‘ಅಸ್ತಿತ್ವ’ ಕುಮಾರ ಬೇಂದ್ರೆ ಅವರ ನಾಟಕ. ಕಥೆ, ಕಾದಂಬರಿ, ಕವಿತೆಗಳ ಮೂಲಕ ಈಗಾಗಲೇ ಜನಮಾನಸದಲ್ಲಿ ಉಳಿದ ಕುಮಾರ ಬೇಂದ್ರೆ ಅವರು ನಾಟಕಕಾರ ಹಾಗೂ ಪತ್ರಕರ್ತರೂ ಹೌದು. ಅವರ ಮೊದಲ ನಾಟಕ ಕೃತಿ 'ಋಣಕ್ಕೆ ರಾಜ್ಯ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಲಭಿಸಿದ್ದು, ಟಿಲಿಚಿತ್ರವಾಗಿ ಕೂಡ ಪ್ರದರ್ಶನ ಕಂಡು ಜನಮನ್ನಣೆ ಗಳಿಸಿದೆ. ಇಲ್ಲಿರುವ "ಅಸ್ತಿತ್ವ ಹಾಗೂ 'ಹಸಿವು' ನಾಟಕಗಳ ವಸ್ತು ಗಂಭೀರವಾದವು. ನಿಸರ್ಗ ಮನುಷ್ಯನಿಗೆ ಏನೆಲ್ಲ ಕೊಟ್ಟಿದೆ. ಆದರೆ ಮನುಜ ಅದನ್ನು ಸಹಜ-ಸರಳ ಸ್ವರೂಪದಲ್ಲಿ ಅನುಭವಿಸದೇ ನಾಗರಿಕ ಸಮಾಜವೆಂಬ ಮೋಹ ಸೃಷ್ಟಿಸಿಕೊಂಡು, ವರ್ಣ-ವರ್ಗ, ಜಾತಿ-ಮತ, ಅಧಿಕಾರ-ಅಂಹಕಾರ ಹಾಗೂ ರಾಕ್ಷಸಿ ಪ್ರವೃತ್ತಿಗಳನ್ನೇ ವೈಭವೀಕರಿಸುತ್ತ ತನ್ನ ಮೂಲ ಸ್ವರೂಪವನ್ನೇ ಮರೆತಿದಾನೆ.
ಸಮಾಜದಲ್ಲಿ ಅಸಮಾನತೆ, ಬಡತನ, ಸಂಘರ್ಷ, ಅಶಾಂತಿ ಸೃಷ್ಟಿಸಿ ಅದರಿಂದ ಹೊರಬರಲಾರದೇ ಹಿಂಸೆ ಅನುಭವಿಸುತ್ತಿದ್ದಾನೆ. ಇಂತಹ ವ್ಯವಸ್ಥೆಯಲ್ಲಿ ಒಬ್ಬ ಅಸಹಾಯಕ ವ್ಯಕ್ತಿ ಒಂದು ಕುಟುಂಬ ತನ್ನ ಅಸ್ತಿತ್ವಕ್ಕಾಗಿ ಹಂಬಲಿಸುವ ಪರಿ ಇಲ್ಲಿ ದಾಖಲಾಗಿದೆ. ಇಂತಹ ವಿಷಮ ವ್ಯವಸ್ಥೆಯ ವಿರುದ್ಧ ರೋಷವಿದೆ, ಪ್ರತಿಭಟನೆಯಿದೆ, ವಿಷಾದವಿದೆ. ಆದರೆ ವಾಸ್ತವದಲ್ಲಿ ಪ್ರತಿಯೊಂದು ಜೀವಿ ಇರುವಷ್ಟು ಕಾಲ ತನ್ನ ಅಸ್ತಿತ್ವಕ್ಕಾಗಿಯೇ ಹೋರಾಟ ಮಾಡುವುದು ಎಂಬ ದನಿಯನ್ನು ಈ ಕೃತಿಯು ನೀಡುತ್ತದೆ. ಅದನ್ನು ಲೇಖಕರು ಸಹಜ ದೃಶ್ಯ ಹಾಗೂ ಸಂಭಾಷಣೆ ಮೂಲಕ ಕಟ್ಟಿಕೊಟ್ಟಿದಾರೆ, ರಂಗ ಪ್ರಯೋಗಕ್ಕೆ ಹೊಸ ಪಠ್ಯ ಹುಡುಕುತ್ತಿರುವವರಿಗೆ ಇದು ಸೂಕ್ತ ಕೃತಿ.
©2024 Book Brahma Private Limited.