ ಪಳಗಿರುವ ಮತ್ತು ಕಸುಬುಗಾರಿಕೆ ಇರುವ ಕಂಬಾರರ ಸ್ಪರ್ಶ ಗಾವಾನ್ ನಾಟಕದಲ್ಲಿ ಕಾಣಿಸುತ್ತದೆ. ದೃಶ್ಯಗಳ ಸಂಯೋಜನೆ, ಪಾತ್ರಗಳ ಸೃಷ್ಟಿ ಮತ್ತು ನಿರ್ವಹಣೆ, ಬಳಕೆಯಾಗಿರುವ ಭಾಷೆಗಳು ನಾಟಕವನ್ನು ಸಾಹಿತ್ಯ ಕೃತಿಯಾಗಿ ಮಾಡುವಲ್ಲಿ ಯಶಸ್ವಿಯಾಗಿವೆ.
ನಾಟಕದ ಮೊದಲ ದೃಶ್ಯ ಆರಂಭವಾಗುವುದು ಬೀದರಿನ ಮಹಮೂದ್ ಗಾವಾನ್ ಮದರಸಾದ ಆವರಣದಲ್ಲಿ. ಶೈಕ್ಷಣಿಕ ಪ್ರವಾಸಕ್ಕೆ ಬಂದ ಮಕ್ಕಳು ಅದ್ಭುತ- ಅನನ್ಯ ಕಟ್ಟಡ ನೋಡಿ ಬೆರಗಾಗುತ್ತಾರೆ. ಅದರ ಬಗ್ಗೆ ತಿಳಿಯುವ ಕುತೂಹಲ. ಅದನ್ನು ತಣಿಸುವುದಕ್ಕೆ ಅವರಿಗೆ ತಿಳಿಸುವುದು ಕತೆ ಕೇಳಿದರೆ ‘ತಾನೇ ಗಾವಾನ್ ಎಂಬಂತೆ ಆಡುತ್ತಾನೆ’ ಎಂದು ಜನರಿಂದ ಕರೆಸಿಕೊಳ್ಳುವ ಹಣ್ಣುಹಣ್ಣು ಮುದುಕ. ಅವನು ಬೇರೆ ಯಾರೂ ಅಲ್ಲ ಸ್ವತಃ ಗಾವಾನ್ ನೇ ಎಂದು ಅರಿವಾಗಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ. ತನ್ನ ಆಧ್ಯಾತ್ಮಿಕ ಗುರು ಕೀರ್ಮಾನಿಯವರಿಂದ ತಿಳಿದ ಗುಲ್ಬರ್ಗದಲ್ಲಿ ಬಂದೇ ನವಾಜ್ ಮತ್ತು ಸಾವಳಗಿ ಶಿವಲಿಂಗರು ಮಾಡಿದ ಸಹಬಾಳ್ವೆಯ ಪವಾಡ ನೋಡಲು ಬಂದವ, ನಂತರ ಬೀದರಿಗೆ ಬರುತ್ತಾನೆ. ಹೀಗೆ ಗಾವಾನ್ ಬದುಕಿನೊಳಕ್ಕೆ ಅವನ ಮೂಲಕವೇ ಪ್ರವೇಶಿಸಲು ಪ್ರಯತ್ನಿಸಿರುವುದು ಸೊಗಸಾದ ಕ್ರಮ. ಈ ನಿರೂಪಕ ಮುದುಕ ಗಾವಾನ್ ತನ್ನ ಕತೆಯನ್ನು ತಾನೇ ಹೇಳುತ್ತಾನೆ. ಆದರೆ, ಅದು ಆತ್ಮಕಥನಾತ್ಮಕವಾಗಿಲ್ಲ. ಅವನು ಭಾಗಿಯೂ ಆಗಿರುವುದರಿಂದ ಕೇವಲ ‘ಸಾಕ್ಷಿ’ ಕೂಡ ಆಗಲಾರ.
ಗಾವಾನ್ ರ ಸಹಾಯಕಿಯಾಗಿ ಕೆಲಸಕ್ಕೆ ಸೇರುವ ‘ನೀಲಿ’ ಕಂಬಾರರದೇ ಪಾತ್ರ ಸೃಷ್ಟಿ. ಆ ಪಾತ್ರವನ್ನು ಕಟ್ಟಿ ಬೆಳೆಸಿರುವ ರೀತಿ ಮತ್ತು ಅದನ್ನು ನಾಟಕದ ಬೆಳೆವಣಿಗೆ ಬಳಸಿಕೊಳ್ಳುತ್ತ ಹೋಗುವ ಕ್ರಮ ಕಂಬಾರರ ನೈಪುಣ್ಯತೆಗೆ ಸಾಕ್ಷಿ. ಇಡೀ ನಾಟಕದ ಜೀವ ಮತ್ತು ಜೀವಾಳ ಆಗಿರುವುದು ‘ನೀಲಿ’. ನಾಟಕಕ್ಕಾಗಿಯೇ ರೂಪುಗೊಂಡ ಈ ಪಾತ್ರ ಬೆರಗು ಹುಟ್ಟಿಸುವಷ್ಟು ಸೊಗಸಾಗಿದೆ. ಗಾವಾನ್ ರ ಬಳಿ ಕೆಲಸದವಳಾಗಿ ಸೇರುವ ‘ನೀಲಿ’ಯು ಸುಲ್ತಾನ್ ಹುಮಾಯೂನ್ ಮತ್ತು ಖ್ವಾಜಾ ಜಹಾನ್ ಟರ್ಕ್ ಹತ್ಯೆಗೆ ಕಾರಣಳಾಗುತ್ತಾಳೆ. ಒಂದು ಕೊಲೆ ಅವಳದೇ ಆಯ್ಕೆಯಾದರೆ ಮತ್ತೊಂದು ವ್ಯವಸ್ಥೆ ಮಾಡಿಸಿದ ಹತ್ಯೆ. ಆ ಘಟನೆಗಳನ್ನು ಹೆಣೆಯುವಲ್ಲಿ ಕಂಬಾರರ ಕೌಶಲ್ಯ ಎದ್ದು ಕಾಣಿಸುತ್ತದೆ. ಕಂಬಾರರ ‘ಗಾವಾನ್’ ಕನ್ನಡ ರಂಗಭೂಮಿ-ಸಾಹಿತ್ಯಕ್ಕೆ ವಿಭಿನ್ನ ಕೊಡುಗೆ.
’ಮಹಮೂದ್ ಗಾವಾನ್’ ಕೃತಿಯ ಕುರಿತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಅವರ ಮನದ ಮಾತುಗಳು
©2024 Book Brahma Private Limited.