ಡಾ. ಚಂದ್ರಶೇಖರ ಕಂಬಾರರ ಅಸಂಗತ ನಾಟಕ 'ಚಾಳೇಶ'. ಈ ನಾಟಕದಲ್ಲಿ ಬಾಡಿಗೆ ಮನೆಯಲ್ಲಿರುವ ಗೋವಿಂದ ಬಾಡಿಗೆ ಕೊಡಲಾರದ ಸ್ಥಿತಿಯ ಚಿತ್ರಣ ನೀಡಲಾಗಿದೆ. ಗೋವಿಂದನ ಕಡುಬಡತನವು ಈ ನಾಟಕದಲ್ಲಿನ ಘಟನೆಗಳಿಗೆ ಕಾರಣವಾಗಿ ವಾಸ್ತವತೆ ಅರಿವು ಮೂಡಿಸುತ್ತದೆ. ಬಡತನದಿಂದ ಪಾರಾಗುವ ಗೋವಿಂದನ ಪ್ರಯತ್ನ ಸಾಂಕೇತಿಕ ಆಯಾಮ ಪಡೆದು ನಾಟಕಕ್ಕೆ ಅಸಂಗತತೆಯ ರೂಪ ನೀಡುತ್ತದೆ.
ನಾಟಕದ ಕತೆ ಹೀಗಿದೆ-
ಪ್ರಸಿದ್ದ ಗುಬ್ಬಿ ನಾಟಕ ಕಂಪನಿಯಲ್ಲಿ ನಟವಾಗಿದ್ದ ಗೋವಿಂದನು ಜೀವನ ನಿರ್ವಹಣೆಗಾಗಿ ಸಾಲದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಸಾಲಗಾರರು ತೆಗೆದುಕೊಂಡಿರುವ ಹಣವನ್ನು ಮರಳಿಸುವಂತೆ ಒತ್ತಡ ಹೇರುತ್ತಾರೆ. ಸಾಲಗಾರರ ಕಾಟ ತಾಳಲಾರದೆ ಅವರಿಂದ ಪಾರಾಗಲು ಹಾಗೂ ಅವರಿಗೆ ತನ್ನ ಗುರುತು ಸಿಗದಂತೆ ಕಾಣಿಸುವುದಕ್ಕಾಗಿ ಒಂದು ಕಪ್ಪು ಬಣ್ಣದ ಚಾಳೀಸನ್ನು ಧರಿಸುತ್ತಾನೆ. ನಾಟಕ ಆರಂಭದಲ್ಲಿಯೇ ಗೋವಿಂದ ಮತ್ತು ಆತನ ಹೆಂಡತಿಯಾದ ಕಾಶೀಬಾಯಿ ಕಪ್ಪು ಬಣ್ಣದ ಚಾಳೀಸುಗಳನ್ನು ಧರಿಸಿಕೊಂಡ ಸಂಭಾಷಣೆ ಮಾಡುತ್ತ ಕುಳಿತಿರುತ್ತಾರೆ. ಗೋವಿಂದ ತನ್ನ ಪತ್ನಿಯಾದ ಕಾಶಿಯನ್ನು 'ದೇವಿ' ಎಂದೂ, ಅವಳು ಅವನನ್ನು 'ಆರ್ಯಪುತ್ರ' ಎಂದು
ಕರೆಯುತ್ತಾಳೆ.
ಗೋವಿಂದ ಕನಸಿನ ಲೋಕದಲ್ಲಿ ವಿಹಾರ ಮಾಡುತ್ತಿರುವಾಗ ಮನೆಯ ಮಾಲೀಕನಾದ ನಂಜಯ್ಯ ಆಗಮಿಸುತ್ತಾನೆ. ಬೇಗನೆ ಮನೆಯ ಬಾಡಿಗೆ ಕೊಡು ಇಲ್ಲ, ತಕ್ಷಣ ಮನೆಯನ್ನು ಖಾಲಿ ಮಾಡಬೇಕು ಎಂದು ಹೇಳುತ್ತಾನೆ. ನಟನೆಯಲ್ಲಿ ನುರಿತ ಗೋವಿಂದ ತನ್ನ ಬಿಕ್ಕಟ್ಟಿನಿಂದ ಪಾರಾಗುವುದಕ್ಕಾಗಿ ಸುಳ್ಳಿನ ಕಂತೆಯನ್ನೇ ಪ್ರಾರಂಭಿಸುತ್ತಾನೆ. ಐದಾರು ತಿಂಗಳುಗಳಿಂದ ಬಾಡಿಗೆ ಕೊಡಲಾಗದ ಗೋವಿಂದನು ನಂಜಯ್ಯನ ಮನೆಯನ್ನೇ ಖರೀದಿಸುವ ಮಾತಾಡುತ್ತಾನೆ.
ಗೋವಿಂದನ ಮಾತುಗಳಿಗೆ ಮಾಲಿಕ ನಂಜಯ್ಯ ಸೊಪ್ಪು ಹಾಕುವುದಿಲ್ಲ. ಗೋವಿಂದನು ಮತ್ತೊಂದು ಸುಳ್ಳಿನ ಕಂತೆಯನ್ನು ಹೆಣೆಯುತ್ತ ತನ್ನ ಮಗನೊಬ್ಬ ಮಂತ್ರಿಯಾಗಿದ್ದಾನೆ. ಅವನು ಇನ್ನೊಂದು ಗಂಟೆಯಲ್ಲಿ ಹೆಂಡತಿ ಮತ್ತು ಡ್ರೈವರ್ ಸಮೇತ ಬರುತ್ತಿದ್ದಾನೆ ಎಂದು ಹೇಳುತ್ತಾನೆ. ಆದರೆ ಅವನ ಹೇಳಿದ ಆ ಸುಳ್ಳೇ ನಿಜವಾಗಿ ಪರಿಣಮಿಸುತ್ತದೆ. ಹತ್ತೇ ನಿಮಿಷಗಳಲ್ಲಿ ಆತನ ಮಗನೆಂದು ಹೇಳುತ್ತ ಶಂಕರ ಸೊಸೆಯಾದ ಸರಸೂ ಮತ್ತು ಡ್ರೈವರ್‌ನಾಗಿರುವ ಹುಶಪ್ಪ ಎಂಬ ಮೂವರು ಮನೆಗೆ ಬರುತ್ತಾರೆ. ತಾತ್ಕಾಲಿಕವಾಗಿ ಗೋವಿಂದನನ್ನು ನಂಜಯ್ಯನಿಂದ ಪಾರು ಮಾಡುತ್ತಾರೆ.
