ಜನಪದರ ನಂಬಿಕೆಯ ಜೋಕುಮಾರನ 'ಮಿಥ್'ನ್ನು 'ಉಳುವವನೇ ಹೊಲದೊಡೆಯ' ಎಂಬ ಸಮಾಜವಾದಿ ತತ್ವ ಆಧರಿಸಿ ನಾಟಕಕ್ಕೆ ಅಳವಡಿಸಲಾಗಿದೆ. 'ಪೌರುಷವಂತನಿಗೆ ಹೆಣ್ಣನ್ನು ಒಲಿಸಿಕೊಂಡು ಆಳುವ ಸಹಜ ಅಧಿಕಾರವಿದೆ' ಎಂಬ ಸೂತ್ರವೂ ಇರುವಂತೆ ಕಂಬಾರರು ನೋಡಿಕೊಂಡಿದ್ದಾರೆ. ಫಲವತ್ತತೆಯ ಸಂಕೇತವನ್ನು ಒಳಗೊಂಡ ಕತೆಯಿದು.
ಜೋಕುಮಾರ ಸ್ವಾಮಿಯ ಪೂಜೆಯೊಂದಿಗೆ ನಾಟಕ ಪ್ರಾರಂಭವಾಗುತ್ತದೆ. ಜೋಕುಮಾರ ಸ್ವಾಮಿಯನ್ನು ವರ್ಣಿಸುವ ಸೂತ್ರಧಾರ, ಹುಣ್ಣಿಮೆ ದಿನ ಸ್ವಾಮಿಯಪೂಜೆ ಮಾಡಿ, ಪಲ್ಯ ಮಾಡಿ ಗಂಡಂದಿರುಗಳಿಗೆ ತಿನ್ನಿಸಿದರೆ ಮಕ್ಕಳಾಗುತ್ತವೆ. ಮದುವೆಯಾಗದ ಕನ್ನೆಯರ ಮದುವೆಯಾಗುತ್ತದೆ. ಗಿರಾಕಿಗಳಿಲ್ಲದೆ ಪರದಾಡುತ್ತಿರುವ ಸೂಳೆಯರಿಗೆ ಗಿರಾಕಿಗಳು ದೊರೆಯುತ್ತವೆ ಎಂದು ಹೇಳುತ್ತಾನೆ. ಅದೇ ಸಮಯಕ್ಕೆ ಹೊಲೆಯರ ಸೂಳಿ ಶಾರಿ ಬಂದು ಜೋಕುಮಾರಸ್ವಾಮಿಯನ್ನು ತನ್ನ ಮನೆಗೆ ತೆಗೆದುಕೊಂಡು ಹೋಗುತ್ತಾಳೆ.
ಊರ ಗೌಡ ತನ್ನ ಬಂದೂಕಿನ ಸಹಾಯದಿಂದ ಅಧಿಕಾರ, ಹೆಣ್ಣು ಮತ್ತು ಭೂಮಿ ಆಳಲು ಯತ್ನಿಸುತ್ತಾನೆ. ಊರಿನಲ್ಲಿ ನಿಜವಾದ ಪುರುಷತ್ವದ ಸಂಕೇತವಾಗಿರುವ ಬಸಣ್ಣ ಬಂದು ಗೌಡನನ್ನು ಎದುರಿಸಿ ನಿಲ್ಲುತ್ತಾನೆ. ಬಸಣ್ಣ ಮತ್ತು ಗೌಡನ ನಡುವೆ ಹೊಲದ ಮಾಲೀಕತ್ವದ ವಿಷಯದಲ್ಲಿ ತಕರಾರು ಉಂಟಾಗುತ್ತದೆ. ಮೊದಲ ಸಲ ಬಸಣ್ಣ ಗೌಡನ ಆಳುಗಳನ್ನೆಲ್ಲ ಒದ್ದು ಓಡಿಸುತ್ತಾನೆ. ಗೌಡನ ಪುಂಡಾಟಿಕೆ ಮತ್ತು ಪೊಳ್ಳುತನದ ಬಗ್ಗೆ ಗೌಡ್ತಿಗೆ ಹೇಳುವ ಶಾರಿಯು ತಾಯ್ತನಕ್ಕಾಗಿ ಹಂಬಲಿಸುವ ಗೌಡ್ತಿಯ ಆತಂಕ ಹೆಚ್ಚಲು ಕಾರಣವಾಗುತ್ತಾಳೆ. ಗಂಡ ಹೊಲದಲ್ಲಿ ಮಲಗಿರುವನೆಂದು ಭಾವಿಸಿ ಬರುವ ಗೌಡ್ತಿ ಗುಡಿಸಲಲ್ಲಿ ಮಲಗಿರುವ ಬಸಣ್ಣನಿಗೆ ಸ್ವಾಮಿಯ ಆಹಾರವನ್ನು ಉಣಬಡಿಸುತ್ತಾಳೆ. ಅವನನ್ನು ಸೇರಿ ಗರ್ಭ ಧರಿಸುತ್ತಾಳೆ. ಗೌಡ್ತಿ ಗರ್ಭ ಧರಿಸಿರುವ ಸುದ್ದಿ ಆಳು ಗುರ್‍ಯಾನಿಂದ ಗೌಡನಿಗೆ ತಿಳಿದು ತನ್ನ ಐದುನೂರು ಜನ ಪುಂಡರೊಡನೆ ಬಂದು ಬಸಣ್ಣನನ್ನು ಕೊಲ್ಲುತ್ತಾನೆ.
©2024 Book Brahma Private Limited.