ಬೇಲೂರು ರಘುನಂದನ್ ಅವರ ‘ರೂಬಿಕ್ಸ್ ಕ್ಯೂಬ್ ಮತ್ತಿತರ ನಾಟಕಗಳು ಕ್ಲೀನ್ ಅಂಡ್ ಕ್ಲಿಯರ್ ಪಾಯಖಾನೆ ಆಯಾಮ’ ಕೃತಿಯು ನಾಟಕಗಳ ಸಂಕಲನವಾಗಿದೆ. ಶಶಿಧರ ಅಡಪ ಅವರು ಈ ಕೃತಿಗೆ ಬೆನ್ನುಡಿ ಬರೆದಿದ್ದು, ‘ಸಾಮಾಜಿಕ ಗೊಂದಲಗಳನ್ನು ಸರಳೀಕರಿಸಿ, ವೈಭವೀಕರಿಸಿ, ಕಣ್ಕಟ್ಟಿ ಆರ್ಥೈಸುವಂತೆ ಮಾಡುವ ಜಾಹಿರಾತು ಯುಗಧರ್ಮದ ಪ್ರಜೆಗಳು ನಾವು. ಏಕಮುಖ ಕಥನಗಳ ಸನ್ನಿಯ ಸಂಭ್ರಮದ ಹೊಡೆತ ಕ್ರಿಯಾಶೀಲ ಮನಸ್ಸುಗಳನ್ನು ಧೃತಿಗೆಡಿಸುವ ಕಾಲವಿದು. ಈ ಸನ್ನಿಯ ಥಳಕು, ತೊಡಕುಗಳನ್ನು ದಾಟಿ ನಿಂತ ನಾಟಕಕಾರ ಬೇಲೂರು ರಘುನಂದನ. ಅವರ ನಾಟಕಗಳಲ್ಲಿ 'ಅಜ್ಜ ನೆಟ್ಟ ಆಲದ ಮರವಿಲ್ಲ, ಏಕತಾನತೆಯ ನೆರಳಿಲ್ಲ.' ಅವರ ಮೂರು ಹೊಸ ನಾಟಕಗಳು ಆಯಾಮ, ರೂಬಿಕ್ಸ್ ಕ್ಯೂಬ್ ಮತ್ತು ಕ್ಲೀನ್ ಅಂಡ್ ಕ್ಲಿಯರ್ ಪಾಯಖಾನೆ. 'ಕತ್ತಲು ಕಳಚೋದು ಅಂದ್ರೆ ಬೆಳಕಿನ ಕ್ರೋಢೀಕರಣ ಅಲ್ಲ,' ರೂಬಿಕ್ಸ್ ಕ್ಯೂಬ್ ನಾಟಕದ ಒಂದು ಬೆಂದ ಅಗುಳು, ಅಸಮಾನ ಪಾತಳಿಯ ಪಾತ್ರಗಳು ತಮ್ಮ ನಿಲುವು, ಬಣ್ಣಗಳೊಂದಿಗೆ ತಿರುಗುತ್ತಾ ಕೆಲವು ಸಾರಿ ಬಿಟ್ಟು ಸೇರಿ ಮತ್ತೆ ಬಿಡುತ್ತಾ, ಜೊತೆಗೆ ಇರಬೇಕಾದ ಅವಕಾಶ, ಆಕಸ್ಮಿಕಗಳ ಸಮೀಕರಣ 'ರೂಬಿಕ್ಸ್ ಕ್ಯೂಬ್’. ಬದುಕಿನ ಸುಖ ದುಃಖಗಳ ಹೊಸ ನಾಟಕೀಯ ಪ್ರತಿಮೆ. ಕೋವಿಡ್ ಕಾಯಿಲೆ ವೈಯುಕ್ತಿಕ, ಕೌಟುಂಬಿಕ, ಸಾಮೂಹಿಕ, ಸಾಮಾಜಿಕ ಮತ್ತು ಆರ್ಥಿಕ ನೆಲೆಗಳಲ್ಲಿ ಸೃಷ್ಟಿಸಿರುವ ಪರಿಸ್ಥಿತಿಯನ್ನು ಹಲವು ಸ್ತರಗಳಲ್ಲಿ ಬಿತ್ತರಿಸುವ ನಾಟಕ ಆಯಾಮ. ಸಾಮಾಜಿಕ ಅಂತರ, ಮಾಸ್ಕ್, ಆಕ್ಸಿಜನ್, ಸಾವು,ಸ್ಮಶಾನ ಇತ್ಯಾದಿ ಪದಬಂಧಗಳ ಹಂಗುತೊರೆದು ನಮ್ಮೊಳಗೊಂದು ನಿರೂಪಣೆಯನ್ನು ಹುಟ್ಟಿಸುವ ಜೀವಂತ ನಾಟಕ 'ಆಯಾಮ'. ರೈಲ್ವೆ ನಿಲ್ದಾಣದ ಪಾಯಖಾನೆ. ಅದನ್ನು ಸ್ವಚ್ಛಗೊಳಿಸುವ ರಾಮಾಂಜಿ, ಕನಕ ಉಪಯೋಗ ಪಡೆಯುವ ಮತ್ತು ಸುತ್ತ ಬದುಕುವ ಜನ, ಸ್ವಚ್ಛತೆ, ಸಹನೆ, ಸಹಬದುಕು, ಸಂಕಟಗಳ ಮಹಾಮನೆ. ಸಾರ್ವಜನಿಕ ಪಾಯಖಾನೆ ಅ೦ದರೆ ಕೊಳಕು, ಹೀನ, ಬಡತನ ಇತ್ಯಾದಿ ಪೂರ್ವಾಗ್ರಹಕ್ಕೆ ವಿರುದ್ಧವಾದ ಮಾನವೀಯ ಮುಖಗಳ ಅನಾವರಣ. 'ಕ್ಲೀನ್ ಆಂಡ್ ಕ್ಲಿಯರ್ ಪಾಯಖಾನೆ'. ಬೇಲೂರು ರಘುನಂದನರ ನಾಟಕಗಳು, ಜೀವನದ ಸಾಮಾಜಿಕ ಕಾಳಜಿಯ ಸಂಶೋಧಕ ಮತ್ತು ಸೂಕ್ಷ್ಮ ಗ್ರಹಿಕೆಗಳ ಮನಶಾಸ್ತ್ರೀಯ ಆಯಾಮಗಳಿರುವ ಕವಿ ಸೃಷ್ಟಿ, ಸಂಕಟ ಮತ್ತು ಸಾಂತ್ವನ ಬೇಲೂರರ ನಾಟಕಗಳ ಅಂತಃಸತ್ವ, ಈ ನಾಟಕಗಳು ನಮ್ಮ ಪ್ರಸ್ತುತ ಬದುಕಿನ ಕಾಲ ಜ್ಞಾನದ ಪರಿಧಿಯನ್ನು ವಿಸ್ತರಿಸುವ ಪ್ರತಿಫಲಕಗಳು’ ಎಂಬುದಾಗಿ ಹೇಳಿದ್ದಾರೆ.
©2024 Book Brahma Private Limited.