ಭೂಮಿ ಮಾರಾಟಕ್ಕಿಲ್ಲ ಎಂಬುದು ಲೇಖಕ ಲಿಂಗರಾಜ ರಾಮಾಪುರ ಅವರು ರಚಿಸಿದ ನಾಟಕ. ನಾಟಕಗಳ ಮೂಲಕ ವೈಜ್ಞಾನಿಕ ವೈಚಾರಿಕ ಅರಿವು ಮೂಡಿಸುವ ಭಾಗವಾಗಿ ‘ವಿಜ್ಞಾನ ನಾಟಕಗಳು’ ಕೃತಿ ಪ್ರಕಟಗೊಂಡಿದೆ. ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಾಧಾರಿತ ಹಾಗೂ ಪಠ್ಯ ಪೋಷಕವಾಗುವ 3 ನಾಟಕಗಳು ಈ ಕೃತಿಯಲ್ಲಿವೆ.
ವಿಜ್ಞಾನವು ಕೇವಲ ಮಾಹಿತಿಗಳ, ಸಂಗತಿಗಳ ಸೂತ್ರ ಸಿದ್ಧಾಂತಗಳ ಕತೆಯಲ್ಲ. ನಾನಾ ನಮೂನೆಯ ಉಪಕರಣಗಳ ಪ್ರದರ್ಶನವೂ ಅಲ್ಲ. ಇದು ವ್ಯವಸ್ಥಿತವಾಗಿ, ತರ್ಕಬದ್ಧವಾಗಿ, ಸಕಾರಣವಾಗಿ ಪ್ರಶ್ನೆಗಳನ್ನು ಕೇಳಿಸಿಕೊಂಡು ಉತ್ತರಗಳನ್ನು ಕಂಡುಕೊಳ್ಳುವ ಮಾರ್ಗವಾಗಿದೆ. ಈ ಕಾರಣದಿಂದಲೇ ವಿಜ್ಞಾನ ಕಲ್ಪನೆಯಲ್ಲಿ ಮೊಳೆತು, ಶೋಧಕನ ದೃಷ್ಟಿಯಲ್ಲಿ ಸಂಚಲನಗೊಂಡು, ಪ್ರಯೋಗಗಳ ಮೂಲಕ ಸಾಕಾರಗೊಳ್ಳುವಂತಾಗಿ ಈ ಮೂಲಕ ವಿಜ್ಞಾನವು ಬದುಕಿನ ಒಂದು ಭಾಗವಾಗಿ ಜೀವನ ಶೈಲಿಯಾಗಿ ರೂಪುಗೊಳ್ಳುವಂತಾಗಬೇಕು. ಈ ರೀತಿ ಅನುಭವಪೂರ್ಣ ಕಲಿಕೆಯಾಗಬೇಕಾದರೆ ರಂಗಭೂಮಿಯ ನೆರವು ಅತ್ಯಗತ್ಯ.
ವಿಜ್ಞಾನಕ್ಕೆ ರಂಗಭೂಮಿಯ ಸ್ಪರ್ಶ ನೀಡದೇ ಹೋದರೆ ಕಲಿಕೆ ನೀರಸ. ವಿಜ್ಞಾನವು ಇಂದ್ರಜಾಲಕನ ಹಸ್ತದಿಂದ ಧುತ್ತೆಂದು ಪ್ರತ್ಯಕ್ಷವಾಗುವ ಸಿದ್ಧ ವಸ್ತುವೂ ಅಲ್ಲ. ಸಾವಿರಾರು ವರ್ಷಗಳ ತಾರ್ಕಿಕ ಚಿಂತನೆ, ಪ್ರಯೋಗಶೀಲತೆಯಿಂದ ಒಡಮೂಡಿ ವಿಕಾಸಗೊಳ್ಳುತ್ತ ಬಂದಿರುವ ಬೌದ್ಧಿಕ ಪ್ರಕ್ರಿಯೆ. ಪ್ರಸ್ತುತ ಈ ಕ್ರಿಯೆಯನ್ನು ಬೋಧನೆ ಹಾಗ ಪ್ರಾಯೋಗಿಕ ವಿಧಾನದಿಂದ ಬೋಧಿಸಲಾಗುತ್ತಿದೆ. ಈ ವಿಧಾನ ಪರಿಣಾಮಕಾರಿಯಾದ ಮಾರ್ಗವಾದರೂ ರಂಜನೀಯವಾಗಿ, ಸಾಮಾಜೀಕರಣಗೊಳಿಸಿ, ನಿತ್ಯ ಬದುಕಿನ ಭಾಗವಾಗಿಸಿ, ಚಾರಿತ್ರಿಕ ಅಂಶಗಳಿಂದೊಡಗೂಡಿ, ಕುತೂಹಲದಿಂದ ಕಲಿಯುವಂತಾಗಲು ನಾಟಕ ಮಾಧ್ಯಮ ಅತ್ಯಂತ ಪರಿಣಾಮಕಾರಿಯಾದುದು.
ಇದನ್ನು ಮನಗಂಡೇ ಸಾ.ಶಿ.ಇಲಾಖೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯವು ಪ್ರತಿ ವರ್ಷ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ನಾಟಕ ಸ್ಪರ್ಧೆಯನ್ನು ಸಂಘಟಿಸುತ್ತ ಪ್ರೋತ್ಸಾಹಿಸುತ್ತ ಬಂದಿದೆ. ಈ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವಾಗಲೆಲ್ಲ ಶಿಕ್ಷಕರು ವಿಜ್ಞಾನ ನಾಟಕಗಳ ಹುಡುಕಾಟದಲ್ಲಿ ತೊಡಗಿ ಸೂಕ್ತ ನಾಟಕ ಸಿಗದೇ ಪರದಾಡುವುದನ್ನು ಕಂಡಿದ್ದೇವೆ. ಈ ಕೊರತೆಯನ್ನು ನೀಗಿಸುವಲ್ಲಿ ‘ವಿಜ್ಞಾನ ನಾಟಕಗಳು’ ಕೃತಿ ಯಶಸ್ವಿಯಾಗುತ್ತದೆ. ನಾಟಕಗಳ ಮೂಲಕ ವೈಜ್ಞಾನಿಕ ವೈಚಾರಿಕ ಅರಿವು ಮೂಡಿಸುವ ಭಾಗವಾಗಿ ‘ವಿಜ್ಞಾನ ನಾಟಕಗಳು’ ಕೃತಿ ಪ್ರಕಟಗೊಂಡಿದೆ. ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಾಧಾರಿತ ಹಾಗೂ ಪಠ್ಯ ಪೋಷಕವಾಗುವ 3 ನಾಟಕಗಳು ಈ ಕೃತಿಯಲ್ಲಿವೆ.
-ಬಿ.ಎಸ್.ಸೊಪ್ಪಿನ್
ವಿಜ್ಞಾನ ಚಳವಳಿಗಾರರು, ಹುಬ್ಬಳ್ಳಿ
©2024 Book Brahma Private Limited.