ಗೋವಿಂದನು ನಂಜಯ್ಯನ ಕಾಟದಿಂದ ತಾತ್ಕಾಲಿವಾಗಿ ಪಾರಾದರೂ, ತಾನೇ ಹೆಣೆದ ಜಾಲದಲ್ಲಿ ಬೀಳುತ್ತಾನೆ. ಶಂಕರ, ಸರಸೂ ಮತ್ತು ಹುಶಪ್ಪ ಈ ಮೂವರು ಗೋವಿಂದನ ಮಗ (ಮಂತ್ರಿ) ಸೊಸೆ ಮತ್ತು ಸೇವಕರೆಂದು ನಟಿಸುತ್ತ ಆತನ ಸುಳ್ಳನ್ನೇ ಸತ್ಯವಾಗಿಸುತ್ತಾರೆ. ಆಯ್ತು ಇನ್ನು ನಮ್ಮ ನಿಮ್ಮ ಪರಿಚಯವಾಗಲಿ ಎಂದು ಗೋವಿಂದ ಕೇಳಿದರೂ ಬಂದಿರುವ ಮೂವರು ತಮ್ಮ ಗುಟ್ಟು ಬಿಟ್ಟು ಕೊಡುವುದಿಲ್ಲ. ಅವರು ತನಗೇನೂ ಸಂಬಂಧವಿಲ್ಲ ಎಂದು ಗೋವಿಂದ ಹೇಳಿದರೂ ಅವರು ಮನೆಯಿಂದ ಕದಲುವುದಿಲ್ಲ. ಮಾತ್ರವಲ್ಲ ಅವರು ಗೋವಿಂದನ ಪಾಲಿನ ಯಮಸ್ವರೂಪಿಗಳಾಗುತ್ತಾರೆ. ಗೋವಿಂದನ ಮನೆಗೆ ಬಂದಿರುವ ಮೂವರು, ಆ ಮನೆಗೆ ಮಾಲೀಕರಾಗಿ ಕೊನೆಗೆ ಆತನನ್ನೇ ಕೊಲ್ಲಲು ಪ್ರಯತ್ನಿಸುತ್ತಾರೆ. ಅವನನ್ನು ಹುಗಿಯಲು ಸಮಾಧಿಯನ್ನೂ ಅಗೆಯುತ್ತಾರೆ. ಆದರೆ ಗೋವಿಂದನು ಈ ಅಸಂಗತ ಅನುಭವದಿಂದ ಗಟ್ಟಿಯಾಗುತ್ತ ನಡೆಯುತ್ತಾನೆ. ತನ್ನ ಗಂಡ ಮೂವರ ಕೈಗೆ ಸಿಕ್ಕು ಸತ್ತನೆಂದು ಭ್ರಮಿಸಿ ಕಾಶಿ ಸಾಯುತ್ತಾಳೆ. ಕೊನೆಗೆ ಗೋವಿಂದನು ಒಬ್ಬನೇ ಅವರ ಕೈಯಲ್ಲಿ ಸಿಕ್ಕು ಅಸಹಾಯಕನಾಗುತ್ತಾನೆ. ಬಂದವರ ನಾಟಕವೆಲ್ಲ ಅತಿಯಾದಂತೆ ಗೋವಿಂದನು ನಾಟಕ ಆಡುವುದನ್ನು ನಿಲ್ಲಿಸಿ ತನ್ನ ಸುಳ್ಳಿನ ಜಾಲದಿಂದ ಪಾರಾಗಿ ಬಿಡುತ್ತಾನೆ. ತನ್ನ ಹೆಂಡತಿ ಕಾಶಿಯ ಸಾವಿನಿಂದ ಸಾಕಷ್ಟು ದುಃಖವಾಗಿದ್ದರೂ ಅದನ್ನು ಸಹಿಸಿಕೊಳ್ಳುತ್ತಾನೆ. ಪಾತ್ರಧಾರಿಯಾದ ಅವನು ಮತ್ತೆ ನಟನಾಗಿ ಅಸಂಗತ ಸಾಂಕೇತಿಕ ಸ್ತರದಿಂದ ಮರಳಿ ವಾಸ್ತವ ಜಗತ್ತಿಗೆ ಬರುತ್ತಾನೆ. ಗೋವಿಂದನ ನಟನಾ ಕೌಶಲ್ಯ ಆತನಿಗೆ ಬಡತನದಿಂದಾಗುವ ತೊಂದರೆ ಮತ್ತು ಅಪಮಾನಗಳ ವಿರುದ್ಧ ಸಿಡಿದೇಳುವ ಮತ್ತು ಶ್ರೀಮಂತನಾಗುವ ಕನಸಿನ ಅಭಿನಯಕ್ಕೆ ಪೂರಕವಾಗುತ್ತದೆ.
©2024 Book Brahma Private Limited.